ವಾಜಪೇಯಿಗೆ ಭಾರತ ರತ್ನ ನೀಡಲು ಬಿಜೆಪಿ ಆಗ್ರಹ
ನವದೆಹಲಿ, ನ.17: ವಿಶ್ವಶ್ರೇಷ್ಠ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಹಾಗೂ ವಿಶ್ವಖ್ಯಾತ ವಿಜ್ಞಾನಿ ಸಿಎನ್ ಆರ್ ರಾವ್ ಅವರಿಗೆ ಭಾರತದ ಸರ್ವಶ್ರೇಷ್ಠ ಪುರಸ್ಕಾರ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತಿರುಗಿಬಿದ್ದಿದೆ. ಪಕ್ಷದ ಹಿರಿಯ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸುವಂತೆ ಪಕ್ಷ ಆಗ್ರಹಿಸಿದೆ.
ಈ ಬಗ್ಗೆ ಭಾನುವಾರ(ನ.17) ಮಾತನಾಡಿದ ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತರತ್ನ ನೀಡಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.
ಛತ್ತೀಸ್ ಗಢದ ರಾಯಪುರದ ಸಮಾವೇಶದಲ್ಲಿ ಮಾತನಾಡುತ್ತಾ, ನಾನು ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನ ಘೋಷಣೆಯಾಗಿರುವುದನ್ನು ಸ್ವಾಗತಿಸುತ್ತೇನೆ. ಅದರೆ, ದೇಶಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆ ಕಡಿಮೆ ಏನಲ್ಲ. ಭಾರತ ರತ್ನ ಎನಿಸಲು ಎಲ್ಲ ರೀತಿಯಿಂದಲೂ ಅವರು ಅರ್ಹರಾಗಿದ್ದಾರೆ. ರಾಜಕೀಯವಾಗಿ ಅಜಾತಶತ್ರು ಎನಿಸಿದ್ದಾರೆ ಎಂದು ಪ್ರಸಾದ್ ಹೇಳಿದರು.

ವಾಜಪೇಯಿ ಪರ ಮಾತನಾಡುತ್ತಾ ನಂತರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ರಾಷ್ಟ್ರನಾಯಕರಾಗಿದ್ದರೂ ಅವರಿಗೆ 41 ವರ್ಷಗಳ ಬಳಿಕ ಪ್ರಶಸ್ತಿ ಸಿಕ್ಕಿತು. ಮೌಲಾನಾ ಅಜಾದ್ ಅವರಿಗೂ ಕೂಡಾ ಅದೇ ಮಾನದಂಡ ಅನುಸರಿಸಲಾಯಿತು ಎಂದರು.
ಬಿಜೆಪಿ ನಾಯಕ ಯಶವಂತ ಸಿನ್ಹಾ ಮಾತನಾಡಿ, ' ಪ್ರಧಾನಿ ಮನಮೋಹನ್ ಸಿಂಗ್ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗಣತಂತ್ರ ದಿನ(ಜ.26) ಭಾರತ ರತ್ನ ನೀಡಲಿ ಎಂದರು.
ಭಾರತೀಯರ ಜನಮಾನಸದಲ್ಲಿ ನಾಯಕರಾಗಿ ಅಟಲ್ ಎಂದಿಗೂ ನೆಲೆಸಿದ್ದಾರೆ. ಸಂಸತ್ತಿನ ಗೌರವ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿದು, ಜನಸೇವೆಯ ನಿಜ ಅರ್ಥವನ್ನು ಎಲ್ಲರಿಗೂ ಬೋಧಿಸಿ, ಕಾರ್ಯತಃ ಜನಪರ ಯೋಜನೆ ತಂದವರು ವಾಜಪೇಯಿ. ಹೀಗಾಗಿ, ಅವರಿಗೆ ಭಾರತರತ್ನ ಸಿಗಲೇಬೇಕು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಹೇಳಿದರು.
ವಾಜಪೇಯಿ ಅವರ 86ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ವಾಜಪೇಯಿ ಅವರಿಗೆ ಭಾರತರತ್ನ ನೀಡಬೇಕು ಎಂಬ ಕೂಗು ಬಲವಾಗಿ ಕೇಳಿ ಬಂದಿತ್ತು. ಈಗ ಮತ್ತೊಮ್ಮೆ ಅದು ಪ್ರತಿಧ್ವನಿಸುತ್ತಿದೆ. ಭಾರತದಲ್ಲಿ ರಾಜಕೀಯ ಮೌಲ್ಯಗಳು ಕುಸಿದಿದ್ದ ಸಂದರ್ಭದಲ್ಲಿ ಅವುಗಳನ್ನು ಮತ್ತೆ ಮೇಲೆತ್ತುವಲ್ಲಿ ವಾಜಪೇಯಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅವರನ್ನು ದೇಶ ಎಂದಿಗೂ ಮರೆಯುವುದಿಲ್ಲ. ಹಾಗಾಗಿ ವಾಜಪೇಯಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವ ವಿಚಾರದಲ್ಲಿ ಎಲ್ಲರೂ ಬೆಂಬಲಿಸಬೇಕು ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications