Nitish Kumar Swearing-In: ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್
ಪಾಟ್ನಾ, ನವೆಂಬರ್ 20: ಬಿಹಾರದಲ್ಲಿ ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪಾಟ್ನಾದ ಗಾಂಧಿ ಮೈದಾನದಲ್ಲಿ ದಾಖಲೆಯ 10 ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು.ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಜಯ ಸಾಧಿಸಿದ ನಂತರ, ನಿತೀಶ್ ಕುಮಾರ್ ಸರ್ಕಾರ ರಚಿಸಿದ್ದು, ನಿತೀಶ್ ಕುಮಾರ್ ಸರ್ಕಾರದಲ್ಲಿ ಬಿಜೆಪಿ ಕೋಟಾದಿಂದ ಇಬ್ಬರು ಉಪಮುಖ್ಯಮಂತ್ರಿಗಳು ಇರುತ್ತಾರೆ. ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಮತ್ತೊಮ್ಮೆ ನಿತೀಶ್ ಕುಮಾರ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬಿಹಾರದ ನೂತನ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದು, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನಿತೀಶ್ ಕುಮಾರ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಎನ್‌ಡಿಎಯ ಹಲವಾರು ಉನ್ನತ ನಾಯಕರು ಭಾಗವಹಿಸಿದ್ದರು.

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಜಯ ಸಾಧಿಸಿದ್ದು, ನಿತೀಶ್ ಕುಮಾರ್ ಅವರ ಸಂಪುಟದಲ್ಲಿ ಯಾವ ಪಕ್ಷದ ಕೋಟಾದಿಂದ ಯಾವ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ನಿರ್ಧಾರವನ್ನೂ ಅಂತಿಮಗೊಳಿಸಲಾಗಿದೆ. ನಿತೀಶ್ ಕುಮಾರ್ ಅವರ ಸಂಪುಟದ ಭಾಗವಾಗಿ ಪ್ರಮಾಣ ವಚನ ಸ್ವೀಕರಿಸುವ ಸಚಿವರ ಪಟ್ಟಿಯೂ ಬಿಡುಗಡೆಯಾಗಿದೆ. ಹೊಸ ಸರ್ಕಾರದಲ್ಲಿ ಬಿಜೆಪಿ 14 ಸಚಿವರನ್ನು ಹೊಂದಿರುತ್ತದೆ. ಸಿಎಂ ನಿತೀಶ್ ಜೊತೆಗೆ, ಜೆಡಿಯು ಏಳು ಸಚಿವರನ್ನು ಹೊಂದಿರುತ್ತದೆ. ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ಉಪೇಂದ್ರ ಕುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕ ಮೋರ್ಚಾ ತಲಾ ಒಬ್ಬ ಸಚಿವರನ್ನು ಹೊಂದಿರುತ್ತದೆ.
ಬಿಹಾರದ 243 ಸದಸ್ಯ ಬಲದ ವಿಧಾನಸಭೆಯಲ್ಲಿ 202 ಸ್ಥಾನಗಳನ್ನು ಗೆದ್ದು ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದಿತು, ಬಿಜೆಪಿ 89, ಜೆಡಿ(ಯು) 85, ಎಲ್‌ಜೆಪಿ(ಆರ್‌ವಿ) 19, ಎಚ್‌ಎಎಂ 5 ಮತ್ತು ಆರ್‌ಎಲ್‌ಎಂ 4 ಸ್ಥಾನಗಳನ್ನು ಗಳಿಸಿತು. ಇನ್ನೂ ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಮತ್ತು ಹಿಂದೂಸ್ತಾನಿ ಆವಾಮ್ ಮೋರ್ಚಾ (ಜಾತ್ಯತೀತ) ಅಥವಾ ಎಚ್‌ಎಎಂ (ಎಸ್) ಗೆ ತಲಾ ಒಂದು ಸಚಿವ ಸ್ಥಾನ, ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಗೆ ಮೂರು ಸಚಿವ ಸ್ಥಾನಗಳು ಮತ್ತು ಉಳಿದವು ಬಿಜೆಪಿ ಮತ್ತು ಜೆಡಿ (ಯು) ನಡುವೆ ಹಂಚಿಕೆಯಾಗಲಿವೆ ಎಂದು ತಿಳಿದುಬಂದಿದೆ.












Click it and Unblock the Notifications