ಭಾರತ್ ಜೋಡೋ ಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ರಾಹುಲ್ ಗಾಂಧಿ
ದೇಗ್ಲೂರು, ನವೆಂಬರ್ 8: ಎರಡು ತಿಂಗಳ ಹಿಂದೆ ಆರಂಭವಾದ ಭಾರತ್ ಜೋಡೋ ಯಾತ್ರೆಗೆ ಅಡೆತಡೆಗಳನ್ನು ಒಡ್ಡಲಾಗುತ್ತಿದೆ. ನಾವು ಯಾವುದೇ ಅಡೆತಡೆಗಳನ್ನು ಲೆಕ್ಕಿಸುವುದಿಲ್ಲ. ಇದು ನಿಗದಿತ ಅವಧಿಯಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದರು.
ಸೋಮುವಾರ ರಾತ್ರಿ ಮಹಾರಾಷ್ಟ್ರದ ದೇಗ್ಲೂರಿನಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ರಾಹುಲ್ ಮಾತನಾಡಿದರು.
'ಯಾತ್ರೆಯ ಉದ್ದೇಶ ಜನರನ್ನು ಸಂಪರ್ಕಿಸುವುದು. ಭಾರತವನ್ನು ಒಂದುಗೂಡಿಸುವುದು. ದೇಶದಲ್ಲಿ ಬಿತ್ತಲಾಗುತ್ತಿರುವ ದ್ವೇಷದ ವಿರುದ್ಧ ಧ್ವನಿ ಎತ್ತುವುದು' ಎಂದು ತಿಳಿಸಿದರು.

ಭಾರತ್ ಜೋಡೋ ಯಾತ್ರೆಯನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಇದು ಕಾಶ್ಮೀರದಲ್ಲಿ ಶ್ರೀನಗರದಲ್ಲೇ ಅಂತ್ಯಗೊಳ್ಳಲಿದೆ ಎಂದು ರಾಹುಲ್ ಹೇಳಿದರು.
ರೈತರು, ಕಾರ್ಮಿಕರು, ಹಿರಿಯ ನಾಗರಿಕರು, ಯುವಕರು, ವ್ಯಾಪಾರಿಗಳು ಸೇರಿದಂತೆ ಈ ಯಾತ್ರೆಯು ಎಲ್ಲರಿಗೂ ಮುಕ್ತವಾಗಿದೆ. ಯಾರು ಬೇಕಾದರೂ ಬಂದು ಯಾತ್ರೆಯಲ್ಲಿ ಪಾಲ್ಗೊಳ್ಳಬಹುದು. ನಮ್ಮ ಹೃದಯದ ಬಾಗಿಲುಗಳು ತೆರೆದೇ ಇರುತ್ತವೆ' ಎಂದು ತಿಳಿಸಿದರು.
ನಾನು ಮಹಾರಾಷ್ಟ್ರದ ಪಿಸುಮಾತು ಹಾಗೂ ನೋವನ್ನು ಕೇಳಲು ಬಯಸುತ್ತೇನೆ ಎಂದು ಅವರು ಹೇಳಿದರು.
ಭಾರತದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ ಎಂದು ಆರೋಪಿಸಿದ ರಾಹುಲ್, ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳಿಗೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ. ನೋಟು ಅಮಾನ್ಯೀಕರಣದಂತಹ ನೀತಿಗಳು ಜನರನ್ನು ಸಂಕಷ್ಟಕ್ಕೆ ದೂಡಿವೆ ಎಂದು ವಾಗ್ದಾಳಿ ನಡೆಸಿದರು.

'ನೋಟು ನಿಷೇಧದಂತಹ ಪ್ರಧಾನಿ ಮೋದಿ ನೀತಿಗಳು ನಿರುದ್ಯೋಗ, ಹಣದುಬ್ಬರ ವಿರುದ್ಧ ಹೋರಾಡುತ್ತಿರುವ ಜನರ ಬೆನ್ನು ಮೂಳೆಯನ್ನು ಮುರಿದಿದೆ' ಎಂದು ಅವರು ಹೇಳಿದರು.
ಈ ಹಿಂದೆ, ಪ್ರಧಾನಿ ಮೋದಿ ಡೀಸೆಲ್ ಮತ್ತು ಪೆಟ್ರೋಲ್ ಬಗ್ಗೆ ಮಾತನಾಡುತ್ತಿದ್ದರು. ಆದರೆ, ಈಗ ಇಂಧನ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿವೆ. ಅವರು ಈ ಬಗ್ಗೆ ಏನನ್ನೂ ಮಾತನಾಡುತ್ತಿಲ್ಲ ಎಂದು ತಿಳಿಸಿದರು.
ಭಾರತ್ ಜೋಡೋ ಯಾತ್ರೆಯು ಈಗಾಗಲೇ ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ ಹಾಗೂ ಆಂದ್ರ ಪ್ರದೇಶದಲ್ಲಿ ಸಾಗಿದೆ. ಸೋಮವಾರ ಮಹಾರಾಷ್ಟ್ರವನ್ನು ಪ್ರವೇಶಿಸಿದೆ.












Click it and Unblock the Notifications