ಪಾಕಿಸ್ತಾನದ ಜೊತೆ ಭಯೋತ್ಪಾದನೆ ಬಗ್ಗೆ ಮಾತ್ರ ಮಾತುಕತೆ; ಸಚಿವ ಜೈಶಂಕರ್
ಭಯೋತ್ಪಾದನೆಯ ವಿಷಯದ ಬಗ್ಗೆ ಮಾತ್ರ ಭಾರತ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಸಿದ್ಧವಾಗಿದೆ ಮತ್ತು ಪಾಕಿಸ್ತಾನ ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೆ ಸಿಂಧೂ ಜಲ ಒಪ್ಪಂದ ಸ್ಥಗಿತಗೊಳ್ಳುತ್ತದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಗುರುವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಪಾಕಿಸ್ತಾನದ ಜೊತೆ ಚರ್ಚಿಸಬೇಕಾದ ಏಕೈಕ ವಿಷಯವೆಂದರೆ ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶದ ಭಾಗಗಳನ್ನು ತೆರವುಗೊಳಿಸುವುದು ಎಂದು ಜೈಶಂಕರ್ ಹೇಳಿದರು.

ಪಾಕಿಸ್ತಾನದ ಜೊತೆ ಭಯೋತ್ಪಾದನೆ ಬಗ್ಗೆ ಮಾತ್ರ ಮಾತುಕತೆ ನಡೆಯುತ್ತದೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನವು ಭಾರತಕ್ಕೆ ಹಸ್ತಾಂತರಿಸಬೇಕಾದ ಭಯೋತ್ಪಾದಕರ ಪಟ್ಟಿಯನ್ನು ಹೊಂದಿದೆ, ಅವರು ಭಯೋತ್ಪಾದಕರಿಗೆ ನೀಡುತ್ತಿರುವ ಮೂಲಸೌಕರ್ಯವನ್ನು ನಿಲ್ಲಿಸಬೇಕು ಎಂದು ಹೇಳಿದರು. ಭಯೋತ್ಪಾದನೆಯ ಬಗ್ಗೆ ಏನು ಮಾಡಬೇಕೆಂದು ನಾವು ಅವರೊಂದಿಗೆ ಚರ್ಚಿಸಲು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಿಂಧೂ ಜಲಒಪ್ಪಂದ ರದ್ದು
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತವು ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ರಾಜತಾಂತ್ರಿಕ, ರಾಜಕೀಯ ಮತ್ತು ಆರ್ಥಿಕ ಕ್ರಮಗಳ ಪೈಕಿ ಸಿಂಧೂ ಜಲ ಒಪ್ಪಂದದ ಅಮಾನತು ಕೂಡ ಪ್ರಮುಖವಾಗಿದೆ.
ಮೇ 7 ರಂದು, ಭಾರತವು ಪಾಕಿಸ್ತಾನದ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಒಂಬತ್ತು ಸ್ಥಳಗಳಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿಗಳನ್ನು ನಡೆಸಿತು. ಬಳಿಕ ಪಾಕಿಸ್ತಾನ ಕೂಡ ಭಾರತದ ಮೇಲೆ ಕ್ಷಿಪಣಿ, ಡ್ರೋನ್ ದಾಳಿ ಮಾಡಿತು. ಮೇ 10 ರಂದು ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಬಗ್ಗೆ ಒಪ್ಪಂದಕ್ಕೆ ಬರುವವರೆಗೆ ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಎರಡೂ ಕಡೆಯವರ ನಡುವೆ ನಾಲ್ಕು ದಿನ ತೀವ್ರ ಘರ್ಷಣೆ ನಡೆದಿತ್ತು.
ಕಾಶ್ಮೀರ ಮತ್ತು ಸಿಂಧೂ ಜಲ ಒಪ್ಪಂದ ಸೇರಿದಂತೆ ಹಲವಾರು ವಿಷಯಗಳ ಕುರಿತು ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆ ನೀಡಿದ ಬಳಿಕ ಜೈಶಂಕರ್ ಈ ಪ್ರತಿಕ್ರಿಯೆ ನೀಡಿದ್ದಾರೆ.
1960 ರ ಸಿಂಧೂ ಜಲ ಒಪ್ಪಂದವನ್ನು ಪಾಕಿಸ್ತಾನವು ಭಯೋತ್ಪಾದನೆಯನ್ನು ನಿಲ್ಲಿಸುವವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಭದ್ರತೆಯ ಕುರಿತಾದ ಸಂಪುಟ ಸಮಿತಿ ಮತ್ತು ಸರ್ಕಾರವು ಸ್ಪಷ್ಟವಾಗಿ ಹೇಳಿವೆ ಎಂದರು.
ಭಾರತ ಕಾಶ್ಮೀರದ ಕುರಿತು ಪಾಕಿಸ್ತಾನದ ಚರ್ಚಿಸಬೇಕಾದ ಏಕೈಕ ವಿಷಯವೆಂದರೆ ಅದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ಬಿಟ್ಟುಕೊಡುವುದು. ನಾವು ಪಾಕಿಸ್ತಾನದೊಂದಿಗೆ ಚರ್ಚಿಸಲು ಮುಕ್ತರಾಗಿದ್ದೇವೆ, ಸರ್ಕಾರದ ನಿಲುವು ತುಂಬಾ ಸ್ಪಷ್ಟವಾಗಿದೆ ಎಂದರು.












Click it and Unblock the Notifications