ಸೋಪು, ಶಾಂಪು ನೀಡಿದರೆ ಹುಷಾರ್, ಅಧಿಕಾರಿಗಳಿಗೆ ಯೋಗಿ ಎಚ್ಚರಿಕೆ
ತಾನು ಭೇಟಿ ನೀಡುವ ಜಾಗದಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸುವ ಅವಶ್ಯಕತೆಯಿಲ್ಲ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ.
ಲಕ್ನೋ, ಜೂ 3: ತಾನು ಭೇಟಿ ನೀಡುವ ಜಾಗದಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಹುಷಾರ್ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಾನು ನೆಲದ ಮೇಲೆ ಕೂತು ಬೆಳೆದವನು, ರಾಜ್ಯದ ಜನರನ್ನು ಗೌರವಿಸಿದರೆ ಸಾಕು ಅದು ಮುಖ್ಯಮಂತ್ರಿಯನ್ನು ಗೌರವಿಸಿದಂತೆ ಎಂದಿರುವ ಯೋಗಿ, ರಾಜ್ಯ ಪ್ರವಾಸಕ್ಕೆ ತೆರಳುವಾಗ ಯಾವುದೇ ವಿಶೇಷ ಸೌಲಭ್ಯ ನೀಡುವ ಅಗತ್ಯವಿಲ್ಲ ಎಂದಿದ್ದಾರೆ. (ಯೋಗಿಯಿಂದಾಗಿ ಗ್ರಾಮಸ್ಥರಿಗೆ ಸೋಪು ಶಾಂಪೂ ಭಾಗ್ಯ)

ಇತ್ತೀಚೆಗೆ ಹುತಾತ್ಮರಾದ ಬಿಎಸ್ಎಫ್ ಯೋಧ ಪ್ರೇಮ್ ಸಾಗರ್ ಅವರ ಮನೆಗೆ ಯೋಗಿ ಆದಿತ್ಯನಾಥ್ ಭೇಟಿ ನೀಡಿದ್ದಾಗ, ಅಲ್ಲಿ ಎಸಿ, ಸೋಫಾ, ಕಾರ್ಪೆಟ್, ಕೇಸರಿ ಬಣ್ಣದ ಟವೆಲ್ ಮುಂತಾದವನ್ನೆಲ್ಲಾ ಜಿಲ್ಲಾಡಳಿತ ಆಯೋಜಿಸಿತ್ತು.
ಯೋಧನ ಮನೆಯಿಂದ ವಾಪಸ್ ಮುಖ್ಯಮಂತ್ರಿ ಯೋಗಿ ಕಾರು ಹತ್ತಿದ ಮರುಕ್ಷಣವೇ ಅಧಿಕಾರಿಗಳು ಸೋಫಾ, ಎಸಿ ಮುಂತಾದವನ್ನೆಲ್ಲಾ ಅಲ್ಲಿಂದ ತೆರವುಗೊಳಿಸಿದ್ದರು. ಇದಕ್ಕೆ ಮೃತ ಯೋಧನ ಸಹೋದರ ನಮ್ಮನ್ನು ಜಿಲ್ಲಾಡಳಿತ ಅವಮಾನಿಸುತ್ತಿದೆ ಎಂದು ಕಿಡಿಕಾರಿದ್ದರು.
ಇದಲ್ಲದೇ, ಖುಷಿನಗರದ ಮುಶಾಹರ್ ಬುಡಕಟ್ಟು ಜನಾಂಗವನ್ನು ಯೋಗಿ ಆದಿತ್ಯನಾಥ್ ಭೇಟಿಯಾಗುವ ವೇಳೆ, ಅಲ್ಲಿನ ಜನರಿಗೆ ಜಿಲ್ಲಾಡಳಿತ ಲೈಫ್ ಬಾಯ್ ಸೋಪು, ಶಾಂಪೂ ನೀಡಿ, ಮುಖ್ಯಮಂತ್ರಿಗಳ ಬರುವಾಗ ಶುಚಿಯಾಗಿರಬೇಕೆಂದು ಆದೇಶ ನೀಡಿತ್ತು.
ಈ ಎರಡು ವಿದ್ಯಮಾನಗಳು ಭಾರೀ ವಿವಾದಕ್ಕೊಳಗಾಗಿ, ಬಿಜೆಪಿ ಸರಕಾರ ಇದರಿಂದ ಭಾರೀ ಮುಜುಗರಕ್ಕೊಳಗಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications