ಬಿಜೆಪಿ ವಕ್ತಾರನನ್ನು ಡಿಬೇಟ್ ನಿಂದ ಹೊರಗೆ ಕಳುಹಿಸಿದ ಎನ್ಡಿಟಿವಿ
ಎನ್ಡಿಟಿವಿ ಸುದ್ದಿವಾಹಿನಿಯಲ್ಲಿ ನಡೆಯುತ್ತಿದ್ದ ಗ್ರೂಪ್ ಚರ್ಚೆಯ ವೇಳೆ, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾರನ್ನು ವಾಹಿನಿ ಕಾರ್ಯಕ್ರಮದಿಂದಲೇ ಹೊರಗೆ ಕಳುಹಿಸಿದೆ.
ನವದೆಹಲಿ, ಜೂ 2: ಕೇಂದ್ರದ ಗೋಹತ್ಯಾ ನಿಷೇಧದ ಬಗ್ಗೆ ಎನ್ಡಿಟಿವಿ ಸುದ್ದಿವಾಹಿನಿಯಲ್ಲಿ ನಡೆಯುತ್ತಿದ್ದ ಗ್ರೂಪ್ ಚರ್ಚೆಯ ವೇಳೆ, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾರನ್ನು ವಾಹಿನಿ ಕಾರ್ಯಕ್ರಮದಿಂದಲೇ ಹೊರಗೆ ಕಳುಹಿಸಿದೆ.
ಗುರುವಾರ (ಜೂ1) ಎನ್ಡಿಟಿವಿ ವಾಹಿನಿಯ ನಿಧಿ ರಾಜ್ದಾನ್ ನಡೆಸಿಕೊಡುತ್ತಿದ್ದ ಕಾರ್ಯಕ್ರಮದಲ್ಲಿ ತಮ್ಮ ವಾದ ಮಂಡಿಸುತ್ತಿದ್ದ ಪಾತ್ರಾ, ಎನ್ಡಿಟಿವಿ ವಾಹಿನಿ ಯಾವುದೋ ಎಜೆಂಡಾ ಹೊಂದಿದೆ, ನಿಮ್ಮ ಎಲ್ಲಾ ಕಾರ್ಯಕ್ರಮಗಳು ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿಕೊಳ್ಳುವಂತಿದೆ ಎನ್ನುವ ಆರೋಪವನ್ನು ಪಾತ್ರಾ ಮಾಡಿದ್ದರು.
ಇದರಿಂದ ಸಿಟ್ಟಿಗೆದ್ದ ನಿರೂಪಕಿ, ನಿಮ್ಮ ಮಾತಿಗೆ ನೀವು ಕ್ಷಮೆಯಾಚಿಸಬೇಕು, ಆನಂತರವೇ ಡಿಬೇಟ್ ಮುಂದುವರಿಯಲಿದೆ ಎಂದು ಹೇಳಿದರು. ನಾನು ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವುದಿಲ್ಲ ಎಂದು ಪಾತ್ರಾ ಪಟ್ಟು ಹಿಡಿದು ಕೂತರು.

ಆ ಸಮಯದಲ್ಲಿ, ಕಾರ್ಯಕ್ರಮದಿಂದ ದಯವಿಟ್ಟು ಹೊರಗೆ ನಡೆಯಿರಿ ಎಂದು ನಿರೂಪಕಿ ಹೇಳಿದಾಗ, ನನ್ನ ವಾದ ಮಂಡಿಸಲು ನೀವು ಅವಕಾಶ ನೀಡಬೇಕು, ಬಿಜೆಪಿ ಪಕ್ಷದ ವಕ್ತಾರರನ್ನು ನಿಮ್ಮ ವಾಹಿನಿಗೆ ಯಾಕೆ ಕರೆಸುತ್ತೀರಾ ಎಂದು ಪಾತ್ರಾ ಮರು ಪ್ರಶ್ನಿಸಿದರು.
ವಾದವಿವಾದ ಹೀಗೆ ಮುಂದುವರಿಯುತ್ತಾ, ನನ್ನನ್ನು ಹೊರಗೆ ಕಳುಹಿಸಿದರೆ ಎನ್ಡಿಟಿವಿ ವಾಹಿನಿಯನ್ನು ಬಾಯ್ಕಾಟ್ ಮಾಡಬೇಕಾಗುತ್ತದೆ ಎಂದು ಪಾತ್ರಾ ಹೇಳಿದಾಗ, ವಾಹಿನಿ ನಿಮ್ಮನ್ನು ಪ್ರಶ್ನಿಸಿದರೆ ಅಜೆಂಡಾ ಇದೆ ಎಂದು ಹೇಳುವ ನೀವು ದೂರದರ್ಶನದಲ್ಲಿ ಹೋಗಿ ಕೂತುಕೊಳ್ಳಿ ಎಂದು ನಿರೂಪಕಿ ತಿರುಗೇಟು ನೀಡಿದರು.
ಕಾರ್ಯಕ್ರಮದ ಕೊನೆಯ ತನಕ ನಾನಿದ್ದು ನಿಮ್ಮ ಎಲ್ಲಾ ಎಜೆಂಡಾಗಳನ್ನು ಬಯಲುಗೆಳೆಯುತ್ತೇನೆ ಎಂದು ಪಾತ್ರಾ ಹೇಳಿದಾಗ, ವಾಹಿನಿಯ ನಿರೂಪಕಿ ಅವರ ಜೊತೆ ಕಾರ್ಯಕ್ರಮದಲ್ಲಿ ಮಾತುಕತೆ ನಿಲ್ಲಿಸಿದರು.












Click it and Unblock the Notifications