ತೇಜಸ್ವಿ ಯಾದವ್ ಗೆ ಸಂಪುಟದಿಂದ ಕೊಕ್: ಲಾಲೂಗೆ ನಿತೀಶ್ ಗಡುವು
ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರನ್ನು ಸಂಪುಟದಿಂದ ಕೈಬಿಡಲು ನಿತೀಶ್ ನಿರ್ಧಾರ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್. ಅವರ ಮಂತ್ರಿ ಮಂಡಲದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ತೇಜಸ್ವಿ ಯಾದವ್.
ಪಾಟ್ನಾ, ಜುಲೈ 11: ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರನ್ನು ಸಂಪುಟದಿಂದ ಕೈಬಿಡಲು ನಿರ್ಧರಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಈ ನಿಟ್ಟಿನಲ್ಲಿ ಹುಷಾರಾದ ಹೆಜ್ಜೆ ಇಟ್ಟಿದ್ದಾರೆ.
ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ತೇಜಸ್ವಿ ಯಾದವ್ ಅವರನ್ನು ಸಂಪುಟದಲ್ಲಿ ಮುಂದುವರಿಸಬೇಕೋ, ಬೇಡವೋ ಎಂಬುದರ ಬಗ್ಗೆ ಮಿತ್ರ ಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ನಿರ್ಧರಿಸಲಿ ಎಂದಿರುವ ನಿತೀಶ್, ಅದಕ್ಕಾಗಿ ಮೂರು ದಿನಗಳ ಗಡುವನ್ನೂ ವಿಧಿಸಿದ್ದಾರೆ.

ಇತ್ತೀಚೆಗೆ, ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಆಪ್ತರ ಮನೆಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಅದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯದಿಂದಲೂ ಲಾಲೂ ಪ್ರಸಾದ್ ಪುತ್ರಿ ಮಿಸಾ ಭಾರತಿ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಹಾಗಾಗಿ, ಲಾಲು ಅವರ ಇಡೀ ಕುಟುಂಬದ ಮೇಲೆಯೇ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಆರ್ ಜೆಡಿಯ ಪರವಾಗಿ ಉಪ ಮುಖ್ಯಮಂತ್ರಿಯಾಗಿರುವ ಲಾಲು ಅವರ ಪುತ್ರರನ್ನು ಸಂಪುಟದಿಂದ ಕೈಬಿಡಲು ನಿತೀಶ್ ಆಲೋಚಿಸಿದ್ದಾರೆ.












Click it and Unblock the Notifications