ಭಾರತದ ದೀರ್ಘಾವಧಿ ಮುಖ್ಯಮಂತ್ರಿಗಳು; ನವೀನ್ ಪಟ್ನಾಯಕ್ ಹೊಸ ಸಾಧನೆ!
ನವದೆಹಲಿ, ಜುಲೈ 23; ಭಾರತದ ದೀರ್ಘಾವಧಿ ಮುಖ್ಯಮಂತ್ರಿಗಳ ಪಟ್ಟಿ ಸೇರಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೊಸ ಸಾಧನೆ ಮಾಡಿದರು. 5ನೇ ಬಾರಿಗೆ ಅವರು ಒಡಿಶಾ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
76 ವರ್ಷದ ನವೀನ್ ಪಟ್ನಾಯಕ್ ಶನಿವಾರ ಮುಖ್ಯಮಂತ್ರಿಯಾಗಿ 23 ವರ್ಷ ಮತ್ತು 139 ದಿನಗಳನ್ನು ಪೂರೈಸಿದರು. ಈ ಮೂಲಕ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರ ದಾಖಲೆಯನ್ನು ಮುರಿದರು.

ಒಂದು ರಾಜ್ಯದ ಮಖ್ಯಮಂತ್ರಿಯಾಗಿ ಜ್ಯೋತಿ ಬಸು 23 ವರ್ಷ ಮತ್ತು 137 ದಿನಗಳ ಕಾಲ ಕಾರ್ಯ ನಿರ್ವಹಣೆ ಮಾಡಿದ್ದರು. ಶನಿವಾರ ನವೀನ್ ಪಟ್ನಾಯಕ್ 23 ವರ್ಷ ಮತ್ತು 139 ದಿನಗಳನ್ನು ಪೂರ್ಣಗೊಳಿಸಿದರು. ಮೇ 5, 2000ದಲ್ಲಿ ಪಟ್ನಾಯಕ್ ಒಡಿಶಾ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಜ್ಯೋತಿ ಬಸು ದಾಖಲೆ ಮುರಿದರು; ಜೂನ್ 21, 1977 ರಿಂದ ನವೆಂಬರ್ 5, 2000 ತನಕ ಜ್ಯೋತಿ ಬಸು ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ಈಗ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ದಾಖಲೆ ಮುರಿದಿದ್ದಾರೆ.
ಭಾರತದ ಅತಿ ಧೀರ್ಘಾವಧಿ ಮುಖ್ಯಮಂತ್ರಿ ದಾಖಲೆ ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್‌ಲಿಂಗ್ ಹೆಸರಿನಲ್ಲಿದೆ. 25 ವರ್ಷ ಅವರು ರಾಜ್ಯವೊಂದರ ಮುಖ್ಯಮಂತ್ರಿಯಾಗಿದ್ದರು. ಡಿಸೆಂಬರ್ 12, 1994 ರಿಂದ ಮೇ 26, 2019ರ ತನಕ ಅವರು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ 1997ರಲ್ಲಿ ತಂದೆ ಬಿಜು ಪಟ್ನಾಯಕ್ ನಿಧನದ ಬಳಿಕ ರಾಜಕೀಯಕ್ಕೆ ಬಂದರು. ಡಿಸೆಂಬರ್ 26, 1997ರಲ್ಲಿ ಅವರು ಹೊಸ ಪಕ್ಷ ಸ್ಥಾಪನೆ ಮಾಡಿದರು. 1998ರ ರಿಂದ 2000ರದ ತನಕ ಪಟ್ನಾಯಕ್ ಕೇಂದ್ರದ ಉಕ್ಕು ಮತ್ತು ಗಣಿ ಖಾತೆ ಸಚಿವರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. 1997 ರಿಂದ 2000ರದ ತನಕ ಅವರು ಸಂಸತ್ ಸದಸ್ಯರಾಗಿದ್ದರು
ನವೀನ್ ಪಟ್ನಾಯಕ್‌ರನ್ನು ಆರಂಭದ ದಿನಗಳಲ್ಲಿ ಆಕಸ್ಮಿಕ ರಾಜಕಾರಣಿ ಎಂದು ಟೀಕಿಸಿದವರು ಇದ್ದಾರೆ. ಬಿಜು ಪಟ್ನಾಯಕ್ ಮೃತಪಟ್ಟಾಗ ಅವರ ವಿರೋಧಿಗಳು, ಹಿತೈಷಿಗಳು ನವೀನ್ ಪಟ್ನಾಯಕ್ ಅನನುಭವಿ ಎಂದು ಅವರನ್ನು ತಿರಸ್ಕರಿಸಿದರು. ಆದರೆ ಬಿಜೆಡಿ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಿತು.
1997ರಲ್ಲಿ ತಂದೆ ನಿಧನದ ಬಳಿಕ ರಾಜಕೀಯಕ್ಕೆ ಬಂದ ನವೀನ್ ಪಟ್ನಾಯಕ್ ಅಸ್ಕಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾದರು. ರಾಜಕೀಯವನ್ನು ಬೇಗ ಕಲಿತರು. ಜನತಾದಳದಿಂದ ಹೊರಬಂದು ಬಿಜೆಪಿ ಜೊತೆ ಸೇರಿ ಬಿಜು ಜನತಾದಳ ಆರಂಭಿಸಿದರು.
ಲೋಕಸಭೆ ಚುನಾವಣೆಯಲ್ಲಿ ಅವರು ಬಿಜೆಪಿ ಜೊತೆ ನಿಂತರು. ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಉಕ್ಕು ಮತ್ತು ಗಣಿ ಖಾತೆ ಸಚಿವರಾಗಿ ಕೆಲಸ ಮಾಡಿದರು. ಒಡಿಶಾದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸಿದ ಆಡಳಿತದಲ್ಲಿ ಉಂಟಾದ ವಿವಾದಗಳು ನವೀನ್ ಪಟ್ನಾಯಕ್ ರಾಜ್ಯದ ಅಧಿಕಾರ ಹಿಡಿಯುವ ಹಾದಿಯನ್ನು ಸಹ ಸುಗಮಗೊಳಿಸಿದವು.
ಒಡಿಶಾದಲ್ಲಿ ಆಡಳಿತ ನಡೆಸುತ್ತಿರುವ ಬಿಜು ಜನತಾದಳ (ಬಿಜೆಡಿ) ಅಧ್ಯಕ್ಷರಾಗಿ ನವೀನ್ ಪಟ್ನಾಯಕ್ ಸತತ ಎಂಟನೇ ಬಾರಿಗೆ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನದ ಚುನಾವಣೆಗೆ ಅವರು ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದು, ಪಕ್ಷ ಅವಿರೋಧವಾಗಿ ಅವರನ್ನು ಆಯ್ಕೆ ಮಾಡಿದೆ.
2019ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಜಯಗಳಿಸಿದ ಬಳಿಕ ನವೀನ್ ಪಟ್ನಾಯಕ್ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡರು. ಒಮ್ಮೆ ಎನ್‌ಡಿಎ ಮೈತ್ರಿಕೂಟದಲ್ಲಿದ್ದ ಅವರು ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ, ಯುಪಿಎ ಮೈತ್ರಿಕೂಟದಿಂದ ಸಮಾನ ಅಂತರ ಕಾಯ್ದುಕೊಂಡಿದ್ದರು.
ಡೂನ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿರುವ ನವೀನ್ ಪಟ್ನಾಯಕ್ ಬಹುಕಾಲ ವಿದೇಶದಲ್ಲಿದ್ದರು. ತಂದೆ ನಿಧನರಾದ ಬಳಿಕ ರಾಜ್ಯಕ್ಕೆ ಬಂದು ರಾಜಕೀಯ ಆರಂಭಿಸಿದ ಅವರು 5ನೇ ಬಾರಿಗೆ ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸುತ್ತಿದ್ದಾರೆ.












Click it and Unblock the Notifications