ಕಾಣ್ತಾ ಇದೆ.. ಕಾಣ್ತಾ ಇಲ್ಲ.. ಬೆಳ್ಳಂಬೆಳಗ್ಗೆ ಮಾಯವಾದ ದೆಹಲಿ!
ದೆಹಲಿ ಮತ್ತೊಮ್ಮೆ ಜಗತ್ತಿನಾದ್ಯಂತ ಸದ್ದು ಮಾಡಿ, ಸುದ್ದಿಯಾಗುತ್ತಿದೆ. ದೆಹಲಿ ಸುತ್ತಲೂ ಆವರಿಸಿರುವ ದಟ್ಟ ಹೊಗೆ ಜನರ ಜೀವಕ್ಕೆ ಕುತ್ತು ತಂದಿದೆ. ಅದ್ರಲ್ಲೂ ಇಂದು ದೆಹಲಿಯ ಗಾಳಿ ಮಟ್ಟ ತೀವ್ರ ಕಳಪೆಯಾಗಿದ್ದು ಸ್ಥಳೀಯರು ಹಲವು ಸಮಸ್ಯೆಯಿಂದ ನರಳುತ್ತಿದ್ದಾರೆ. ಹಾಗಾದರೆ ಇಂದು ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಎಷ್ಟು ಕಳಪೆಯಾಗಿದೆ ಗೊತ್ತಾ?
ಪ್ರತಿ ವರ್ಷವು ಮಾಲಿನ್ಯದ ಮೂಲಕ ಸದ್ದು ಮಾಡುವ ದೆಹಲಿಗೆ ದೇಶದಲ್ಲೇ ಅತ್ಯಂತ ಕಲುಷಿತ ನಗರ ಎಂಬ ಹಣೆಪಟ್ಟಿ ಸಿಕ್ಕಿದೆ. ಅದರಲ್ಲೂ ಚಳಿಗಾಲ ಹತ್ತಿರ ಬಂತು ಅಂದರೆ ಸಾಕು, ಈ ಭಾಗ ಅಕ್ಷರಶಃ ನರಕವಾಗಿ ಬದಲಾಗುತ್ತದೆ. ಇದೇ ರೀತಿ ಈ ಬಾರಿ ಕೂಡ ದೆಹಲಿ ವಾಯು ಮಾಲಿನ್ಯದ ಕೂಪದಲ್ಲಿ ಸಿಲುಕಿ ನಲುಗಿ ಹೋಗಿದೆ. ಉಸಿರಾಡುವುದಕ್ಕೂ ದೆಹಲಿ ಜನಗಳು ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಕೆಂಪುಕೋಟೆ, ಸಂಸತ್ ಭವನ & ಸುಪ್ರೀಂಕೋರ್ಟ್ ಕಟ್ಟಡ ಇರುವ ಜಾಗದಲ್ಲಂತೂ, ಒಬ್ಬರ ಮುಖ ಮತ್ತೊಬ್ಬರಿಗೆ ಕಾಣದಷ್ಟು ಮಾಲಿನ್ಯದ ಹೊಗೆ ಆವರಿಸಿದೆ ಎನ್ನಲಾಗಿದೆ.

ದೆಹಲಿಗೆ ಹೋದರೆ ಜೀವ ಉಳಿಯುತ್ತಾ?
ಕಳೆದ 24 ಗಂಟೆ ಸರಾಸರಿಯಲ್ಲಿ, ವಾಯು ಗುಣಮಟ್ಟ ಸೂಚ್ಯಂಕವು ಭಾರಿ ಕುಸಿತ ಕಂಡಿದೆ. ನಿಮಗೆ ಒಂದು ಉದಾಹರಣೆ ಕೊಟ್ಟು ಹೇಳಬೇಕು, ವಾಯುಗುಣ ಮಟ್ಟವನ್ನು ಅಳೆಯಲು ಕೆಲ ಮಾಪನ ಬಳಸಲಾಗುತ್ತದೆ. ಈ ಪೈಕಿ ಪಿಎಂ-2.5 & ಪಿಎಂ-10 (PM-2.5 & PM-10) ಅಳತೆ ಮಾಪನ ಪ್ರಮುಖವಾಗಿರುತ್ತವೆ. ಈ ಅಳತೆಯನ್ನ ನಮ್ಮ ಪರಿಶುದ್ಧ ಬೆಂಗಳೂರಿಗೂ & ವಾಯು ಮಾಲಿನ್ಯದಲ್ಲಿ ಕಳೆದು ಹೋದ ದೆಹಲಿ ನಗರದ ನಡುವೆಯು ಲೆಕ್ಕವನ್ನ ಹಾಕಿ ನೋಡೋಣ ಬನ್ನಿ.
ಗಬ್ಬೆದ್ದು ಹೋಗಿದೆ ದೆಹಲಿ ವಾತಾವರಣ
ನೀವು ಈಗ ಬೆಂಗಳೂರಲ್ಲಿ ಇದ್ದೀರ ಅಂದ್ರೆ, ಬೆಂಗಳೂರಲ್ಲಿ ಪಿಎಂ-10 ಮಟ್ಟವು 31 ಇದೆ. ಹಾಗೂ ಪಿಎಂ-2.5 ಮಟ್ಟವು 8 ಇದೆ. ಹಾಗೇ ಈ ಲೆಕ್ಕ ಹೇಳ್ತಿರುವುದು ಬೆಂಗಳೂರು ನಗರ ಭಾಗದಲ್ಲಿ. ಬೆಂಗಳೂರು ಹೊರವಲಯದಲ್ಲಿ, ಗಾಳಿ ಗುಣಮಟ್ಟ ಇನ್ನೂ ಉತ್ತಮವಾಗಿದೆ. ಆದ್ರೆ ಅದೇ ನೀವು ಈಗ ದೆಹಲಿಯಲ್ಲಿ ಇದ್ದರೆ ಪಿಎಂ-10 ಮಟ್ಟ 889 ದಾಖಲಾಗಿ, ಇದು ಸಾಲದು ಎಂಬಂತೆ ಪಿಎಂ-2.5 ಮಟ್ಟ 406ಕ್ಕೆ ತಲುಪಿದೆ. ಹಾಗಾದ್ರೆ ಈಗ ನೀವೇ ಎರಡು ನಗರಗಳ ನಡುವೆ ಲೆಕ್ಕಾಚಾರ ಹಾಕಿ ನೋಡಿ. ನಮ್ಮ ಬೆಂಗಳೂರಿಗೆ ಹೋಲಿಕೆ ಮಾಡಿದರೆ, ದೆಹಲಿಯ ವಾತಾವರಣ ಮತ್ತು ಗಾಳಿ ಅದೆಷ್ಟು ಗಬ್ಬೆದ್ದು ಹೋಗಿದೆ ಅಂತಾ.

ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಇಲ್ವಾ?
ದೆಹಲಿ ವಾತಾವರಣ ಇಷ್ಟೆಲ್ಲಾ ಹಾಳಾಗಿ ಹೋಗಿ ಜನರು ಪರದಾಡುವಾಗಲೇ ಮತ್ತೊಂದು ಆಘಾತ ಸಿಕ್ಕಿದೆ. ಅದು ಏನಂದ್ರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣ ಯೋಜನೆಯ ಅಂತಿಮ ಹಂತದ ಕಠಿಣ ಕ್ರಮ ಜಾರಿಗೊಳಿಸುವುದನ್ನ ಕೇಂದ್ರ ಸರ್ಕಾರ ಇದೀಗ ತಾತ್ಕಾಲಿಕವಾಗಿ ಮುಂದೂಡಿದೆ. ಸದ್ಯ ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಕುಗ್ಗುತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ ವಾಣಿಜ್ಯ ಚಟುವಟಿಕೆಗೆ, ಯಾವುದೇ ಅಡೆತಡೆ ಉಂಟಾಗುವುದಿಲ್ಲ.
ದೆಹಲಿಯಲ್ಲಿ ವಾಹನ ಓಡಾಟ ಬಂದ್?
ವಾಯುಮಾಲಿನ್ಯ ಹಿಡಿತಕ್ಕೆ ತರಲು ಕಠಿಣ ಕ್ರಮ ಕೈಗೊಂಡರೆ ಆಗ ಈ ಹಂತದಲ್ಲಿ ವಾಯು ಮಾಲಿನ್ಯಕ್ಕೆ ಕಾರಣವಾಗುವ ಲಾರಿ, ವಾಣಿಜ್ಯ ಬಳಕೆಯ ನಾಲ್ಕು ಚಕ್ರದ ವಾಹನಗಳ ಸಂಚಾರ ಸೇರಿದಂತೆ ಎಲ್ಲಾ ಹಂತದ ನಿರ್ಮಾಣ ಚಟುವಟಕೆಗಳ ಮೆಲೆ ನಿರ್ಬಂಧವನ್ನ ಹೇರಲಾಗುತ್ತದೆ. ಇದೀಗ ತಾತ್ಕಾಲಿಕವಾಗಿ ಈ ಕ್ರಮವನ್ನು ಮುಂದೂಡಲಾಗಿದೆ. ಆದ್ರೆ ಇಷ್ಟೆಲ್ಲಾ ಬೆಳವಣಿಗೆ ನಡುವೆ ದೆಹಲಿಯ ವಾತಾವರಣವು ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ. ಈಗಿನ ಮಾಹಿತಿ ಪ್ರಕಾರ ಇನ್ನೂ ಮುಂದಿನ ಕೆಲವು ತಿಂಗಳು ಇದೇ ಸ್ಥಿತಿ ನಿರ್ಮಾಣವಾಗುವುದು ಗ್ಯಾರಂಟಿ.
ಇದನ್ನೆಲ್ಲ ನೋಡುತ್ತಿದ್ದರೆ ಮನುಷ್ಯನ ಆಧುನಿಕತೆ ಮತ್ತು ತಂತ್ರಜ್ಞಾನ ಎಲ್ಲಾ ಮನುಷ್ಯರ ಭವಿಷ್ಯ ಹಾಳುಮಾಡುವ ಮುನ್ಸೂಚನೆ ನೀಡುತ್ತಿದೆ. ಅದ್ರಲ್ಲೂ ದೆಹಲಿ ವಾಯುಮಾಲಿನ್ಯ ಹೆಚ್ಚಾಗಿ ಮಕ್ಕಳು ಹಾಗೂ ವೃದ್ಧರ ಮೇಲೆಯೇ ಪರಿಣಾಮ ಬೀರುತ್ತಿದೆ. ಹೀಗಾಗಿ, ಮುಂದೆ ಏನೆಲ್ಲಾ ಆಗುತ್ತೆ? ಅನ್ನೋದನ್ನು ಕಾದು ನೋಡಬೇಕಿದೆ. ಇಷ್ಟೊಂದು ವಾಯುಮಾಲಿನ್ಯ ಎದುರಾದ ಕಾರಣ ದೆಹಲಿಯಿಂದ ಜನರು ಓಡಿ ಹೋಗುತ್ತಿದ್ದಾರೆ. ಆದ್ರೆ ಅಲ್ಲೇ ಬದುಕುವ ಅನಿವಾರ್ಯತೆಗೆ ಸಿಲುಕಿರುವ ಬಡ ಜನರು ಉಸಿರಾಟದ ಸಮಸ್ಯೆ, ಅಲರ್ಜಿ ರೀತಿ ಗಂಭೀರ ಪರಿಣಾಮ ಎದುರಿಸುತ್ತಿದ್ದಾರೆ.












Click it and Unblock the Notifications