Vande Bharat Express: 6 ವಂದೇ ಭಾರತ್ ರೈಲುಗಳಿಗೆ ಮೋದಿ ಹಸಿರು ನಿಶಾನೆ
ನವದೆಹಲಿ, ಸೆಪ್ಟೆಂಬರ್ 15: ಭಾರತದ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 15ರಿಂದ 17ರ ತನಕ ಜಾರ್ಖಂಡ್, ಗುಜರಾತ್ ಮತ್ತು ಒಡಿಶಾ ರಾಜ್ಯಗಳ ಪ್ರವಾಸ ಕೈಗೊಂಡಿದ್ದಾರೆ. ಜಾರ್ಖಂಡ್ ವಿಧಾನಸಭೆ ಚುನಾವಣೆ 2024ರ ಹಿನ್ನಲೆಯಲ್ಲಿ ಮೋದಿ ರಾಜ್ಯ ಪ್ರವಾಸ ಕುತೂಹಲಕ್ಕೆ ಕಾರಣವಾಗಿದೆ. ಜಾರ್ಖಂಡ್‌ನ ಟಾಟಾನಗರ ನಗರದಲ್ಲಿ ನರೇಂದ್ರ ಮೋದಿ 6 ಹೊಸ ವಂದೇ ಭಾರತ್ ರೈಲು ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಭಾರತೀಯ ರೈಲ್ವೆ ದೇಶದ 6 ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲುಗಳ ಸಂಚಾರವನ್ನು ಆರಂಭಿಸಲಿದೆ. ನರೇಂದ್ರ ಮೋದಿ ಬೆಳಗ್ಗೆ 10 ಗಂಟೆಗೆ ಟಾಟಾನಗರ-ಪಾಟ್ನಾ ನಡುವಿನ ವಂದೇ ಭಾರತ್ ಸೇರಿ ಒಟ್ಟು 6 ಐಷಾರಾಮಿ ವಂದೇ ಭಾರತ್ ರೈಲು ಸೇವೆಗೆ ಚಾಲನೆಯನ್ನು ನೀಡಲಿದ್ದಾರೆ. ಈ ಮೂಲಕ ದೇಶದ ಇನ್ನಷ್ಟು ಮಾರ್ಗದಲ್ಲಿ ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಚಾಲನೆ ಸಿಗಲಿದೆ.

6 ವಂದೇ ಭಾರತ್ ರೈಲುಗಳು: ನರೇಂದ್ರ ಮೋದಿ 6 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಇವುಗಳು ಟಾಟಾನಗರ-ಪಾಟ್ನಾ, ಭಾಗಲ್ಪುರ್-ದುಮ್ಕಾ-ಹೌರಾ, ಬ್ರಹ್ಮಪುರ-ಟಾಟಾನಗರ, ಗಯಾ-ಹೌರಾ, ದಿಯೋಘರ್-ವಾರಾಣಸಿ ಮತ್ತು ರೂರ್ಕೆಲಾ-ಹೌರಾ.
ಆರು ಹೊಸ ಮಾರ್ಗದಲ್ಲಿ ಪರಿಚಯಿಸಲಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಾಮಾನ್ಯ ಪ್ರಯಾಣಿಕರು, ವೃತ್ತಿಪರರು, ವ್ಯಾಪಾರ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಅನುಕೂಲ ಒದಗಿಸಲಿವೆ. ಈ ರೈಲುಗಳು ದಿಯೋಘರ್ (ಜಾರ್ಖಂಡ್‌ನ ಬೈದ್ಯನಾಥ ಧಾಮ), ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನ (ಉತ್ತರ ಪ್ರದೇಶ), ಕಾಳಿಘಾಟ್, ಕೋಲ್ಕತ್ತಾದ ಬೇಲೂರು ಮಠ (ಪಶ್ಚಿಮ ಬಂಗಾಳ) ಮತ್ತಿತರ ಯಾತ್ರಾ ಸ್ಥಳಗಳಿಗೆ ಪ್ರಯಾಣ ಮಾಡುವ ಭಕ್ತರಿಗೆ ಅನುಕೂಲವಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಈ ಪ್ರದೇಶಗಳ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚು ಸಹಾಯಕವಾಗಲಿದೆ. ಧನ್‌ಬಾದ್‌ನ ಕಲ್ಲಿದ್ದಲು ಗಣಿ ಉದ್ಯಮಗಳು, ಕೋಲ್ಕತ್ತಾದ ಸೆಣಬು ಕೈಗಾರಿಕೆಗಳು, ದುರ್ಗಾಪುರದಲ್ಲಿ ಕಬ್ಬಿಣ ಮತ್ತು ಉಕ್ಕಿನ ಸಂಬಂಧಿತ ಕೈಗಾರಿಕೆಗಳಿಗೆ ಸಹ ವಂದೇ ಭಾರತ್ ರೈಲು ಸಂಪರ್ಕದಿಂದ ಅನುಕೂಲವಾಗುವ ನಿರೀಕ್ಷೆ ಮಾಡಲಾಗಿದೆ.
ಹುಬ್ಬಳ್ಳಿ-ಪುಣೆ ರೈಲಿಗೆ ಚಾಲನೆ: ಜಾರ್ಖಂಡ್‌ನಿಂದ ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್‌ಗೆ ತೆರಳಿದ್ದಾರೆ. ಸುಮಾರು 8,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ. 30 ಮೆಗಾವ್ಯಾಟ್ ಸೋಲಾರ್ ಸಿಸ್ಟಮ್ ಉದ್ಘಾಟಿಸಲಿದ್ದಾರೆ.
ಮೋದಿ ಭುಜ್-ಅಹಮದಾಬಾದ್ ಮಾರ್ಗದ ಭಾರತದ ಮೊದಲ ವಂದೇ ಮೆಟ್ರೋ ಸೇರಿದಂತೆ ಹಲವಾರು ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಹಸಿರುನಿಶಾನೆ ತೋರಲಿದ್ದಾರೆ. ಇವುಗಳಲ್ಲಿ ನಾಗ್ಪುರ-ಸಿಕಂದರಾಬಾದ್, ಕೊಲ್ಹಾಪುರ-ಪುಣೆ, ಆಗ್ರಾ ಕ್ಯಾಂಟ್- ಬನಾರಸ್, ದುರ್ಗ್-ವಿಶಾಖಪಟ್ಟಣಂ ಮತ್ತು ಪುಣೆ-ಹುಬ್ಬಳ್ಳಿ ಮತ್ತು ವಾರಣಾಸಿ-ದೆಹಲಿಗೆ 20 ಕೋಚ್‌ಗಳಿರುವ ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.
ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ ಮತ್ತು ಮಹರಾಷ್ಟ್ರದ ಪುಣೆ ನಡುವೆ ವಂದೇ ಭಾರತ್ ರೈಲುಗಳ ಸಂಚಾರ ಆರಂಭವಾಗಲಿದೆ. ಈ ಮೂಲಕ ಹುಬ್ಬಳ್ಳಿ ನಗರಕ್ಕೆ 2ನೇ ವಂದೇ ಭಾರತ್ ರೈಲು ಸಿಕ್ಕಿದೆ. ಈಗಾಗಲೇ ಕೆಎಸ್ಆರ್ ಬೆಂಗಳೂರು-ಧಾರವಾಡ ರೈಲು ವಯಾ ಹುಬ್ಬಳ್ಳಿ ಸಂಚಾರವನ್ನು ನಡೆಸುತ್ತಿದೆ.












Click it and Unblock the Notifications