Nithin Sharma: ನೀರಿಲ್ಲದೆ ಕಾರು ತೊಳೆಯುವ ಬ್ಯುಸಿನೆಸ್! 10 ಲಕ್ಷ ರೂ. ಹೂಡಿ 10 ಕೋಟಿ ಗಳಿಸಿದ ಎಂಬಿಎ ಡ್ರಾಪ್‌ಔಟ್!
Nithin Sharma Success Story: ಕೆಲವು ಬೆಂಗಳೂರು ನಿವಾಸಿಗಳು ತಮ್ಮ ಕಾರು ತೊಳೆಯುವುದು ಕಂಡರೆ ತಲೆ ತಿರುಗುತ್ತದೆ. ಪೈಪ್ ಹಿಡಿದು ಮುಂಜಾನೆಯಿಂದ ಮಧ್ಯಾಹ್ನದವರೆಗೆ ತೊಳೆಯುತ್ತಲೇ ಇರುತ್ತಾರೆ. ಗ್ಯಾಲನ್‌ಗಟ್ಟಲೆ ನೀರು ಮೋರಿ ಸೇರಿ ವ್ಯರ್ಥವಾಗುತ್ತಲೇ ಇರುತ್ತದೆ. ನಮಗೂ ಅಷ್ಟೆ, ಕಾರು ತೊಳೆಯಲು ನೀರು ಬೇಕೇ ಬೇಕು ಎಂಬುದು ನಮ್ಮ ಕಲ್ಪನೆ. ಕಡಿಮೆ ನೀರಿನಲ್ಲಿ ಕಾರು ತೊಳೆಯಬಹುದು ಅಂದರೆ ನಂಬಲ್ಲ. ಈ ದೇಶದಲ್ಲಿ ಒಂದು ಕಾರು ತೊಳೆಯಲು ಸುಮಾರು 20ರಿಂದ 25 ಲೀಟರ್ ನೀರು ಖರ್ಚಾಗುತ್ತದೆ. ಪ್ರತಿದಿನ ಲಕ್ಷಾಂತರ ಕಾರುಗಳನ್ನು ತೊಳೆಯುವಾಗ ಎಷ್ಟು ನೀರು ವ್ಯರ್ಥವಾಗಬಹುದು ಎಂದು ಊಹಿಸಿ!
ಹಾಗಾದರೆ ನೀರು ವ್ಯರ್ಥವಾಗದಂತೆ, ನೀರನ್ನೇ ಬಳಸದೆ ಕಾರು ತೊಳೆಯಲು ಸಾಧ್ಯ ಇಲ್ವಾ? ಮಹಾರಾಷ್ಟ್ರದ ಪುಣೆಯ ಉದ್ಯಮಿ ನಿತಿನ್ ಶರ್ಮಾ ಅವರಿಗೂ ಇದೇ ಪ್ರಶ್ನೆ ಕಾಡಿತ್ತು. ಅವರು ಪ್ರಶ್ನೆ ಕೇಳಿ ಸುಮ್ಮನಾಗಲಿಲ್ಲ. ನೀರೇ ಇಲ್ಲದೆ ಕಾರು ತೊಳೆಯಲು ಸಾಧ್ಯವೇ ಎಂದು ಸತತವಾಗಿ ಯೋಚಿಸಿದರು. ಆ ಒಂದು ಪ್ರಶ್ನೆಯೇ ಮುಂದೆ ಅವರ ಜೀವನವನ್ನೇ ಬದಲಿಸಿತು.
ಇಂದು ಅವರ ಕಂಪನಿ ʼನೀರಿಲ್ಲದೆ ಕಾರನ್ನು ತೊಳೆಯುವʼ ಉದ್ಯಮದಲ್ಲಿಯೇ ವರ್ಷಕ್ಕೆ ಸುಮಾರು 4 ಕೋಟಿ ರೂ. ಆದಾಯ ಗಳಿಸುತ್ತಿದೆ. ಅಷ್ಟೇ ಅಲ್ಲ, ಅವರ ನೀರಿಲ್ಲದ ಕಾರು ತೊಳೆಯುವ ವ್ಯವಸ್ಥೆಯಿಂದ ಪ್ರತಿದಿನ ಸುಮಾರು 12 ಲಕ್ಷ ಲೀಟರ್ ನೀರು ಉಳಿಯುತ್ತಿದೆ ಎಂದು ವರದಿಯಾಗಿದೆ.
ಎಂಬಿಎ ಅರ್ಧಕ್ಕೆ ಬಿಟ್ಟು ಕುಟುಂಬದ ವ್ಯವಹಾರಕ್ಕೆ
2004ರಲ್ಲಿ ನಿತಿನ್ ಶರ್ಮಾ ಎಂಬಿಎ ಓದುತ್ತಿದ್ದರು. ಆದರೆ ಓದು ಅರ್ಧಕ್ಕೆ ನಿಲ್ಲಿಸಿ, ಕಾರು ತೊಳೆಯುವ, ಪುಣೆಯಲ್ಲಿದ್ದ ತಮ್ಮ ಕುಟುಂಬದ ವ್ಯವಹಾರವನ್ನು ಕೈಗೆತ್ತಿಕೊಂಡರು. ಆಗ ಕಾರು ತೊಳೆಯುವುದು ಎಂದರೆ ನೀರು ಬಳಸುವುದು ಸಹಜವಾಗಿತ್ತು. ವರ್ಷಗಳು ಕಳೆದವು. 2016ರಲ್ಲಿ ಪರಿಸ್ಥಿತಿ ಬದಲಾಗತೊಡಗಿತು. ನೀರಿನ ಸಮಸ್ಯೆ ಗಂಭೀರವಾಗುತ್ತಿತ್ತು. ಅಂತರ್ಜಲ ಮಟ್ಟ ಕುಸಿಯುತ್ತಿತ್ತು. ಬಾವಿಗಳು ಬತ್ತುತ್ತಿದ್ದವು. ದೇಶದ ಹಲವು ಭಾಗಗಳಲ್ಲಿ ನೀರಿಗಾಗಿ ಜನರು ಪರದಾಡುತ್ತಿದ್ದರು.
ಈ ಪರಿಸ್ಥಿತಿ ನಿತಿನ್ ಅವರನ್ನು ಗಂಭೀರವಾಗಿ ಯೋಚಿಸುವಂತೆ ಮಾಡಿತು. ನೀರಿಗಾಗಿ ಜನರು ಕಷ್ಟಪಡುತ್ತಿರುವಾಗ, ಕಾರು ತೊಳೆಯಲು ಇಷ್ಟೊಂದು ನೀರನ್ನು ಬಳಸುವುದು ಸರಿಯೇ? ಎಂಬ ಪ್ರಶ್ನೆ ಅವರಲ್ಲಿ ಹೆಡೆಯೆತ್ತಿತು. ಈ ಪ್ರಶ್ನೆಗೆ ಉತ್ತರ ಹುಡುಕಲು ಅವರು ನಿರ್ಧರಿಸಿದರು.
2017ರಲ್ಲಿ ನಿತಿನ್ ತಮ್ಮ ತಂಡದೊಂದಿಗೆ ಹೊಸ ಪ್ರಯೋಗ ಆರಂಭಿಸಿದರು. ಅವರ ಗುರಿ ಒಂದೇ. ನೀರಿಲ್ಲದೆ ಕಾರನ್ನು ಸ್ವಚ್ಛಗೊಳಿಸುವ ಒಂದು ದ್ರಾವಣವನ್ನು ತಯಾರಿಸಬೇಕು. ಆದರೆ ಇದು ಸುಲಭದ ಕೆಲಸವಾಗಿರಲಿಲ್ಲ. ಹೊಸ ಉತ್ಪನ್ನ ತಯಾರಿಸಲು ನಿತಿನ್ ಸುಮಾರು 10 ಲಕ್ಷ ರೂ. ಹೂಡಿಕೆ ಮಾಡಿದರು. ಅಷ್ಟೇ ಅಲ್ಲ, ಅವರ ಪತ್ನಿಯೂ ತಮ್ಮ ಉಳಿತಾಯದ ಬಹುಪಾಲನ್ನು ಈ ಪ್ರಯತ್ನಕ್ಕೆ ನೀಡಿದರು. ಅಗತ್ಯ ಬಿದ್ದಾಗ ತಮ್ಮ ಆಭರಣಗಳನ್ನೂ ಅಡಮಾನ ಇಟ್ಟರು. ಕುಟುಂಬದ ಕೆಲವರು ಈ ನಿರ್ಧಾರದ ಬಗ್ಗೆ ಪ್ರಶ್ನೆ ಎತ್ತಿದರು. ಆದರೂ ನಿತಿನ್ ಹಿಂದೆ ಸರಿಯಲಿಲ್ಲ.
600 ಪ್ರಯೋಗಗಳ ನಂತರ ಸಿಕ್ಕಿತು ಯಶಸ್ಸು!
ನೀರಿಲ್ಲದೆ ಕಾರನ್ನು ಹೇಗೆ ಸ್ವಚ್ಛಗೊಳಿಸುವುದು? ಈ ಪ್ರಶ್ನೆಗೆ ಉತ್ತರ ಹುಡುಕಲು ನಿತಿನ್ ಸುಮಾರು ಎರಡು ವರ್ಷಗಳ ಕಾಲ ಪ್ರಯೋಗ ನಡೆಸಿದರು. ಒಂದಲ್ಲ, ಎರಡಲ್ಲ... ಸುಮಾರು 600 ವಿವಿಧ ಫಾರ್ಮುಲಾಗಳನ್ನು ಪ್ರಯೋಗಿಸಿದ ಬಳಿಕ ಅವರಿಗೆ ಬೇಕಾದ ಉತ್ತರ ಸಿಕ್ಕಿತು. 2019ರಲ್ಲಿ ನಿತಿನ್ ಸಸ್ಯ ಆಧಾರಿತ ಸ್ವಚ್ಛಗೊಳಿಸುವ ದ್ರಾವಣವೊಂದನ್ನು ಅಭಿವೃದ್ಧಿಪಡಿಸಿದರು.

ಇದರ ವಿಶೇಷತೆ ಏನೆಂದರೆ, ಇದು ಕಾರಿನ ಮೇಲಿನ ಕೊಳೆಯನ್ನು ತೆಗೆಯುವುದರ ಜೊತೆಗೆ ಕಾರಿನ ಬಣ್ಣ ಮತ್ತು ಮೇಲ್ಮೈಯನ್ನು ರಕ್ಷಿಸುವ ಉದ್ದೇಶವನ್ನೂ ಹೊಂದಿತ್ತು. ಐದು ವಿವಿಧ ಸಸ್ಯಗಳಿಂದ ಪಡೆದ ಸಾವಯವ ಅಂಶಗಳನ್ನು ಈ ದ್ರಾವಣದಲ್ಲಿ ಬಳಸಲಾಗಿದೆ ಎಂದು ವರದಿಯಾಗಿದೆ. ಇವುಗಳಲ್ಲಿ ಪ್ರತಿಯೊಂದಕ್ಕೂ ನಿರ್ದಿಷ್ಟ ಉದ್ದೇಶವಿದೆ.
ಕಾರನ್ನು ಸ್ವಚ್ಛಗೊಳಿಸುವುದು, ಪೇಂಟ್ ರಕ್ಷಿಸುವುದು ಮತ್ತು ಸೂರ್ಯನ ಯುವಿ ಕಿರಣಗಳಿಂದ ರಕ್ಷಣೆ ನೀಡುವುದು ಇದರ ಉದ್ದೇಶಗಳಲ್ಲಿ ಸೇರಿವೆ. ಅಂದರೆ, ಸಾಮಾನ್ಯವಾಗಿ ಒಂದು ಕಾರು ತೊಳೆಯಲು ಬೇಕಾಗುವ ಸುಮಾರು 25 ಲೀಟರ್ ನೀರಿನ ಅಗತ್ಯವನ್ನೇ ಇದರಿಂದ ಕಡಿಮೆ ಮಾಡಬಹುದು!
10 ಲಕ್ಷದಿಂದ 10 ಕೋಟಿಗೆ!
ನೀರನ್ನು ಉಳಿಸುವ ಉದ್ದೇಶದಿಂದ ಆರಂಭವಾದ ಈ ಪ್ರಯೋಗ ನಿಧಾನವಾಗಿ ದೊಡ್ಡ ಉದ್ಯಮವಾಗಿ ಬೆಳೆಯಿತು. ವರದಿಗಳ ಪ್ರಕಾರ, ಆರಂಭದಲ್ಲಿ ಹೂಡಿಕೆ ಮಾಡಿದ್ದ 10 ಲಕ್ಷ ರೂ. ಬಂಡವಾಳ ಐದು ವರ್ಷಗಳಲ್ಲಿ ಸುಮಾರು 10 ಕೋಟಿ ರೂಪಾಯಿಯ ಹೂಡಿಕೆಯಾಗಿ ಬೆಳೆದಿದೆ.
ಇಂದು "GoWaterless" ಹೆಸರಿನ ಈ ಉದ್ಯಮದ 200ಕ್ಕೂ ಹೆಚ್ಚು ಫ್ರಾಂಚೈಸಿಗಳು 22 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ. ಮನೆಯ ಬಾಗಿಲಿಗೇ ಬಂದು ಕಾರು ಸ್ವಚ್ಛಗೊಳಿಸುವ ಸೇವೆಯನ್ನೂ ಕಂಪನಿ ನೀಡುತ್ತಿದೆ. ಇದರ ಮೂಲಕ ಗ್ರಾಹಕರಿಗೂ ಅನುಕೂಲ. ನೀರಿನ ಬಳಕೆಯೂ ಕಡಿಮೆ.
ನಿತಿನ್ ಶರ್ಮಾ ಅವರ ನೀರಿಲ್ಲದ ಕಾರು ತೊಳೆಯುವ ಮಾದರಿಯಿಂದ ಪ್ರತಿದಿನ ಸುಮಾರು 12 ಲಕ್ಷ ಲೀಟರ್ ನೀರು ಉಳಿಸಲಾಗುತ್ತಿದೆ ಎಂದು ವರದಿಯಾಗಿದೆ. ಒಂದು ಕಾರು ತೊಳೆಯುವಾಗ ನಾವು ಉಳಿಸುವ ಕೆಲವು ಲೀಟರ್ ನೀರು ಸಣ್ಣ ವಿಚಾರದಂತೆ ಕಾಣಬಹುದು. ಆದರೆ ಸಾವಿರಾರು ಮಂದಿ ಹೀಗೆ ಮಾಡಿದರೆ? ಆ ಸಣ್ಣ ಉಳಿತಾಯವೇ ದೊಡ್ಡ ಮೊತ್ತವಾಗಿ ಬದಲಾಗುತ್ತದೆ. ನಾವು ನಿತಿನ್ ಮಾದರಿಯನ್ನು ಅನುಸರಿಸಬಹುದು. ನೀರು ಕಡಿಮೆ ಬಳಸಬಹುದು ಅಥವಾ ಅವರ ಪ್ರಾಡಕ್ಟ್ ಬಳಸಬಹುದು. ಅದು ನಮ್ಮ ಕೈಯಲ್ಲಿದೆ.


Click it and Unblock the Notifications
