ನಿತೀಶ್ ಕುಮಾರ್‌ಗೆ ಬಿಹಾರದ ಸಾರಥ್ಯ; ನ.20 ರಂದು ಪ್ರಮಾಣ ವಚನ ಸ್ವೀಕಾರ!
ಪಾಟ್ನಾ, ನವೆಂಬರ್ 19: ಪ್ರಚಂಡ ಬಹುಮತದ ಮೂಲಕ ಪ್ರತಿಪಕ್ಷಗಳನ್ನು ಧೂಳಿಪಟ ಮಾಡಿ ಬಿಹಾರದಲ್ಲಿ ಅಧಿಕಾರಕ್ಕೆ ಬಂದಿರುವ ಎನ್‌ಡಿಎ ನವೆಂಬರ್ 20 ರಂದು ಅಧಿಕೃತವಾಗಿ ಸರ್ಕಾರ ರಚನೆ ಮಾಡಲಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಯ ನಿರ್ಣಾಯಕ ಗೆಲುವಿನ ನಂತರ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ನವೆಂಬರ್ 20ರ ಗುರುವಾರ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ಪ್ರಮಾಣ ವಚನ ಕಾರ್ಯಕ್ರಮವೂ ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆಯಲಿದ್ದು, ಬಿಹಾರದಲ್ಲಿ ಹೊಸ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದ ಸಿದ್ಧತೆಗಳನ್ನು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಇಂದು ಪರಿಶೀಲಿಸಿದರು. ಇನ್ನೂ ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಲವಾರು ಕೇಂದ್ರ ಸಚಿವರು ಮತ್ತು ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಬಿಹಾರ ರಾಜಧಾನಿ ಮತ್ತು ಗಾಂಧಿ ಮೈದಾನದ ಸುತ್ತಮುತ್ತ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಒಂದು ದಿನ ಮೊದಲು, ನಿತೀಶ್ ಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಜೆಡಿಯು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ತಿಳಿಸಿದೆ. ಸೋಮವಾರದಂದು ನಿತೀಶ್ ಕುಮಾರ್ ಅವರು ಪಾಟ್ನಾದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಭೇಟಿ ಮಾಡಿ ಪ್ರಸ್ತುತ ವಿಧಾನಸಭೆಯನ್ನು ವಿಸರ್ಜಿಸುವಂತೆ ಮತ್ತು ಹೊಸ ಆಡಳಿತಕ್ಕೆ ಪರಿವರ್ತನಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ಶಿಫಾರಸು ಮಾಡಿದರು. ಇನ್ನೂ ದಾಖಲೆಯ ಹತ್ತನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿರುವ ನಿತೀಶ್ ಕುಮಾರ್ ಅವರ ಜೊತೆ ಬೇರೆ ಯಾರೆಲ್ಲ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ.
ಬಿಜೆಪಿಯ ಹಿರಿಯ ನಾಯಕರೊಬ್ಬರ ಪ್ರಕಾರ, ಎರಡು ಉಪಮುಖ್ಯಮಂತ್ರಿ ಹುದ್ದೆಗಳಲ್ಲಿ ಬದಲಾವಣೆಗಳು ಸಹ ಸಂಭವಿಸಬಹುದು ಎಂದು ಹೇಳಿದರು. ಬಿಹಾರ ವಿಧಾನಸಭೆಯ ಸ್ಪೀಕರ್ ಹುದ್ದೆ ಬಿಜೆಪಿಗೆ ಹೋಗುವ ನಿರೀಕ್ಷೆಯಿದೆ ಎಂದು ಜೆಡಿಯು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ನವೆಂಬರ್ 20ರವರೆಗೆ ಗಾಂಧಿ ಮೈದಾನಕ್ಕೆ ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಸಂಪುಟ ಸ್ಥಾನಗಳ ಹಂಚಿಕೆಯನ್ನು ಅಂತಿಮಗೊಳಿಸಲು ಮತ್ತು ವಿಧಾನಸಭಾ ಸ್ಪೀಕರ್ ಹುದ್ದೆಯ ಬಗ್ಗೆ ಒಮ್ಮತ ಮೂಡಿಸಲು ಎನ್‌ಡಿಎ ಪಾಲುದಾರರಲ್ಲಿ ತೀವ್ರ ಲಾಬಿ ನಡೆಯುತ್ತಿದೆ.












Click it and Unblock the Notifications