ಬಿಹಾರದಲ್ಲಿ ಎನ್‌ಡಿಎ ಸರ್ಕಾರ ರಚನೆ ಕಸರತ್ತು; ಇಂದು ನಿತೀಶ್ ಕುಮಾರ್ ರಾಜೀನಾಮೆ!
ಪಾಟ್ನಾ, ನವೆಂಬರ್ 17: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 202 ಸ್ಥಾನ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಬಿಹಾರದಲ್ಲಿ ಎನ್‌ಡಿಎ ಸರ್ಕಾರ ರಚನೆಯ ಕಸರತ್ತು ಜೋರಾಗಿದ್ದು, ಬಿಜೆಪಿ, ಜೆಡಿಯು ಹಾಗೂ ಎಲ್‌ಜೆಪಿ ಪಕ್ಷದ ಐತಿಹಾಸಿಕ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನೂ 202 ಸ್ಥಾನ ಗೆದ್ದಿರುವ ಎನ್‌ಡಿಎ ಸರ್ಕಾರ ರಚನೆ ಸಿದ್ದತೆ ನಡೆಸುತ್ತಿದ್ದು, ಮತ್ತೆ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗ್ತಾರಾ ಅಥವಾ ಹೊಸ ನಾಯಕರಿಗೆ ಮುಖ್ಯಮಂತ್ರಿ ಸ್ಥಾನದ ಅವಕಾಶವನ್ನ ನೀಡುತ್ತಾರಾ ಎನ್ನುವ ಚರ್ಚೆ ಶುರುವಾಗಿದ್ದು, ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಇಂದು ರಾಜೀನಾಮ ನೀಡುವ ಸಾಧ್ಯತೆ ಇದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ನಂತರ, ಜನತಾ ದಳ ಯುನೈಟೆಡ್ ಅಧ್ಯಕ್ಷ ನಿತೀಶ್ ಕುಮಾರ್ ಬುಧವಾರ ಅಥವಾ ಗುರುವಾರ ಬಿಹಾರ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವಿವಿಧ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ. ಐಕಾನಿಕ್ ಗಾಂಧಿ ಮೈದಾನದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆ ಇದ್ದು, ಇದು ಒಂದು ಅದ್ದೂರಿ ಪ್ರದರ್ಶನವಾಗಲಿದೆ.

ನವೆಂಬರ್ 20 ರಂದು ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಧರ್ಮೇಂದ್ರ ಪ್ರಧಾನ್, ಚಿರಾಗ್ ಪಾಸ್ವಾನ್, ಜಿತನ್ ರಾಮ್ ಮಾಂಝಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಎನ್‌ಡಿಎ ಆಡಳಿತವಿರುವ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಇನ್ನೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯಲ್ಲಿ ಎನ್‌ಡಿಎ ಸಂಪುಟ ಸೂತ್ರವನ್ನು ಅಂತಿಮಗೊಳಿಸಿದೆ. ವಿವಿಧ ಮಾಧ್ಯಮ ವರದಿಗಳ ಪ್ರಕಾರ ಬಿಜೆಪಿ 15 ಅಥವಾ 16 ಸಚಿವ ಸ್ಥಾನಗಳನ್ನು ಮತ್ತು ಜೆಡಿಯು 14 ಸಚಿವ ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಆದರೆ, 29 ಸ್ಥಾನಗಳಲ್ಲಿ 19 ಸ್ಥಾನಗಳನ್ನು ಗೆದ್ದ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮೂರು ಸಚಿವ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.
ಇಂದು ರಾಜ್ಯ ರಾಜಧಾನಿ ಪಾಟ್ನಾದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, 17 ನೇ ವಿಧಾನಸಭೆಯ ವಿಸರ್ಜನೆಗೆ ಸಭೆಯಲ್ಲಿ ಅನುಮೋದನೆ ದೊರೆಯುವ ಸಾಧ್ಯತೆ ಇದ್ದು, ನಂತರ ನಿತೀಶ್ ಕುಮಾರ್ ಅವರು ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಖಾನ್ ಅವರಿಗೆ ಸಲ್ಲಿಸಲಿದ್ದು, ಹೊಸ ಸರ್ಕಾರ ರಚನೆಗೆ ದಾರಿ ಮಾಡಿಕೊಡಲಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮತ್ತು ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್‌ನ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು 202 ಸ್ಥಾನಗಳ ಬಹುಮತದಿಂದ ಗೆದ್ದಿತು. ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ದ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ನೇತೃತ್ವದ ಮಹಾಘಟಬಂಧನ್ ವಿರೋಧ ಪಕ್ಷವು ಭಾರಿ ಸೋಲನ್ನು ಅನುಭವಿಸಿತು. ಆರ್‌ಜೆಡಿ ಸ್ಪರ್ಧಿಸಿದ 143 ಸ್ಥಾನಗಳಲ್ಲಿ ಕೇವಲ 25 ಸ್ಥಾನಗಳನ್ನು ಗೆದ್ದಿತು. ಮತ್ತೊಂದೆಡೆ, ಪ್ರಶಾಂತ್ ಕಿಶೋರ್ ಅವರ ಜನ ಸೂರಜ್ ಪಕ್ಷವು ತನ್ನ ಖಾತೆಯನ್ನು ತೆರೆಯಲು ವಿಫಲವಾಯಿತು.












Click it and Unblock the Notifications