ದೆಹಲಿ: ವಿವಾದಿತ 3 ಕೃಷಿ ಕಾಯ್ದೆ ರದ್ದುಗೊಳಿಸಲು 1 ಮಸೂದೆ ರಚನೆ
ನವದೆಹಲಿ, ನವೆಂಬರ್ 23: ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಮಸೂದೆ ರಚನೆಗೆ ಕೇಂದ್ರ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪ್ರಧಾನಮಂತ್ರಿ ಕಚೇರಿ ಅಧಿಕೃತ ಅನುಮೋದನೆಗಾಗಿ ಎದುರು ನೋಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಮಸೂದೆಗಳ ಬದಲಿಗೆ ಒಂದು ಸಮಗ್ರ ಮಸೂದೆಯನ್ನು ರಚಿಸಲಾಗಿದೆ. ಕೇಂದ್ರ ಕೃಷಿ ಸಚಿವಾಲಯ ಕೂಡ ಮಸೂದೆ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ರೈತರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿರುವ ಕನಿಷ್ಠ ಬೆಂಬಲ ಬೆಲೆಯನ್ನು ಮಾರ್ಗಸೂಚಿಯಲ್ಲಿ ಸೇರ್ಪಡೆಗೊಳಿಸಲು ಉದ್ದೇಶಿಸಲಾಗಿದೆ.
ಪ್ರಸ್ತಾವಿತ ಮಸೂದೆಯು ಮೂರು ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ರಚಿಸಲಾದ ಎಲ್ಲಾ ನಿಯಮಗಳನ್ನು ತಡೆಹಿಡಿಯುವ ನಿಬಂಧನೆಗಳನ್ನು ಒಳಗೊಂಡಿರುತ್ತದೆ. ಭವಿಷ್ಯದಲ್ಲಿ ಸರ್ಕಾರವು ಈ ವಿವಾದಿತ ಕಾಯ್ದೆಯಡಿ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು ಶೂನ್ಯ ಮತ್ತು ಅನೂರ್ಜಿತವಾಗಿರುತ್ತವೆ ಎಂದು ಮೂಲಗಳು ಸೇರಿಸಲಾಗಿದೆ. ಯಾವುದೇ ಕಛೇರಿಗಳನ್ನು ಸ್ಥಾಪಿಸಿದ್ದಲ್ಲಿ ಅವುಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗುತ್ತದೆ.

ಪ್ರಧಾನಿ ಮೋದಿಯವರಿಂದ ಕೃಷಿ ಕಾಯ್ದೆ ರದ್ದು ಘೋಷಣೆ
ಕೇಂದ್ರ ಸರ್ಕಾರದಿಂದ ಜಾರಿಗೆ ತರಲಾಗಿರುವ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ನವೆಂಬರ್ 19ರಂದು ಪ್ರಧಾನಿ ಮೋದಿ ಘೋಷಿಸಿದರು. ಗುರುನಾನಕ್ ಜಯಂತಿಯ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, "ಎಲ್ಲಾ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ. ನಮ್ಮ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಅದರಲ್ಲೂ ವಿಶೇಷವಾಗಿ ಸಣ್ಣ ರೈತರ ಕಲ್ಯಾಣಕ್ಕಾಗಿ , ದೇಶದ ಹಿತದೃಷ್ಟಿಯಿಂದ, ಹಳ್ಳಿಯ ಬಡವರ ಉಜ್ವಲ ಭವಿಷ್ಯಕ್ಕಾಗಿ, ಸಂಪೂರ್ಣ ಪ್ರಾಮಾಣಿಕತೆಯಿಂದ ಒಳ್ಳೆಯ ಉದ್ದೇಶದಿಂದ ಈ ಕಾನೂನನ್ನು ತಂದಿದ್ದೆವು. ಆದರೆ ಅಂತಹ ಪವಿತ್ರವಾದ, ಸಂಪೂರ್ಣ ಶುದ್ಧವಾದ ರೈತರ ಅನುಕೂಲಕ್ಕಾಗಿ ನಾವು ಪ್ರಯತ್ನಿಸಿದರೂ ಅದನ್ನು ಕೆಲವು ರೈತರಿಗೆ ವಿವರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ನಾವು ಎಲ್ಲಾ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ," ಎಂದು ಹೇಳಿದ್ದರು.

ವಿವಾದಿತ ಕೃಷಿ ಕಾಯ್ದೆ ರದ್ದಾಗುವವರೆಗೂ ರೈತರ ಪ್ರತಿಭಟನೆ
ರಾಷ್ಟ್ರ ರಾಜಧಾನಿಯ ಗಡಿಯಲ್ಲಿರುವ ಆರು ಪ್ರತಿಭಟನಾ ಸ್ಥಳಗಳಲ್ಲಿ ರೈತರ ಹೋರಾಟವನ್ನು ಮುಂದುವರಿಸಲಾಗುವುದು. ಸಂಸತ್ತಿನಲ್ಲಿ ಕಾಯ್ದೆಗಳನ್ನು ಔಪಚಾರಿಕವಾಗಿ ರದ್ದುಗೊಳಿಸುವವರೆಗೆ ತಮ್ಮ ನಿಗದಿತ ಪ್ರತಿಭಟನೆಯು ನಿಲ್ಲುವುದಿಲ್ಲ ಎಂದು ರೈತ ಸಂಘಟನೆಗಳ ಒಕ್ಕೂಟ ಸಂಸ್ಥೆ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.

ರೈತರ ಸಮಸ್ಯೆ ಬಗ್ಗೆ ಎಚ್ಚರಿಸಿದ ರೈತರು
ವಿವಾದಿತ ಕೃಷಿ ಕಾಯ್ದೆಗಳಷ್ಟೇ ರೈತರ ಸಮಸ್ಯೆ ಆಗಿರುವುದಿಲ್ಲ. ಇವುಗಳನ್ನು ರದ್ದುಗೊಳಿಸುವುದರ ಜೊತಗೆೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕು. ರೈತರೊಂದಿಗೆ ಚರ್ಚಿಸುವುದಕ್ಕೆ ಕೇಂದ್ರ ಸರ್ಕಾರದಿಂದ ನಿಯೋಗವನ್ನು ಕಳುಹಿಸಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹಿಸಿದೆ.

ಕೇಂದ್ರ ಸರ್ಕಾರಕ್ಕೆ ರೈತರಿಂದ ಆರು ಬೇಡಿಕೆಗಳು
* MSP ಮೇಲೆ ತಮ್ಮ ಪ್ರಮುಖ ಬೇಡಿಕೆಯನ್ನು ಎತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ, ಪತ್ರದಲ್ಲಿ ಹೀಗೆ ಹೇಳಿದೆ: "ಸಮಗ್ರ ಉತ್ಪಾದನಾ ವೆಚ್ಚದ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆಯನ್ನು (C2+50%) ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಲ್ಲಾ ರೈತರ ಕಾನೂನುಬದ್ಧ ಹಕ್ಕನ್ನು ಮಾಡಬೇಕು. ಇದರಿಂದ ದೇಶದ ಪ್ರತಿಯೊಬ್ಬ ರೈತರ ಬೆಳೆಗೆ ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆಯನ್ನಾದರೂ ಖಾತ್ರಿಪಡಿಸಿಕೊಳ್ಳಬಹುದು.
* "11 ಸುತ್ತಿನ ಮಾತುಕತೆಯ ನಂತರ, ನೀವು ದ್ವಿಪಕ್ಷೀಯ ಪರಿಹಾರಕ್ಕಿಂತ ಏಕಪಕ್ಷೀಯ ಘೋಷಣೆಯ ಮಾರ್ಗವನ್ನು ಆರಿಸಿಕೊಂಡಿದ್ದೀರಿ ಎಂದು ನಾವು ಗಮನಿಸಿದ್ದೇವೆ; ಅದೇನೇ ಇದ್ದರೂ, ನೀವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದ್ದಕ್ಕಾಗಿ ನಮಗೆ ಸಂತೋಷವಾಗಿದೆ. ನಾವು ಈ ಘೋಷಣೆಯನ್ನು ಸ್ವಾಗತಿಸುತ್ತೇವೆ ಮತ್ತು ನಿಮ್ಮ ಸರ್ಕಾರವು ಈ ಭರವಸೆಯನ್ನು ಶೀಘ್ರವಾಗಿ ಮತ್ತು ಪೂರ್ಣವಾಗಿ ಪೂರೈಸುತ್ತದೆ ಎಂದು ಭಾವಿಸುತ್ತೇವೆ.
* ವಿದ್ಯುತ್ ಬಿಲ್ ಮತ್ತು ವಾಯು ಮಾಲಿನ್ಯದ ಮೇಲೆ ರೈತರ ವಿರುದ್ಧ ಯಾವುದೇ ದಂಡದ ಕ್ರಮವನ್ನು ರದ್ದುಪಡಿಸುವ ಬೇಡಿಕೆಯ ಹೊರತಾಗಿ, ಪತ್ರದಲ್ಲಿ ಕಳೆದ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿ ಘಟನೆಯನ್ನು ಉಲ್ಲೇಖಿಸಲಾಗಿದೆ. ಅಂದು ಒಂದು ವಾಹನ ಸೇರಿದಂತೆ ಮೂರು ವಾಹನಗಳ ಬೆಂಗಾವಲು ಡಿಕ್ಕಿ ಹೊಡೆದು ನಾಲ್ವರು ಪ್ರತಿಭಟನಾಕಾರರು ಸಾವನ್ನಪ್ಪಿದರು. "ಲಖಿಂಪುರ ಖೇರಿ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಮತ್ತು ಸೆಕ್ಷನ್ 120 ಬಿ ಆರೋಪಿ ಅಜಯ್ ಮಿಶ್ರಾ ಟೆನಿ ಇನ್ನೂ ಸ್ವತಂತ್ರವಾಗಿ ತಿರುಗಾಡುತ್ತಿದ್ದಾರೆ. ನಿಮ್ಮ ಸಂಪುಟದಲ್ಲೇ ಸಚಿವರಾಗಿಯೂ ಉಳಿದಿದ್ದಾರೆ. ಅವರು ನಿಮ್ಮೊಂದಿಗೆ ಮತ್ತು ಇತರ ಹಿರಿಯ ಸಚಿವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಅವರನ್ನು ವಜಾಗೊಳಿಸಬೇಕು ಮತ್ತು ಬಂಧಿಸಬೇಕು," ಎಂದು ಪತ್ರದಲ್ಲಿ ತಿಳಿಸಲಾಗಿದೆ.
* ದೆಹಲಿ, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಈ ಚಳವಳಿಯ ಸಂದರ್ಭದಲ್ಲಿ (ಜೂನ್ 2020 ರಿಂದ ಇಲ್ಲಿಯವರೆಗೆ) ನೂರಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಪ್ರತಿಭಟನಾಕಾರ ರೈತರ ವಿರುದ್ಧ ತಕ್ಷಣದ ಕ್ರಮವನ್ನು ಹಿಂಪಡೆಯುವುದು.
* ಈ ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಇದುವರೆಗೆ ಸುಮಾರು 700 ರೈತರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಅವರ ಕುಟುಂಬಗಳಿಗೆ ಪರಿಹಾರ ಮತ್ತು ಪುನರ್ವಸತಿ ಬೆಂಬಲ ನೀಡಬೇಕು. ಹುತಾತ್ಮ ರೈತರ ಸ್ಮರಣಾರ್ಥ ಹುತಾತ್ಮರ ಸ್ಮಾರಕ ನಿರ್ಮಿಸಲು ಸಿಂಘು ಗಡಿಯಲ್ಲಿ ಭೂಮಿ ನೀಡಬೇಕು.
* "ಪ್ರಧಾನಿಯವರೇ, ಈಗ ನಾವು ಮನೆಗೆ ಹಿಂತಿರುಗಬೇಕು ಎಂದು ರೈತರಿಗೆ ನೀವು ಮನವಿ ಮಾಡಿದ್ದೀರಿ. ನಾವು ಬೀದಿಗಳಲ್ಲಿ ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ ಎಂದು ನಿಮಗೆ ಭರವಸೆ ನೀಡಲು ನಾವು ಬಯಸುತ್ತೇವೆ. ಈ ಇತರ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಿದ ನಂತರ, ನಾವು ನಮ್ಮ ಮನೆಗಳು, ಕುಟುಂಬಗಳು ಮತ್ತು ಕೃಷಿಗೆ ಮರಳಬೇಕೆಂದು ನಾವು ಬಯಸುತ್ತೇವೆ. ನಿಮಗೂ ಅದೇ ಬೇಕಾದರೆ, ಮೇಲಿನ ಆರು ವಿಷಯಗಳ ಕುರಿತು ಸರ್ಕಾರವು ಕೂಡಲೇ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಮಾತುಕತೆಯನ್ನು ಪುನರಾರಂಭಿಸಬೇಕು," ಎಂದು ಪತ್ರದಲ್ಲಿ ತಿಳಿಸಲಾಗಿದೆ.