'ದಿ ಕೇರಳ ಸ್ಟೋರಿ' ನಿರ್ಮಾಪಕನನ್ನು ಗಲ್ಲಿಗೇರಿಸಬೇಕು; ಎನ್‌ಸಿಪಿ ನಾಯಕನ ವಿವಾದಾತ್ಮಕ ಹೇಳಿಕೆ
ಇತ್ತೀಚೆಗೆ ಬಿಡುಗಡೆಯಾದ ಕೇರಳದ ನೈಜ ಘಟನೆ ಆಧಾರಿತ 'ದಿ ಕೇರಳ ಸ್ಟೋರಿ' (The Kerala Story) ಸಿನಿಮಾ ದೇಶದ ಹಲವು ಕಡೆ ಮೆಚ್ಚುಗೆಗೆ ಪಾತ್ರವಾಗಿದ್ದು, ಉತ್ತಮ ಕಲೆಕ್ಷನ್ ಮಾಡುತ್ತಿದೆ. ಇನ್ನು ಕೆಲವು ವ್ಯಕ್ತಿಗಳು ಹಾಗೂ ಸಂಘಟನೆಗಳಿಂದ ವಿರೋಧ ಎದುರಿಸುತ್ತಿದೆ.
ಇದೀಗ 'ದಿ ಕೇರಳ ಸ್ಟೋರಿ' ಸಿನಿಮಾ ನಿರ್ಮಾಪಕನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೇ ಮೇ 5ರಂದು ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಥಿಯೇಟರ್‌ಗಳಿಗೆ ಆಗಮಿಸುತ್ತಿದ್ದಾರೆ.

ಇನ್ನು ದೇಶದ ಎರಡು ದೊಡ್ಡ ರಾಜ್ಯಗಳಾದ ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ದಿ ಕೇರಳ ಸ್ಟೋರಿ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದ್ದರೆ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಸಿನಿಮಾನ್ನು ಥಿಯೇಟರ್‌ಗಳಿಗೆ ತಲುಪಲು ಸಾಧ್ಯವಾಗಲಿಲ್ಲ.
ನೆರೆಯ ಮಹಾರಾಷ್ಟ್ರದಲ್ಲಿಯೂ ದಿ ಕೇರಳ ಸ್ಟೋರಿ ಚಿತ್ರಕ್ಕೆ ಸಂಬಂಧಿಸಿದಂತೆ ರಾಜಕೀಯ ಗಲಾಟೆ ತೀವ್ರಗೊಳ್ಳುತ್ತಿದೆ. ಚಿತ್ರದಲ್ಲಿ ಎಲ್ಲಾ ಸುಳ್ಳುಗಳನ್ನು ತೋರಿಸಲಾಗಿದೆ, ಚಿತ್ರ ನಿರ್ಮಾಪಕನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಜಿತೇಂದ್ರ ಅವ್ಹಾದ್ ಹೇಳಿಕೆ ನೀಡಿದ್ದಾರೆ.
"ಕೇರಳದಲ್ಲಿ ಒಟ್ಟು 32 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಆದರೆ, ಅಧಿಕೃತ ಅಂಕಿ ಅಂಶ 3 ಆಗಿದೆ ಎಂದು ಹೇಳಿದ ಅವರು, 32 ಸಾವಿರಕ್ಕೂ 3ಕ್ಕೂ ವ್ಯತ್ಯಾಸವಿಲ್ಲವೇ, ಈ ಕಾಲ್ಪನಿಕ ಕಥೆಯನ್ನು ನಿರ್ಮಿಸಿದ ನಿರ್ಮಾಪಕರು ಯಾರೇ ಆಗಿರಲಿ ಅವರನ್ನು ನೇಣಿಗೇರಿಸಬೇಕು," ಎಂದು ಜಿತೇಂದ್ರ ಅವ್ಹಾದ್ ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಜಿತೇಂದ್ರ ಅವ್ಹಾದ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮುಸ್ಲಿಂ ದಂಪತಿ ಚಿತ್ರವನ್ನು ಹಂಚಿಕೊಂಡಿದ್ದಾರೆ. "ಕಾಸರಗೋಡಿನಲ್ಲಿ ಮುಸ್ಲಿಂ ದಂಪತಿ ಅಬ್ದುಲ್ಲಾ ಮತ್ತು ಖಾಜಿದಾ ತಮ್ಮ ದತ್ತು ಪಡೆದ ಹಿಂದೂ ಮಗಳನ್ನು ಹಿಂದೂ ಹುಡುಗನಿಗೆ ಪೂರ್ಣ ಹಿಂದೂ ಸಂಪ್ರದಾಯದೊಂದಿಗೆ ಮದುವೆ ಮಾಡಿಕೊಟ್ಟರು. ಈ ವಿಷಯದ ಮೇಲೆ ಸಿನಿಮಾ ಮಾಡಬಹುದಲ್ಲವೇ," ಎಂದು ಪ್ರಶ್ನಿಸಿದ್ದಾರೆ.
ದಿ ಕೇರಳ ಸ್ಟೋರಿ ಸಿನಿಮಾಗೆ ಉತ್ತರಪ್ರದೇಶದಲ್ಲಿ ತೆರಿಗೆ ಮುಕ್ತ
ಉತ್ತರಪ್ರದೇಶ ರಾಜ್ಯ ಸರ್ಕಾರವು ಇತ್ತೀಚೆಗೆ ಬಿಡುಗಡೆಯಾದ ನೈಜ ಘಟನೆ ಆಧಾರಿತ 'ದಿ ಕೇರಳ ಸ್ಟೋರಿ' ಸಿನಿಮಾಗೆ ರಾಜ್ಯದಲ್ಲಿ ತೆರಿಗೆ ಮುಕ್ತ ಎಂದು ಘೋಷಿಸಿದ್ದು, ಇದನ್ನು ಖುದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಖಚಿತಪಡಿಸಿದ್ದಾರೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಲೋಕಭವನದಲ್ಲಿ ಆಯೋಜಿಸಲಾಗಿರುವ ವಿಶೇಷ ಪ್ರದರ್ಶನದಲ್ಲಿ ದಿ ಕೇರಳ ಸ್ಟೋರಿ ಸಿನಿಮಾವನ್ನು ವೀಕ್ಷಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ಸಚಿವಾಲಯ ತಿಳಿಸಿತ್ತು.
ಮಧ್ಯಪ್ರದೇಶ ನಂತರ ತೆರಿಗೆ ಮುಕ್ತ ಘೋಷಿಸಿದ ಉತ್ತರಪ್ರದೇಶ
ವಿವಾದಾತ್ಮಕ ಚಲನಚಿತ್ರವನ್ನು 'ತೆರಿಗೆ ಮುಕ್ತ' ಮಾಡಿದ ಎರಡನೇ ರಾಜ್ಯ ಉತ್ತರಪ್ರದೇಶವಾಗಿದೆ. ಇದಕ್ಕೂ ಮುನ್ನ ಮಧ್ಯಪ್ರದೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತೆರಿಗೆ ಮುಕ್ತ ಎಂದು ತಿಳಿಸಿದ್ದಾರೆ.
"ಲವ್ ಜಿಹಾದ್‌ನ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಹೆಣ್ಣುಮಕ್ಕ ಜೀವನ ಹೇಗೆ ನಾಶವಾಗುತ್ತದೆ ಎಂಬುದನ್ನು ಚಿತ್ರ ತೋರಿಸುತ್ತದೆ. ಇದು ಭಯೋತ್ಪಾದನೆಯ ವ್ಯಾಪ್ತಿಯನ್ನು ಸಹ ಬಹಿರಂಗಪಡಿಸುತ್ತದೆ," ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications