NEET-UG Exam 2023: ಪರೀಕ್ಷಾ ಸಮಯ, ಡ್ರೆಸ್ ಕೋಡ್ ಇತರೆ ನಿಯಮಗಳ ಬಗ್ಗೆ ಮಾಹಿತಿ
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಭಾನುವಾರ ಇಡೀ ದೇಶದಾದ್ಯಂತ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ (NEET) ಪರೀಕ್ಷೆಯನ್ನು ಆಯೋಜಿಸಿದೆ. ದೇಶಾದ್ಯಂತ 20 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, 499 ಸ್ಥಳಗಳಲ್ಲಿ ಈ ಪರೀಕ್ಷೆ ಬರೆಯಲಿದ್ದಾರೆ. ವೈದ್ಯಕೀಯ ಸೇರಿದಂತೆ ಇತರೆ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಪರೀಕ್ಷೆ ನಡೆಯಲಿದೆ.
ಮೇ 7ರ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.20 ಗಂಟೆಯವರೆಗೆ ನಡೆಯಲಿದೆ. 3 ಗಂಟೆ 20 ನಿಮಿಷಗಳ ಅವಧಿಯಲ್ಲಿ 720 ಅಂಕಗಳಿಗೆ 180 ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ಹಾಲ್ ಟಿಕೆಟ್ ಅಥವಾ ಪ್ರವೇಶ ಪತ್ರಗಳನ್ನು neet.nta.nic.in ವಿಳಾಸಕ್ಕೆ ಹೋಗಿ, ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಪಡೆದುಕೊಳ್ಳಬಹುದು.

ನೀಟ್ ಪರೀಕ್ಷೆಯಯಲ್ಲಿ 11 ನೇ ತರಗತಿ ಮತ್ತು 12 ನೇ ತರಗತಿಯ ಜೀವಶಾಸ್ತ್ರ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ಪಠ್ಯವನ್ನು ಆಧರಿಸಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿ ವಿಷಯಕ್ಕೆ ಸಂಬಂಧಪಟ್ಟಂತೆ 45 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಂದು ಪ್ರಶ್ನೆಗೆ ಸರಿಯಾದ ಉತ್ತರ ನೀಡಿದರೆ 4 ಅಂಕ ಸಿಗುತ್ತವೆ, ತಪ್ಪು ಉತ್ತರ ನೀಡಿದರೆ ಒಂದು ಅಂಕವನ್ನು ಕಳೆದುಕೊಳ್ಳಬೇಕಾಗುತ್ತದೆ.
ಈ ಸೂಚನೆಗಳನ್ನು ಗಮನದಲ್ಲಿಟ್ಟುಕೊಳ್ಳಿ
ಪರೀಕ್ಷಾ ಕೇಂದ್ರಕ್ಕೆ ತೆರಳುವ ಅಭ್ಯರ್ಥಿಗಳು ತಮ್ಮ ಹಾಲ್ ಟಿಕೆಟ್ ಜೊತೆ ಮಾನ್ಯವಾದ ಗುರುತಿನ ಚೀಟಿ( ಐಡಿ ಕಾರ್ಡ್) ಅನ್ನು ತೆಗೆದುಕೊಂಡು ಹೋಗಬೇಕು. ಹಾಲ್ ಟಿಕೆಟ್ ತೆಗೆದುಕೊಂಡು ಹೋಗದಿದ್ದರೆ, ಅವರನ್ನು ಪರೀಕ್ಷಾ ಕೇಂದ್ರದ ಒಳಗೆ ಹೋಗಲು ಅನುಮತಿ ನೀಡುವುದಿಲ್ಲ. ಹಾಲ್ ಟಿಕೆಟ್‌ನಲ್ಲಿ ನಮೂದಿಸಿರುವ ವರದಿ ಮಾಡುವ ಸಮಯಕ್ಕೆ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು.
ಇನ್ನು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಡ್ರೆಸ್‌ಕೋಡ್ ಕೂಡ ನಿಗದಿ ಮಾಡಲಾಗಿದೆ. ಉದ್ದನೆಯ ತೋಳುಗಳನ್ನು ಹೊಂದಿರುವ ಬಟ್ಟೆಗಳನ್ನು ಹಾಕಿಕೊಂಡು ಹೋಗುವಂತಿಲ್ಲ. ಆಭರಣಗಳು, ಲೋಹೀಯ ವಸ್ತುಗಳು ಮತ್ತು ಬೂಟುಗಳನ್ನು ಹಾಕಿಕೊಂಡು ಹೋಗುವಂತಿಲ್ಲ, ಕಡಿಮೆ ಹೀಲ್ಸ್ ಚಪ್ಪಲಿ ಮತ್ತು ಸಾಮಾನ್ಯ ಚಪ್ಪಲಿಗಳನ್ನು ಹಾಕಿಕೊಂಡು ಹೋಗಬಹುದು. ಕಾಗದದ ಚೂರುಗಳು, ಬಾಕ್ಸ್, ಕ್ಯಾಲ್ಕುಲೇಟರ್‌ಗಳು, ಪೆನ್ ಡ್ರೈವ್, ಎರೇಸರ್, ಲಾಗ್ ಟೇಬಲ್, ಪೆನ್ಸಿಲ್ ಬಾಕ್ಸ್‌ಗಳನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಲು ಅನುಮತಿ ನೀಡುವುದಿಲ್ಲ.
ಇನ್ನು ಬೆಂಗಳೂರಿನಲ್ಲಿ ನೀಟ್ ಪರೀಕ್ಷೆ ಬರೆಯುತ್ತಿರುವವರು ಸ್ವಲ್ಪ ಬೇಗನೆ ಮನೆಯಿಂದ ಹೊರಡಲು ಮನವಿ ಮಾಡಲಾಗಿದೆ. ಪ್ರಧಾನಿ ಮೋದಿ ಹಲವು ರಸ್ತೆಗಳಲ್ಲಿ ರೋಡ್ ಶೋ ಮಾಡುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಲಿದೆ. ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಮೋದಿ ರೋಡ್ ಶೋ ಮಾರ್ಗಗಳನ್ನು ತಿಳಿದುಕೊಂಡು, ಆ ಮಾರ್ಗಗಳಲ್ಲಿ ಸಂಚರಿಸುವುದನ್ನು ತಪ್ಪಿಸುವುದು ಒಳ್ಳೆಯದು.












Click it and Unblock the Notifications