ಸರ್ಕಾರಿ ನೌಕರರಿಗೆ ಸ್ಟ್ಯಾಂಡಪ್ ಶಿಕ್ಷೆ ಕೊಟ್ಟ ಬಾಸ್, ಕಾರಣ ತಿಳಿದು ಜನ ಅಂದ್ರು ಶಹಬ್ಬಾಸ್
ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಸೇವೆ ಪಡೆಯಲು ಬರುವ ಸಾರ್ವಜನಿಕರನ್ನು ಅಲ್ಲಿನ ಸಿಬ್ಬಂದಿ ಅಥವಾ ನೌಕರರು ಸರಿಯಾಗಿ ನಡೆಸಿಕೊಳ್ಳುವುದಿಲ್ಲ, ಸಮಸ್ಯೆಗೆ ಸ್ಪಂದಿಸುವುದಿಲ್ಲ, ಧಿಮಾಕು ತೋರುತ್ತಾರೆ ಎನ್ನುವ ದೂರುಗಳು ಕೇಳಿಬರುತ್ತಲೇ ಇವೆ. ಇದರಿಂದಾಗಿ ನೊಂದು ಕೆಲವರು ಹಿಡಿಶಾಪ ಹಾಕಿ ಕಚೇರಿಗಳಿಂದ ವಾಪಸ್ ಆಗುವವರೂ ಇದ್ದಾರೆ. ಆದರೆ, ಇದೇ ರೀತಿ ವರ್ತನೆ ತೋರಿದ ಸಿಬ್ಬಂದಿಗೆ ಮೇಲಾಧಿಕಾರಿ ನೀಡಿರುವ ಶಿಕ್ಷೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ಗಳಿಸಿದೆ.
ಉತ್ತರಪ್ರದೇಶದ ನೋಯ್ಡಾ ಪ್ರಾಧಿಕಾರದ ಸಿಬ್ಬಂದಿ ಶಿಕ್ಷೆಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣವೆಂದರೆ ವೃದ್ಧ ದಂಪತಿಯೊಬ್ಬರು ಇಲ್ಲಿನ ಸೇವೆ ಕೋರಿ ಕಚೇರಿಗೆ ಬಂದಿದ್ದರು. ಆದರೆ, ಇಲ್ಲಿನ ಸಿಬ್ಬಂದಿ ಅವರನ್ನು ಅವರ ಸಮಸ್ಯೆಗೆ ಸ್ಪಂದಿಸದೆ, ಗಂಟೆಗಟ್ಟಲೆ ಕಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಇಂತಹ ಘಟನೆಗಳು ಸರ್ಕಾರಿ ಕಚೇರಿಗಳು ಪ್ರತಿದಿನವೂ ನಡೆಯುತ್ತಲೇ ಇರುತ್ತದೆ. ಆದರೆ, ಇಂತಹ ಪರಿಸ್ಥಿತಿ ಬಂದಾಗ ಯಾರ ಬಳಿ ನ್ಯಾಯ ಕೇಳುವುದು ಎಂಬ ಅಸಹಾಯಕ ಸ್ಥಿತಿಯಲ್ಲಿ ಜನ ಮೌನಕ್ಕೆ ಶರಣಾಗುತ್ತಿದ್ದರು.

ಏಕೆಂದರೆ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಇಂತದ್ದೇ ವಾತಾವರಣ ಇರುತ್ತೆ. ಕಿರಿಯ ಸಿಬ್ಬಂದಿಯಿಂದ ಮೇಲಾಧಿಕಾರಿವರೆಗೂ ಒಂದೇ ಮನಸ್ಥಿತಿಯಲ್ಲಿರುತ್ತಾರೆ ಎಂಬ ಮಾತಿದೆ. ಆದರೆ, ನೋಯ್ಡಾ ಪ್ರಾಧಿಕಾರದ ಸಿಇಒ ಈ ಮಾತನ್ನು ಸುಳ್ಳು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ವೃದ್ಧರನ್ನು ಗಂಟೆಗಟ್ಟಲೆ ಕಾಯಿಸಿದ ಸಿಬ್ಬಂದಿ ನಡೆಗೆ ಆಕ್ರೋಶಗೊಂಡ ಉತ್ತರಪ್ರದೇಶದ ನೋಯ್ಡಾ ಪ್ರಾಧಿಕಾರದ ಸಿಇಒ ಲೋಕೇಶ್ ಅವರು ಕಚೇರಿಯಲ್ಲಿದ್ದ ಎಲ್ಲ ಸಿಬ್ಬಂದಿಗೂ ತಕ್ಕ ಶಾಸ್ತಿ ಮಾಡಿದ್ದಾರೆ. ಎಲ್ಲರನ್ನೂ ಸುಮಾರು ಅರ್ಧಗಂಟೆ ಕಾಲ ಎದ್ದು ನಿಲ್ಲುವಂತೆ ಶಿಕ್ಷೆ ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಸ್ಟಾಂಡಪ್ ಶಿಕ್ಷೆ ಜೊತೆಗೆ ನಿಂತುಕೊಂಡೇ ಕೆಲಸ ಮಾಡುವಂತೆ ಸಿಬ್ಬಂದಿಗೆ ಖಡಕ್ ಆಗಿ ಹೇಳಿದ್ದಾರೆ.

ಇನ್ನು ಮಾಡಿದ ತಪ್ಪಿಗೆ ಕಚೇರಿಯಲ್ಲಿ 16 ಮಂದಿಗೂ ಅರ್ಧಗಂಟೆಗೂ ಹೆಚ್ಚು ಸಮಯ ಎದ್ದು ನಿಂತೇ ಶಿಕ್ಷೆ ಅನುಭವಿಸಿದ್ದಾರೆ. ಇನ್ನು ಸಿಬ್ಬಂದಿಗೆ ಶಿಕ್ಷೆ ನೀಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಸಿಇಒ ಲೋಕೇಶ್ ಅವರ ಕ್ರಮಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇಂತಹ ಖಡಕ್ ಅಧಿಕಾರಿಗಳು ಬರಬೇಕು ಎಂದೂ ಕೇಳಿಕೊಂಡಿದ್ದಾರೆ.
ಈ ವಿಡಿಯೋ ಅನ್ನು ಹಲವರು ಶೇರ್ ಮಾಡಿಕೊಂಡಿದ್ದಾರೆ. ಬೇರೆ ಕಚೇರಿಗಳಲ್ಲೂ ಈ ರೀತಿ ಶಿಕ್ಷೆ ನೀಡಿದರೆ, ಗ್ರಾಹಕರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಸಾರ್ವಜನಿಕರಿಗೆ ಸ್ಪಂದಿಸದಿದ್ದರೆ ಬ್ಯಾಂಕ್ ಅಥವಾ ಇನ್ಯಾವುದೇ ಇಲಾಖೆಯ ಕಚೇರಿಯಲ್ಲಿರುವ ಎಲ್ಲಾ ನೌಕರರನ್ನು ಹೊಣೆ ಮಾಡಿ ಶಿಕ್ಷೆ ಕೊಡಬೇಕು ಎಂದು ಸಲಹೆ ನೀಡಿದ್ದಾರೆ.
ಇದೇ ರೀತಿಯ ಘಟನೆಗಳು ಎಲ್ಲೆಡೆ ನಡೆಯುತ್ತಲೇ ಇರುತ್ತವೆ. ಆದರೆ ಅದನ್ನು ಯಾರೂ ಕೇಳುವುದಿಲ್ಲ. ಮೇಲಾಧಿಕಾರಿಗಳು ಈ ರೀತಿ ಖಡಕ್ ಆಗಿದ್ದರೆ ಮಾತ್ರವೇ ಸ್ವಲ್ಪಮಟ್ಟಿಗಾದರೂ ಸುಧಾರಣೆಯಾಗುತ್ತದೆ. ಇಲ್ಲದಿದ್ದರೆ ಏನೂ ಕೆಲಸ ಮಾಡದೆ ಕೈತುಂಬಾ ಸಂಬಳ-ಗಿಂಬಳ ಎಣಿಸುವವರೇ ಹೆಚ್ಚಾಗುತ್ತಾರೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಸಾರ್ವಜನಿಕರಿಗೆ ಸರ್ಕಾರಿ ಕಚೇರಿಗಳ ವ್ಯವಸ್ಥೆ ಮೇಲಿನ ಅಸಮಾಧಾನವನ್ನು ಈ ಘಟನೆ ತುಸು ಕಡಿಮೆ ಮಾಡಿದೆ.












Click it and Unblock the Notifications