Breaking News: 2021ನೇ ಸಾಲಿನ ವೈದ್ಯಕೀಯ ವಿಭಾಗದ ನೀಟ್ ಪರೀಕ್ಷಾ ಫಲಿತಾಂಶ ಪ್ರಕಟ
ನವದೆಹಲಿ, ನವೆಂಬರ್ 1: ದೇಶಾದ್ಯಂತ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ 2021ನೇ ಸಾಲಿನ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಯ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸೋಮವಾರ ಪ್ರಕಟಿಸಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET-UG) 2021 ಅನ್ನು ಇಮೇಲ್ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸಲು ಪ್ರಾರಂಭಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಸೋಮವಾರ ರಾತ್ರಿ 8-9 ಗಂಟೆ ಸುಮಾರಿಗೆ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಅಂಕಪಟ್ಟಿಗಳ ಜೊತೆಗೆ ಅಂತಿಮ ಉತ್ತರದ ಕೀಯನ್ನೂ ಬಿಡುಗಡೆ ಮಾಡಲಾಗುತ್ತದೆ. ಫಲಿತಾಂಶವು neet.nta.nic.in ನಲ್ಲಿ ಲಭ್ಯವಿರುತ್ತದೆ.
2021ನೇ ಸಾಲಿನ ನೀಟ್ ಫಲಿತಾಂಶ ಪ್ರಕಟಿಸಲು ಅನುಮತಿ ನೀಡಿದ ಸುಪ್ರೀಂಕೋರ್ಟ್
ಕಳೆದ ಸೆಪ್ಟೆಂಬರ್ 12ರಂದು ಪರೀಕ್ಷೆಯನ್ನು ನಡೆಸಲಾಗಿದ್ದು, 16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು. ಅಭ್ಯರ್ಥಿಯು ಗಳಿಸಿದ ಕಟ್-ಆಫ್ ಮತ್ತು ಅಂಕಗಳ ಆಧಾರದ ಮೇಲೆ NTA ಅಖಿಲ ಭಾರತ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸುತ್ತದೆ.
NEET ಫಲಿತಾಂಶ 2021 ಪ್ರಕಟವಾದ ನಂತರ, ಕೌನ್ಸೆಲಿಂಗ್ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಪದವಿಪೂರ್ವ ವೈದ್ಯಕೀಯ/ದಂತ ಕೋರ್ಸ್‌ಗಳ ಎಲ್ಲಾ ಸೀಟುಗಳಿಗೆ NEET (UG) ಮೂಲಕ ಪ್ರವೇಶವನ್ನು ಮಾಡಲಾಗುತ್ತದೆ. 2021ನೇ ಸಾಲಿನ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿದು ಬಂದಿದೆ.ಕಟ್-ಆಫ್‌ಗಿಂತ ಹೆಚ್ಚು ಅಂಕ ಗಳಿಸಿದವರು ಅಖಿಲ ಭಾರತ ಕೋಟಾ ಕೌನ್ಸೆಲಿಂಗ್‌ನ ಶೇಕಡಾ 15ರಷ್ಟು ಅರ್ಹರಾಗುತ್ತಾರೆ. 15 ಪ್ರತಿಶತದಲ್ಲಿ ಅಖಿಲ ಭಾರತ ಕೋಟಾವನ್ನು NEET 2021 ರ ಶ್ರೇಣಿಯ ಆಧಾರದ ಮೇಲೆ ಮತ್ತು MCI/NMC/DCI ಯ ಶಾಸನಬದ್ಧ ನಿಯಂತ್ರಣದ ಪ್ರಕಾರ ಮಾತ್ರ ಭರ್ತಿ ಮಾಡಲಾಗುತ್ತದೆ. ಉಳಿದ ಶೇ.85ರಷ್ಟು ಪ್ರವೇಶಕ್ಕಾಗಿ ರಾಜ್ಯಗಳು ವೈಯಕ್ತಿಕ ಕೌನ್ಸೆಲಿಂಗ್ ಅನ್ನು ನಡೆಸುತ್ತವೆ.
ವೈದ್ಯಕೀಯ ನೀಟ್ ಪರೀಕ್ಷೆ ಬರೆದವರ ವಿವರ:
ಭಾರತದಲ್ಲಿ 83,075 ವೈದ್ಯಕೀಯ, 26,949 ದಂತ ವೈದ್ಯಕೀಯ, 52,720 ಆಯುಷ್ ಮತ್ತು 603 ಪಶುವೈದ್ಯಕೀಯ ಸೀಟು ಸೇರಿದಂತೆ 3 ವಿಭಾಗಳಿಗೆ ಮೂರು ಗಂಟೆಗಳ ಅವಧಿಯಲ್ಲಿ 720 ಅಂಕಗಳಿಗೆ ನಡೆಸಿದ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. NEET 2021 ಅರ್ಹತೆ ಪಡೆದುಕೊಳ್ಳುವ ಆಕಾಂಕ್ಷಿಗಳನ್ನು NEET 2021 ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಕರೆಯಲಾಗುವುದು.