ರೈತರ ವಿಜಯಯಾತ್ರೆ: ಸರ್ಕಾರವನ್ನೇ ಸೋಲಿಸಿದ ಅನ್ನದಾತರು ಸ್ವಗ್ರಾಮಗಳಿಗೆ ವಾಪಸ್
ನವದೆಹಲಿ, ಡಿಸೆಂಬರ್ 11: ವಿವಾದಿತ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಿರಂತರ 15 ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ ರೈತರ ಹೋರಾಟಕ್ಕೆ ಫಲ ಸಿಕ್ಕಿದೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ್ದು, ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದೆ. ಇದರ ಬೆನ್ನಲ್ಲೇ ರೈತರ ವಿಜಯಯಾತ್ರೆ ಶನಿವಾರ ನಡೆಯಲಿದೆ.
ನವದೆಹಲಿಯ ಸಿಂಘು ಗಡಿ ಮತ್ತು ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ವಿಜಯಯಾತ್ರೆಯ ಮೂಲಕ ತಮ್ಮ ತಮ್ಮ ಊರುಗಳಿಗೆ ವಾಪಸ್ ಆಗಲಿದ್ದಾರೆ. ಈಗಾಗಲೇ ಪ್ರತಿಭಟನೆಯನ್ನು ಅಂತ್ಯಗೊಳಿಸಿದ ರೈತರು, ಪಂಜಾಬ್ ಮತ್ತು ಹರಿಯಾಣದ ತಮ್ಮ ಸ್ವಗ್ರಾಮಗಳಿಗೆ ವಿಜಯಯಾತ್ರೆ ಮೂಲಕ ಹಿಂತಿರುಗಲಿದ್ದಾರೆ.
ಹವಾಮಾನದ ಜೊತೆ ಪ್ರಕೃತಿ ಒಡ್ಡುತ್ತಿದ್ದ ಸವಾಲುಗಳನ್ನು ಎದುರಿಸುವುದಕ್ಕೆ ರೈತರು ನಿರ್ಮಿಸಿದ್ದ ತಾತ್ಕಾಲಿಕ ಶಿಬಿರಗಳನ್ನು ಕಿತ್ತು ಹಾಕುತ್ತಿದ್ದಾರೆ. "ಭಯೋತ್ಪಾದಕರು" ಮತ್ತು "ಖಲಿಸ್ತಾನಿಗಳು" ಎಂಬ ಟ್ಯಾಗ್‌ಗಳನ್ನು ಎದುರಿಸಿದ ಆಂದೋಲನ ಆ ಮೂಲಕ ಅಂತ್ಯಗೊಳ್ಳುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಸುದೀರ್ಘ ಅವಧಿವರೆಗೂ ಆಂದೋಲನ ನಡೆಸಿದ ರೈತರನ್ನು ಸ್ವಾಗತಿಸಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಶುಕ್ರವಾರಕ್ಕೆ ನಿಗದಿಯಾಗಿದ್ದ ವಿಜಯಯಾತ್ರೆ:
ರೈತರ ವಿಜಯಯಾತ್ರೆಯನ್ನು ಶುಕ್ರವಾರಕ್ಕೆ ನಿಗದಿಗೊಳಿಸಲಾಗಿತ್ತು. ಆದರೆ, ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಹಾಗೂ 11 ಸಶಸ್ತ್ರ ಪಡೆ ಯೋಧರು ಹುತಾತ್ಮರಾದ ಹಿನ್ನೆಲೆ ರೈತರ ವಿಜಯಯಾತ್ರೆ ಅನ್ನು ಶನಿವಾರಕ್ಕೆ ಮುಂದೂಡಲಾಗಿತ್ತು.
ಪ್ರಧಾನಿ ಘೋಷಣೆ ಹೊರತಾಗಿ ರೈತರ ಹಲವು ಬೇಡಿಕೆ:
ನವದೆಹಲಿಯ ಗಡಿಯಲ್ಲಿ ಸುದೀರ್ಘ ಅವಧಿವರೆಗೂ ಆಂದೋಲನ ನಡೆಸಿದ ರೈತರ ಪ್ರಮುಖ ಕೂಗು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದೇ ಆಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು. ಇದರ ಹೊರತಾಗಿಯೂ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ರೈತರು ತಮ್ಮ ಆಂದೋಲನವನ್ನು ಮುಂದುವರಿಸಿದರು. ರೈತರ ಎಲ್ಲ ಬೇಡಿಕೆಗಳಿಗೆ ಲಿಖಿತ ರೂಪದಲ್ಲಿ ಭರವಸೆ ನೀಡುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.

ರೈತರ ಬೇಡಿಕೆಗಳಿಗೆ ಒಪ್ಪಿದ ಕೇಂದ್ರ ಸರ್ಕಾರ:
ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಕಾನೂನು, ವಿದ್ಯುತ್ ಬಿಲ್ ಮತ್ತು ಪಾರಾಲಿ ಬಿಲ್ ಜಂಕ್, ರೈತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವುದು, ಆಂದೋಲನದ ವೇಳೆ ಮೃತಪಟ್ಟ 700 ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು. ಇದಲ್ಲದೇ ನವದೆಹಲಿಯ ಕೆಂಪು ಕೋಟೆ ಹಿಂಸಾಚಾರದ ಸಂದರ್ಭದಲ್ಲಿ ದಾಖಲಿಸಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಬೇಕು. ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ರನ್ನು ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಕೊಲೆ ಆರೋಪದಡಿಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ಒತ್ತಾಯಿಸಿತು. ಈ ಬಗ್ಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಡಿಸೆಂಬರ್ 9ರಂದು ರೈತರು ತಮ್ಮ ಆಂದೋಲನವನ್ನು ಅಂತ್ಯಗೊಳಿಸಿದರು.
ಮೂರು ಕೃಷಿ ಕಾಯ್ದೆಗಳ ರದ್ಧತಿ 2021 ಮಸೂದೆ ಅಂಗೀಕಾರ
ಕೇಂದ್ರ ಸರ್ಕಾರದ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020, (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ಅನ್ನು ರದ್ದುಗೊಳಿಸುವುದಕ್ಕಾಗಿ ಕೃಷಿ ಕಾಯ್ದೆ ರದ್ಧತಿ 2021ರ ಮಸೂದೆಯನ್ನು ರಚಿಸಲಾಗಿತ್ತು. ಈ ಹಿಂದೆ ನವೆಂಬರ್ 24ರಂದು ಈ ಸಂಬಂಧ ಕೇಂದ್ರ ಸಂಪುಟದ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ನವೆಂಬರ್ 29ರಂದು ಕೃಷಿ ಕಾಯ್ದೆಗಳ ರದ್ದತಿ ಮಸೂದೆ, 2021 ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಧ್ವನಿಮತದ ಮೂಲಕ ಮಸೂದೆ ಅಂಗೀಕರಿಸಲಾಗಿದ್ದು, ರಾಜ್ಯಸಭೆಯಲ್ಲೂ ಯಾವುದೇ ರೀತಿ ಚರ್ಚೆಯಿಲ್ಲದೇ ಅಂಗೀಕರಿಸಲಾಯಿತು.
ವಿವಾದಿತ ಕೃಷಿ ಕಾಯ್ದೆಗಳು ಮತ್ತು ರೈತ ಆಂದೋಲನ
ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ವಿವಿಧ ರೈತ ಸಂಘಗಳ ಆಶ್ರಯದಲ್ಲಿ ಸಾವಿರಾರು ರೈತರು ಕಳೆದ 2020ರ ನವೆಂಬರ್ 26 ರಿಂದ ದೆಹಲಿಯ ಘಾಜಿಪುರ, ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸಿದರು. ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದಿರುವ ರೈತರ ಆಂದೋಲಯದಲ್ಲಿ 700ಕ್ಕೂ ಹೆಚ್ಚು ರೈತರು ಪ್ರಾಣಬಿಟ್ಟಿದ್ದರು ಎಂದು ರೈತ ಮುಖಂಡರು ಹೇಳಿದ್ದು, ಎಲ್ಲರ ಕುಟುಂಬಕ್ಕೂ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.












Click it and Unblock the Notifications