ಪಟಿಯಾಲ ಜೈಲಿನಿಂದ ಬಿಡುಗಡೆಗೊಂಡ ನವಜೋತ್ ಸಿಂಗ್ ಸಿಧು
ಪಟಿಯಾಲ, ಏಪ್ರಿಲ್ 1: ಮೂರು ದಶಕಗಳಷ್ಟು ಹಳೆಯದಾದ ರಸ್ತೆ ಜಗಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಸುಮಾರು 10 ತಿಂಗಳ ನಂತರ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರು ಶನಿವಾರ ಪಟಿಯಾಲ ಜೈಲಿನಿಂದ ಬಿಡುಗಡೆಗೊಂಡರು.
1988 ರ ರಸ್ತೆ ಘರ್ಷಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇದರಲ್ಲಿ ಅವರು ಗುರ್ನಾಮ್ ಸಿಂಗ್ ಎಂಬಾತನನ್ನು ಥಳಿಸಿದ್ದರು. ನಂತರ ಗುರ್ನಾಮ್ ಸಿಂಗ್ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಸಿಧು ಬಿಡುಗಡೆಗೆ ಪಂಜಾಬ್ ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ. ಶಿಕ್ಷೆ ಮುಗಿದಿರುವ ಕೈದಿಗಳ ಬಿಡುಗಡೆ ವಿಚಾರಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಶಿಕ್ಷೆ ಪೂರ್ಣಗೊಳಿಸಿದವರನ್ನು ಬಿಡುಗಡೆ ಮಾಡಲಾಗುವುದು ಎಂದು ಪಂಜಾಬ್ ಸಚಿವ ಬ್ರಹ್ಮ್ ಶಂಕರ್ ಜಿಂಪಾ ಶುಕ್ರವಾರ ಹೇಳಿದ್ದಾರೆ.
ಸಿಧು ವಿರುದ್ಧದ ಶಿಕ್ಷೆಯ ವಿಷಯದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅನುಮತಿಸಿದೆ. ಶಿಕ್ಷೆಯ ವಿಷಯದ ಕುರಿತು ನಾವು ಮರುಪರಿಶೀಲನಾ ಅರ್ಜಿಯನ್ನು ಅನುಮತಿಸಿದ್ದೇವೆ. ದಂಡದ ಜೊತೆಗೆ ಪ್ರತಿವಾದಿ ಸಿದ್ದುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸುತ್ತೇವೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್ ಮತ್ತು ಸಂಜಯ್ ಕಿಶನ್ ಕೌಲ್ ಅವರ ಪೀಠ ಈ ಆದೇಶ ನೀಡಿದೆ.
ಪ್ರಕರಣವು ಸೆಷನ್ಸ್ ಕೋರ್ಟ್, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಶನಿವಾರ ಬೆಳಗ್ಗೆ "ಇದೀಗ ಕೆಲವು ಔಪಚಾರಿಕ ಕ್ರಮಗಳನ್ನು ನಡೆಸಲಾಗುತ್ತಿದೆ. ಅವರು ಇನ್ನು ಒಂದು ಗಂಟೆಯಲ್ಲಿ ಜೈಲಿನಿಂದ ಹೊರಬರುತ್ತಾರೆ ಎಂದು ಪಟಿಯಾಲ ಜೈಲಿನ ಹೊರಗೆ ತಂದೆಗಾಗಿ ಕಾದಿದ್ದ ಸಿಧು ಪುತ್ರ ಕರಣ್ ಸಿಧು ಹೇಳಿದ್ದರು. ಕ್ರಿಕೆಟಿಗ-ರಾಜಕಾರಣಿಯನ್ನು ಸ್ವಾಗತಿಸಲು ಕಾಂಗ್ರೆಸ್ ಕಾರ್ಯಕರ್ತರು ಜೈಲಿನ ಹೊರಗೆ ಡೋಲು ಬಾರಿಸುತ್ತಾ ಸಂಭ್ರಮಿಸುತ್ತಿದ್ದರು.

ಸಿಧು ಅವರ ಬೆಂಬಲಿಗರು ಜೈಲಿನ ಹೊರಗೆ ಬೆಳಗ್ಗೆಯಿಂದಲೇ ಜಮಾಯಿಸಿದ್ದು, ಬಿಡುಗಡೆಯಾದ ಮೇಲೆ ಅವರಿಗೆ ಭವ್ಯವಾದ ಸ್ವಾಗತ ಕೋರಿದರು ಮತ್ತು ಅವರು 'ನವಜೋತ್ ಸಿಧು ಜಿಂದಾಬಾದ್' ಎಂದು ಘೋಷಣೆ ಕೂಗುತ್ತಿದರು. ಅಮೃತಸರ ಸಂಸದ ಗುರ್ಜಿತ್ ಔಜ್ಲಾ, ಪಂಜಾಬ್ ಕಾಂಗ್ರೆಸ್ ನ ಮಾಜಿ ಮುಖ್ಯಸ್ಥರಾದ ಶಂಶೇರ್ ಸಿಂಗ್ ಡುಲ್ಲೋ, ಮೊಹಿಂದರ್ ಸಿಂಗ್ ಕೇಪೀ ಮತ್ತು ಲಾಲ್ ಸಿಂಗ್, ಮಾಜಿ ಶಾಸಕ ನವತೇಜ್ ಸಿಂಗ್ ಚೀಮಾ, ಇತರ ನಾಯಕರಾದ ಅಶ್ವನಿ ಸೆಖ್ರಿ, ಸುಖವಿಂದರ್ ಸಿಂಗ್ ಡ್ಯಾನಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಿಧು ವಾಪಸಾತಿಗಾಗಿ ಕಾಯುತ್ತಿದ್ದರು.
1988 ರಲ್ಲಿ ರಸ್ತೆ ಘರ್ಷಣೆ ಪ್ರಕರಣದಲ್ಲಿ 65 ವರ್ಷದ ಗುರ್ನಾಮ್ ಸಿಂಗ್ ಅವರ ಸಾವಿನ ಬಗ್ಗೆ ಸುಪ್ರೀಂ ಕೋರ್ಟ್ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದ ನಂತರ ಮಾಜಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರನ್ನು ಕಳೆದ ವರ್ಷ ಮೇ 20 ರಂದು ಜೈಲಿಗೆ ಹಾಕಲಾಗಿತ್ತು. ಪಂಜಾಬ್ ಕಾರಾಗೃಹದ ನಿಯಮಗಳ ಪ್ರಕಾರ, ಉತ್ತಮ ನಡವಳಿಕೆಯನ್ನು ಹೊಂದಿರುವ ಅಪರಾಧಿ ಸಾಮಾನ್ಯ ಪರಿಹಾರಕ್ಕೆ ಅರ್ಹನಾಗಿರುತ್ತಾನೆ ಎಂದು ಎಚ್‌ಪಿಎಸ್ ವರ್ಮಾ ತಿಳಿಸಿದ ಬೆನ್ನಲ್ಲೆ ಸರ್ದಾರ್ ನವಜೋತ್ ಸಿಂಗ್ ಸಿಧು ಅವರು ಶನಿವಾರ ಪಟಿಯಾಲಾ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಪಿಟಿಐ ಉಲ್ಲೇಖಿಸಿತ್ತು.












Click it and Unblock the Notifications