ಏ ಕ್ಯಾ ಬಾತ್ ಹೈ: ಪಿಎಫ್ಐ ಜೊತೆ ಕೇರಳದ 873 ಖಾಕಿಗಳ ಲಿಂಕ್!
ತಿರುವನಂತಪುರಂ, ಅಕ್ಟೋಬರ್ 04: ಕೇರಳದ 873 ಪೊಲೀಸರು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಜೊತೆಗೆ ನಂಟು ಹೊಂದಿರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಹಿರಂಗಪಡಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಮಂಗಳವಾರ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ವರದಿ ಸಲ್ಲಿಸಿದ್ದು, ಪಿಎಫ್‌ಐ ಜೊತೆ ನಂಟು ಹೊಂದಿರುವ ಕೇರಳ ಪೊಲೀಸ್ ಅಧಿಕಾರಿಗಳ ಪಟ್ಟಿಯನ್ನು ಬಹಿರಂಗಪಡಿಸಿದೆ. ಈ ವರದಿ ಪ್ರಕಾರ, ಸಬ್-ಇನ್‌ಸ್ಪೆಕ್ಟರ್ (ಎಸ್‌ಐ) ಮತ್ತು ಸ್ಟೇಷನ್ ಹೆಡ್ ಆಫೀಸರ್ (ಎಸ್‌ಎಚ್‌ಒ) ಶ್ರೇಣಿಯ ಅಧಿಕಾರಿಗಳು ಸೇರಿದಂತೆ ಕೇರಳ ಪೊಲೀಸ್ ಅಧಿಕಾರಿಗಳನ್ನು ಕೇಂದ್ರ ಏಜೆನ್ಸಿ ವಿಚಾರಣೆ ನಡೆಸುತ್ತಿದೆ.
ಈ ಅಧಿಕಾರಿಗಳ ಆರ್ಥಿಕ ವಿವರಗಳನ್ನೂ ಎನ್‌ಐಎ ಪರಿಶೀಲಿಸುತ್ತಿದೆ. ಪಿಎಫ್‌ಐ ಕಾರ್ಯಕರ್ತರಿಗೆ ಪ್ರಮುಖ ಮಾಹಿತಿಯನ್ನು ಈ ಅಧಿಕಾರಿಗಳು ಸೋರಿಕೆ ಮಾಡಿದ್ದಾರೆ ಎಂದು ಎನ್‌ಐಎ ಹೇಳಿದೆ.

ಜಿಹಾದಿಗಳಿಗೆ ಸಾಥ್ ನೀಡಿದ ಪಿಎಫ್ಐ
ರಾಷ್ಟ್ರೀಯ ತನಿಖಾ ಸಂಸ್ಥೆಗಳು ದಾಳಿ ನಡೆಸುವ ಸಂದರ್ಭಗಳಲ್ಲಿ ಜಿಹಾದಿಗಳಿಗೆ ಪಿಎಫ್ಐ ಸಂಘಟನೆ ಕಾರ್ಯಕರ್ತರು ಸಹಾಯ ಮಾಡುತ್ತಿದ್ದರು ಎಂದು ಎನ್ಐಎ ತಿಳಿಸಿದೆ. ಇಡಿ ದಾಳಿಗಳ ಬಗ್ಗೆ ಪಿಎಫ್‌ಐ ಕಾರ್ಯಕರ್ತರಿಗೆ ಮೊದಲೇ ಮಾಹಿತಿ ನೀಡುತ್ತಿದ್ದರು. ಇದರಿಂದ ದೋಷಾರೋಪಣೆಯ ದಾಖಲೆಗಳು ಮತ್ತು ವಸ್ತುಗಳು ಹಾಗೂ ಹಣವನ್ನು ಮರೆಮಾಚಲು ಸಹಾಯವಾಗುತ್ತಿತ್ತು. ರಾಷ್ಟ್ರದಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳನ್ನು ಪ್ರಾಯೋಜಿಸಿದ ಆರೋಪದ ಮೇಲೆ ಎನ್‌ಐಎ ಸಂಘಟನೆಯ ವಿರುದ್ಧ ಎರಡು ಸುತ್ತಿನಲ್ಲಿ ದಾಳಿ ನಡೆಸಲಾಗಿತ್ತು.

250 ಜನರನ್ನು ಅರೆಸ್ಟ್ ಮಾಡಿದ್ದ ಇಡಿ ಅಧಿಕಾರಿಗಳು
ಭಾರತದಾದ್ಯಂತ ಹಲವೆಡೆ ಎರಡು ಬಾರಿ ರಾಷ್ಟ್ರೀಯ ತನಿಖಾ ತಂಡಗಳು ಸರಣಿ ದಾಳಿ ನಡೆಸಿದವು. ಮೊದಲ ಹಂತದಲ್ಲಿ ಸೆಪ್ಟೆಂಬರ್ 22ರಂದು ದಾಳಿ ನಡೆಸಿದ್ದು, ಸೆಪ್ಟೆಂಬರ್ 27 ರಂದು ಅನೇಕ ರಾಜ್ಯಗಳಲ್ಲಿ ಎರಡನೇ ಬಾರಿ ದಾಳೆ ನಡೆಸಲಾಗಿತ್ತು. ಇದರ ಪರಿಣಾಮವಾಗಿ ಪಿಎಫ್ಐಗೆ ಸಂಬಂಧಿಸಿದ ಕನಿಷ್ಠ 250 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿತ್ತು. ತದನಂತರ ಸೆಪ್ಟೆಂಬರ್ 28ರಂದು ಕೇಂದ್ರ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಅದರ ಸಹವರ್ತಿ ಸಂಘಟನೆಗಳನ್ನು 5 ವರ್ಷಗಳ ಕಾಲ ನಿಷೇಧಿಸಿತು. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಸಂಸ್ಥೆಗಳು ಕಾನೂನುಬಾಹಿರ ಸಂಘಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸರ್ಕಾರವು ಸಮರ್ಥಿಸಿಕೊಂಡಿತ್ತು.

ದೇಶದಲ್ಲಿ ಸಿಎಫ್ಐ ಜೊತೆಗೆ ಸಂಘಟನೆಗಳಿಗೆ ನಿರ್ಬಂಧ
ಪಿಎಫ್ಐ ಜೊತೆಗೆ ನಿಷೇಧಿಸಲಾದ ಸಂಬಂಧಗಳಲ್ಲಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ರಿಹ್ಯಾಬ್ ಇಂಡಿಯಾ ಫೌಂಡೇಶನ್, ನ್ಯಾಷನಲ್ ಕಾನ್ಫ್ ಆಫ್ ಹ್ಯೂಮನ್ ರೈಟ್ಸ್ ಆರ್ಗ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರೆಹಬ್ ಫೌಂಡೇಶನ್, ಕೇರಳ ಸೇರಿವೆ. ಎನ್‌ಐಎ ಅಧಿಕಾರಿಗಳು ದಾಳಿಯ ಸಮಯದಲ್ಲಿ ದೇಶದ ಸುಮಾರು 17 ರಾಜ್ಯಗಳಲ್ಲಿರುವ ಪಿಎಫ್‌ಐ ಕೇಂದ್ರಗಳಿಂದ ಹಲವಾರು ದೋಷಾರೋಪಣೆ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಅವುಗಳಲ್ಲಿ 'ಮಿಷನ್ 2047' ಗೆ ಸಂಬಂಧಿಸಿದ ಕರಪತ್ರ ಮತ್ತು ಸಿಡಿ ಕೂಡ ಸೇರಿತ್ತು.

ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಪಿಎಫ್ಐ ಅಡಗುತಾಣ
ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಪಿಎಫ್‌ಐ ಜಿಹಾದಿ ಅಡಗುತಾಣಗಳಿಂದ ಅಪಾರ ಪ್ರಮಾಣದ ದಾಖಲೆಗಳಿಲ್ಲದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಸುಲಭವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಐಇಡಿಗಳನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ಕಿರು ಕೋರ್ಸ್‌ನಲ್ಲಿ ದಾಖಲಿಸಲಾಗಿದೆ. ಇದರ ಮಧ್ಯೆ ಉತ್ತರ ಪ್ರದೇಶದ ಪಿಎಫ್‌ಐ ನಾಯಕತ್ವದಿಂದ ಐಸಿಸ್ ಮತ್ತು ಗಜ್ವಾ-ಎ-ಹಿಂದ್‌ಗೆ ಸಂಬಂಧಿಸಿದ ವೀಡಿಯೊಗಳನ್ನು ಒಳಗೊಂಡಿರುವ ಪೆನ್ ಡ್ರೈವ್‌ಗಳು ಮತ್ತು ತಮಿಳುನಾಡು ಪಿಎಫ್‌ಐ ನಾಯಕತ್ವದಿಂದ ಮರೈನ್ ರೇಡಿಯೋ ಸೆಟ್‌ಗಳು ಪತ್ತೆಯಾಗಿವೆ. ವೈರ್‌ಲೆಸ್ ಸಂವಹನ ಸಾಧನಗಳು ಸೇರಿದಂತೆ ಹಲವು ಇತರ ವಸ್ತುಗಳನ್ನು ಸಹ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.












Click it and Unblock the Notifications