ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ: ಮಿಲಿಟರಿ ವಾಹನ ಸ್ಫೋಟಗೊಂಡು 8 ಯೋಧರ ಸಾವು
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಇಂದು ಮಿಲಿಟರಿ ವಾಹನವನ್ನು ಸ್ಫೋಟಿಸಿದ್ದಾರೆ. ಈ ಸ್ಫೋಟದಲ್ಲಿ ಜಿಲ್ಲಾ ಮೀಸಲು ಗಾರ್ಡ್‌ಗಳ (ಡಿಆರ್‌ಜಿ) ಎಂಟು ಮಂದಿ ಯೋಧರು ಹಾಗೂ ಚಾಲಕ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಭದ್ರತಾ ಸಿಬ್ಬಂದಿ ಮೇಲೆ ನಕ್ಸಲೀಯರು ನಡೆಸಿದ ಅತಿ ದೊಡ್ಡ ದಾಳಿ ಇದಾಗಿದೆ ಎಂದು ಹೇಳಲಾಗುತ್ತಿದೆ.
ಕುಟ್ರು ಪೊಲೀಸ್ ಠಾಣೆ ವ್ಯಾಪ್ತಿಯ ಅಂಬೇಲಿ ಗ್ರಾಮದ ಬಳಿ ಭದ್ರತಾ ಸಿಬ್ಬಂದಿ ನಕ್ಸಲರ ವಿರುದ್ಧ ಕಾರ್ಯಾಚರಣೆ ಮುಗಿಸಿ ತಮ್ಮ ಸ್ಕಾರ್ಪಿಯೋ ವಾಹನದಲ್ಲಿ ವಾಪಸ್ ಆಗುತ್ತಿದ್ದರು. ಈ ವೇಳೆ ನಕ್ಸಲರು ಮಿಲಿಟರಿ ವಾಹನವನ್ನು ಐಇಡಿ ಮೂಲಕ ಸ್ಫೋಟಿಸಿದ್ದಾರೆ ಎಂದು ಬಸ್ತರ್ ರೇಂಜ್ ಪೊಲೀಸ್ ಮಹಾ ನಿರೀಕ್ಷಕ ಪಿ.ಸುಂದರರಾಜ್ ತಿಳಿಸಿದ್ದಾರೆ.

2023ರ ಏಪ್ರಿಲ್‌ನಲ್ಲೂ ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬೆಂಗಾವಲು ಪಡೆಯ ಭಾಗವಾಗಿದ್ದ ನಕ್ಸಲರು ತಮ್ಮ ವಾಹನವನ್ನು ಸ್ಫೋಟಿಸಿದ ನಂತರ ಹತ್ತು ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕ ಚಾಲಕ ಸಾವನ್ನಪ್ಪಿದ್ದರು. ಬಳಿಕ ಈ ಘಟನೆ ಮತ್ತೆ ಬಿಜಾಪುರ ಜಿಲ್ಲೆಯಲ್ಲಿ ಮರುಕಳಿಸಿದೆ. ನಕ್ಸಲರು ವಾಹನ ಸ್ಫೋಟಿಸಿದ ಪರಿಣಾಮ ಜಿಲ್ಲಾ ಮೀಸಲು ಪಡೆಯ 8 ಯೋಧರು ಸಾವನ್ನಪ್ಪಿದ್ದಾರೆ.
ಜಿಲ್ಲಾ ಮೀಸಲು ಗಾರ್ಡ್ ದಾಂತೇವಾಡ, ನಾರಾಯಣಪುರ ಮತ್ತು ಬಿಜಾಪುರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಾಗಿತ್ತು. ದಾಂತೇವಾಡದ ಯೋಧರು ಜಂಟಿ ಕಾರ್ಯಾಚರಣೆಯ ನಂತರ ಸ್ಕಾರ್ಪಿಯೋದಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ. ಛತ್ತೀಸ್‌ಗಢದ ಡಿಸಿಎಂ ಅರುಣ್ ಸಾವೊ ಅವರು ದಾಳಿಯನ್ನು ಹೇಡಿತನ ಎಂದು ಕರೆದಿದ್ದಾರೆ. ಅಲ್ಲದೆ ಸೈನಿಕರ ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ. ಮಾರ್ಚ್ 2026ರೊಳಗೆ ಬಸ್ತಾರ್ ಪ್ರದೇಶವನ್ನು ನಕ್ಸಲ್ ಮುಕ್ತಗೊಳಿಸುವ ಭರವಸೆಯನ್ನು ನಮ್ಮ ಸರ್ಕಾರ ಈಡೇರಿಸಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ.

ಶನಿವಾರ ಆರಂಭವಾದ ಕಾರ್ಯಾಚರಣೆಯಲ್ಲಿ ಒಂದು ಮೃತದೇಹ ಪತ್ತೆಯಾಗಿತ್ತು. ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲರ ಸಾವಿನ ಸಂಖ್ಯೆ ಐದಕ್ಕೆ ಏರಿತ್ತು. ಇದಾದ ಒಂದು ದಿನದ ನಂತರ ಈ ಸ್ಫೋಟ ಸಂಭವಿಸಿದೆ. ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ದಕ್ಷಿಣ ಅಬುಜ್‌ಮಾದ್‌ನ ಅರಣ್ಯದಲ್ಲಿ ಶನಿವಾರ ಸಂಜೆಯಿಂದಲೇ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲೀಯ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಈ ವೇಳೆ ಇಬ್ಬರಿಂದಲೂ ಗುಂಡಿನ ಚಕಮಕಿ ನಡೆಯಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾನುವಾರ ನಾಲ್ವರು ನಕ್ಸಲರು ಶವವಾಗಿ ಪತ್ತೆಯಾಗಿದ್ದು, ನಂತರ ಮತ್ತೊಬ್ಬನ ಶವ ಪತ್ತೆಯಾಗಿತ್ತು. ಇದರೊಂದಿಗೆ ಇಬ್ಬರು ಮಹಿಳೆಯರು ಸೇರಿದಂತೆ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೃತಪಟ್ಟ ನಕ್ಸಲೀಯರ ಸಂಖ್ಯೆ ಐದಕ್ಕೇರಿತ್ತು. ಈ ಗುಂಡಿನ ಚಕಮಕಿಯಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಹೆಡ್ ಕಾನ್ಸ್‌ಟೇಬಲ್ ಸನ್ನು ಕರಮ್ ಕೂಡ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications