ಪ್ರಧಾನಿ ನರೇಂದ್ರ ಮೋದಿ ಒಬ್ಬ ಸರಣಿ ಸುಳ್ಳುಗಾರ: ಕಾಂಗ್ರೆಸ್ ಟೀಕೆ
ನವದೆಹಲಿ, ಮೇ 9: 'ಪ್ರಧಾನಿ ಮೋದಿ ಅವರಿಗೆ ತಮ್ಮ ಸಾಧನೆಗಳ ಕುರಿತು ಮಾಡನಾಡಲು ಏನೂ ಇಲ್ಲ. ಕಳೆದ ಆರು ತಿಂಗಳಿನಿಂದ ರಫೇಲ್ ಡೀಲ್, ಅಪನಗದೀಕರಣ, ನಿರುದ್ಯೋಗಗಳ ಬಗ್ಗೆ ಚರ್ಚೆ ನಡೆಸಲು ರಾಹುಲ್ ಗಾಂಧಿ ಸವಾಲು ಹಾಕುತ್ತಲೇ ಇದ್ದಾರೆ. ಆದರೆ, ಮಾತನಾಡಲು ಮೋದಿ ಅವರಿಗೆ ಯಾವುದೇ ಧೈರ್ಯವಿಲ್ಲ' ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದರು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಸತ್ಯಗಳು ಮೋದಿ ಅವರಿಗೆ ಬೇಕಾಗಿಲ್ಲ. ಅವರಿಗೆ ಸ್ವಂತ ಸಾಧನೆಗಳ ಬಗ್ಗೆ ಮಾತನಾಡಲು ಏನೂ ಇಲ್ಲ. ತನ್ನ ವೈಫಲ್ಯಗಳಿಗೆ ಮತಹಾಕುವಂತೆ ಕೋರುತ್ತಿರುವ ಮೊದಲ ಪ್ರಧಾನಿ ಮೋದಿ. ಇದಕ್ಕೆ ಪುಲ್ವಾಮಾ ದಾಳಿ ಉದಾಹರಣೆ ಎಂದು ಖೇರಾ ಟೀಕಿಸಿದರು.
'ಮೂವತ್ತು ವರ್ಷಗಳ ಹಿಂದೆ ರಾಜೀವ್ ಗಾಂಧಿ ಐಎನ್‌ಎಸ್ ವಿರಾಟ್‌ನಲ್ಲಿ ರಜೆಯ ಪ್ರವಾಸ ಹೋಗಿದ್ದರು ಎಂದು ಮೋದಿ ಹೇಳಿದ್ದಾರೆ. ಪ್ರಧಾನಿ ಒಬ್ಬ ಸರಣಿ ಸುಳ್ಳುಗಾರ. ಅವರ ಸುಳ್ಳುಗಳನ್ನು ಹಿರಿಯ ಅಧಿಕಾರಿಯೊಬ್ಬರು ಇಂದು ಬಯಲು ಮಾಡಿದ್ದಾರೆ. ರಾಜೀವ್ ಗಾಂಧಿ ಅವರು ಕಚೇರಿ ಕೆಲಸಕ್ಕೆ ತೆರಳಿದ್ದರೇ ಹೊರತು, ರಜೆ ಮೋಜಿಗೆ ಅಲ್ಲ ಎಂಬುದನ್ನು ನಿವೃತ್ತ ವೈಸ್ ಅಡ್ಮಿರಲ್ ವಿನೋದ್ ಪಸ್ರಿಚಾ ಅವರು ತಿಳಿಸಿದ್ದಾರೆ' ಎಂದು ಹೇಳಿದರು.

ಚುನಾವಣಾ ಪ್ರಚಾರಕ್ಕಾಗಿ ಪ್ರವಾಸ ಮಾಡಲು ಕೇವಲ 744 ರೂಪಾಯಿ ಪಾವತಿಸಿ ಏರ್ ಫೋರ್ಸ್‌ನ ಜೆಟ್‌ಗಳನ್ನು 'ಸ್ವಂತ ಟ್ಯಾಕ್ಸಿ'ಯಂತೆ ಬಳಸಿರುವುದು ಪ್ರಧಾನಿ ಮೋದಿ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ, 'ಭಾರತೀಯ ವಾಯುಪಡೆ ವಿಮಾನಗಳನ್ನು ನೀವು ನಿಮ್ಮದೇ ಟ್ಯಾಕ್ಸಿಯಂತೆ ಬಳಸಿಕೊಂಡಿದ್ದೀರಿ. ನಿಮ್ಮ ಚುನಾವಣಾ ಪ್ರವಾಸಗಳಿಗಾಗಿ ಐಎಎಫ್ ಜೆಟ್‌ಗಳಿಗೆ ಕೇವಲ 744 ರೂ. ನೀಡಿ ಬಳಸಿಕೊಂಡಿದ್ದೀರಿ' ಎಂದು ಆರೋಪಿಸಿದರು.
'ನಿಮ್ಮದೇ ಪಾಪಗಳು ನಿಮ್ಮನ್ನು ಕಾಡುತ್ತಿರುವುದಕ್ಕೆ ಭೀತಿಗೊಂಡಿದ್ದೀರಿ. ಹೀಗಿರುವಾಗ ನಾಚಿಕೆಬಿಟ್ಟು ಬೇರೆಯವರತ್ತ ಬೊಟ್ಟು ಮಾಡುತ್ತಿದ್ದೀರಿ' ಎಂದು ಟೀಕಿಸಿದರು.












Click it and Unblock the Notifications