ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಪಾಳಯದಿಂದ ಹೊಸ ಹೆಸರು ಗೆಹ್ಲೋಟ್!
ನವದೆಹಲಿ, ಜೂನ್ 1: ದ್ರೌಪದಿ ಮುರ್ಮು ಜತೆಗೆ ಇದೀಗ ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಪಾಳಯದಿಂದ ಮತ್ತೊಂದು ಹೆಸರು ಕೇಳಿ ಬರುತ್ತಿದೆ. ಅವರೇ ತರುಣ್ ಚಂದ್ ಗೆಹ್ಲೋಟ್!
ಕೇಂದ್ರ ಸರಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರ ಸಚಿವರಾಗಿರುವ ಗೆಹ್ಲೋಟ್ ಹೆಸರು ಸಾಂಭಾವ್ಯ ರಾಷ್ಟ್ರಪತಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಹಿಂದುಳಿದ ವರ್ಗದವರ ಮತಗಳನ್ನು ಸೆಳೆಯಲು ಬಿಜೆಪಿ ಮುರ್ಮು ಅಥವಾ ಗೆಹ್ಲೋಟ್ ಹೆಸರನ್ನು ಅಂತಿಮಗೊಳಿಸಲಿದೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಆರ್.ಎಸ್.ಎಸ್ -ಬಿಜೆಪಿ ಸಭೆಯಲ್ಲೂ ದಲಿತರು ಅಥವಾ ಬುಡಕಟ್ಟು ಜನರ ಹೆಸರನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಲಾಗಿದ್ದು ಗೆಹ್ಲೋಟ್ ಆಯ್ಕೆ ಕುತೂಹಲ ಹುಟ್ಟಿಸಿದೆ.[ಅಡ್ವಾಣಿ ಕನಸಿನ ರಾಷ್ಟ್ರಪತಿ ಹುದ್ದೆಗೆ ಮುಳ್ಳಾಯ್ತಾ ಬಾಬ್ರಿ ಕೇಸ್?]

ಈಗಾಗಲೇ ಹೆಚ್ಚಿನವರು ದ್ರೌಪದಿ ಮುರ್ಮು ಬಗ್ಗೆ ಆಸಕ್ತಿ ತಾಳಿದ್ದರೆ. ಇದೇ ವೇಳೆ ಬಿಜೆಪಿ ಗೆಹ್ಲೋಟ್ ಹೆಸರನ್ನೂ ತೇಲಿ ಬಿಟ್ಟಿದೆ. ಮುರ್ಮು ದಲಿತ ಬುಡಕಟ್ಟು ಮಹಿಳೆಯಾಗಿರುವುದರಿಂದ ಅವರು ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾದರೆ ವಿರೋಧ ಪಕ್ಷಗಳಿಗೆ ತಳ್ಳಿ ಹಾಕಲು ಕಾರಣಗಳಿರುವುದಿಲ್ಲ ಎಂಬುದು ಬಿಜೆಪಿ ಆಲೋಚನೆ. ಜತೆಗೆ ಆಕೆ ಒಡಿಶಾಗೂ ಸೇರಿರುವುದರಿಂದ ಬಿಜೆಡಿ ಕೂಡಾ ಅವರಿಗೆ ಬೆಂಬಿಸಬಹುದು ಎಂಬುದು ಬಿಜೆಪಿಯ ತಂತ್ರವಾಗಿದೆ.[ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಲು ದೇವೇಗೌಡರಿಗೆ ಆಫರ್!]
ಹಿಂದುಳಿದ ವರ್ಗದಿಂದ ಬಂದ ತರುಣ್ ಚಂದ್ರ ಗೆಹ್ಲೋಟ್ ರನ್ನು ಕಣಕ್ಕಿಳಿಸಲು ಬಿಜೆಪಿ ಉತ್ಸುಕವಾಗಿದೆ. ಇತ್ತೀಚೆಗೆ ನಡೆದ ಬಿಜೆಪಿಯ ಹಲವು ಚರ್ಚೆಗಳಲ್ಲಿ ಅವರ ಹೆಸರು ಪ್ರಸ್ತಾಪವಾಗಿದೆ. ಈ ಇಬ್ಬರನ್ನು ಚುನಾವಣಾ ಕಣಕ್ಕಿಳಿಸಿದರೆ ವಿರೋಧ ಪಕ್ಷಗಳಿಗೆ ಬೆಂಬಲಿಸದೇ ವಿಧಿ ಇರುವುದಿಲ್ಲ ಎಂಬುದು ಬಿಜೆಪಿಯ ತಂತ್ರವಾಗಿದೆ.
ಇನ್ನು ಈಗಾಗಲೇ ವಿರೋಧ ಪಕ್ಷಗಳು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿಯವರನ್ನು ಚುನಾವಣಾ ಕಣಕ್ಕಿಳಿಸಲು ಹೊರಟಿವೆ. ಜತೆಗೆ ಪ್ರಣಬ್ ಮುಖರ್ಜಿ ಎರಡನೇ ಅವಧಿಗೆ ಮುಂದುವರಿಯುವುದಿದ್ದರೆ ಅವರನ್ನೂ ಬೆಂಬಲಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.












Click it and Unblock the Notifications