ಹೆಲ್ಮೆಟ್ ಇಲ್ಲದಿದ್ರೆ ಪೆಟ್ರೋಲ್ ಸಿಗಲ್ಲ: ಸೆಪ್ಟೆಂಬರ್ 1ರಿಂದಲೇ ಹೊಸ ನಿಯಮ
ಹೆಲ್ಮೆಟ್ ಧರಿಸಿ, ದ್ವಿಚಕ್ರ ವಾಹನ ಓಡಿಸಿ ಎಂದು ಸಂಚಾರ ಪೊಲೀಸರು ಅಭಿಯಾನ ಶುರು ಮಾಡಿ ದಶಕಗಳೇ ಉರುಳಿವೆ. ಆದರೂ ಅನೇಕರು ಹೆಲ್ಮೆಟ್ ಧರಿಸಿ ಅಂದ್ರೆ ಅಲರ್ಜಿ ಅಂತಾರೆ. ಹೆಲ್ಮೆಟ್ ರಹಿತ ಚಾಲನೆಗೆ ಭಾರಿ ದಂಡ ವಿಧಿಸುವ ಕೆಲಸವೂ ಚಾಲ್ತಿಯಲ್ಲಿದೆ. ಸಾವಿರಾರು ರೂಪಾಯಿ ದಂಡ ಬಿದ್ದರೂ ಹೆಲ್ಮೆಟ್ ಧರಿಸಲು ಇಂದಿಗೂ ಹಿಂದೇಟು ಹಾಕುವ ಬೈಕ್ ಸವಾರರು ಇದ್ದಾರೆ. ಹೀಗಾಗಿ ಸರ್ಕಾರವೇ "ಹೆಲ್ಮೆಟ್ ಇಲ್ಲದಿದ್ರೆ, ಪೆಟ್ರೋಲ್ ಇಲ್ಲ" ಎನ್ನುವ ಹೊಸ ನಿಯಮ ತರುತ್ತಿದೆ. ಸೆಪ್ಟೆಂಬರ್ 1ರಿಂದಲೇ ಈ ನಿಯಮ ಜಾರಿಯಾಗಲಿದ್ದು, ಹೆಲ್ಮೆಟ್ ಇಲ್ಲದೆ ಬಂಕ್‌ಗೆ ಬರುವ ಬೈಕ್‌ಗಳಿಗೆ ಪೆಟ್ರೋಲ್ ಸಿಗಲ್ಲ.
ಎಲ್ಲ ಬಂಕ್‌ಗಳಲ್ಲಿ ಇನ್ಮುಂದೆ ಪೆಟ್ರೋಲ್ ಹಾಕುವ ಮುನ್ನ ಸವಾರರು ಹೆಲ್ಮೆಟ್ ಧರಿಸಿದ್ದಾರೆಯೇ ಎಂದು ಖಚಿತಪಡಿಸಿಕೊಂಡು ನಂತರ ಪೆಟ್ರೋಲ್ ಹಾಕಲಿದ್ದಾರೆ. ಒಂದು ವೇಳೆ ಹೆಲ್ಮೆಟ್ ಧರಿಸದೆ ಪೆಟ್ರೋಲ್‌ಗಾಗಿ ಬಂದರೆ ಅವರಿಗೆ ಪೆಟ್ರೋಲ್ ಸಿಗಲ್ಲ. ಸವಾರರು ಅಪಘಾತಗಳಾಗದಂತೆ ನೋಡಿಕೊಳ್ಳಲು ಈ ಹೆಲ್ಮೆಟ್ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ಎದುರಾಗುವ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ಸೆಪ್ಟೆಂಬರ್ 1ರಿಂದ 30ರವರೆಗೆ "ನೋ ಹೆಲ್ಮೆಟ್-ನೋ ಫುಯೆಲ್" (No Helmet-No Fuel) ಎಂಬ ರಸ್ತೆ ಸುರಕ್ಷತಾ ಅಭಿಯಾನ ಪ್ರಾರಂಭಿಸಲಿದೆ. ಹೆಲ್ಮೆಟ್ ಧರಿಸದ ಯಾರಿಗೂ ಇಂಧನ ನೀಡದಂತೆ ರಾಜ್ಯಾದ್ಯಂತ ಪೆಟ್ರೋಲ್ ಪಂಪ್‌ಗಳಿಗೆ ನಿರ್ದೇಶನ ನೀಡಲಾಗಿದೆ.

ಸ್ಥಳೀಯ ಪೊಲೀಸರು ಮತ್ತು ಪೆಟ್ರೋಲ್ ಪಂಪ್ ಸಂಘಗಳ ಸಹಯೋಗದೊಂದಿಗೆ ಉತ್ತರ ಪ್ರದೇಶದ ಎಲ್ಲ ಜಿಲ್ಲೆಗಳಲ್ಲಿ ಈ ಅಭಿಯಾನವನ್ನು ವಿಸ್ತರಿಸುವುದಾಗಿ ಸಾರಿಗೆ ಇಲಾಖೆ ತಿಳಿಸಿದೆ. ಈ ಒಂದು ತಿಂಗಳ ಅಭಿಯಾನದ ಸಮಯದಲ್ಲಿ ಹೆದ್ದಾರಿಗಳು ಮತ್ತು ನಗರ ಜಂಕ್ಷನ್‌ಗಳಂತಹ ಹೆಚ್ಚಿನ ಅಪಾಯದ ವಲಯಗಳಲ್ಲಿ ಈ ಅಭಿಯಾನಕ್ಕೆ ಒತ್ತು ನೀಡಲಾಗಿದೆ.
ಹೆಲ್ಮೆಟ್‌ಗಳ ಗುಣಮಟ್ಟ ಕೂಡ ಕಳಪೆಯಾಗಿದ್ದು, ಸುಖಾ ಸುಮ್ಮನೆ ಬಿಐಎಸ್ ಗುರುತಿಲ್ಲದ ಹೆಲ್ಮೆಟ್‌ಗಳನ್ನ ಸವಾರರು ಬಳಸುತ್ತಿದ್ದಾರೆ. ನಕಲಿ ಹೆಲ್ಮೆಟ್ ತಯಾರಕರ ಹಾವಳಿ ಕೂಡ ಹೆಚ್ಚಾಗಿದ್ದು, ಬಿಐಎಸ್ ಪರವಾನಗಿಗಳನ್ನು ಹೊಂದಿರುವವರು ಕೂಡ ಕೇವಲ 110 ರೂಪಾಯಿ ಬೆಲೆಗೆ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ಉತ್ಪಾದಿಸುತ್ತಾರೆ. ಇದು ಉತ್ತರಪ್ರದೇಶ, ಗಾಜಿಯಾಬಾದ್, ದೆಹಲಿಯಲ್ಲಿ ಮಿತಿಮೀರಿದೆ. ಈ ನಕಲಿ ಹೆಲ್ಮೆಟ್‌ಗಳು ಸವಾರರನ್ನು ಜೀವ ತೆಗೆಯುತ್ತಿವೆ ಎಂದು ಸಾರಿಗೆ ಇಲಾಖೆ ಕಳವಳ ವ್ಯಕ್ತಪಡಿಸಿದೆ.

ಹೆಲ್ಮೆಟ್ ಧರಿಸದವರಿಗೆ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ನಿರಾಕರಿಸಲಾಗುವುದು. ಸವಾರರಿಗೆ ದಂಡ ವಿಧಿಸುವುದಲ್ಲ, ರಸ್ತೆ ಸುರಕ್ಷತೆಯನ್ನು ಉತ್ತೇಜಿಸುವುದು ಇದರ ಉದ್ದೇಶ. ಜಾರಿ ಸಂಸ್ಥೆಗಳಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ರಾಜ್ಯ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ. 1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129ರಡಿ ವಾಹನ ಸವಾರರು ಮತ್ತು ಹಿಂಬದಿ ಪ್ರಯಾಣಿಕರಿಬ್ಬರಿಗೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಇಲ್ಲದಿದ್ದರೆ ಇದೇ ಕಾಯ್ದೆಯ ಸೆಕ್ಷನ್ 194D ಅಡಿಯಲ್ಲಿ ದಂಡ ವಿಧಿಸಲು ಕೂಡ ಅವಕಾಶವಿದೆ ಎಂದು ಎಚ್ಚರಿಸಿದೆ.












Click it and Unblock the Notifications