ಮೋದಿ- ಅದಾನಿ ಇಬ್ಬರೂ ಒಂದೇ, ಈಸ್ಟ್ ಇಂಡಿಯಾ ಕಂಪನಿ- ಅದಾನಿ ಗ್ರೂಪ್ ನಡುವೆ ಸಾಮ್ಯತೆ ಇದೆ: ರಾಹುಲ್ ಗಾಂಧಿ ಹೇಳಿದ್ದೇನು?
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅದಾನಿ ಗ್ರೂಪ್‌ಗೆ ದೇಶದ ಸಂಪತ್ತನ್ನು ಹಸ್ತಾಂತರಿಸುತ್ತಿದೆ. ಇದೇ ರೀತಿಯಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯು ಭಾರತದಿಂದ ಸಂಪತ್ತನ್ನು ಕಿತ್ತುಕೊಂಡಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ನವದೆಹಲಿ, ಫೆಬ್ರವರಿ 27: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅದಾನಿ ಗ್ರೂಪ್‌ಗೆ ದೇಶದ ಸಂಪತ್ತನ್ನು ಹಸ್ತಾಂತರಿಸುತ್ತಿದೆ. ಇದೇ ರೀತಿಯಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯು ಭಾರತದಿಂದ ಸಂಪತ್ತನ್ನು ಕಿತ್ತುಕೊಂಡಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ತಮ್ಮ ಪಕ್ಷದ 85 ನೇ ಮಹಾಧಿವೇಶನದ ಸಮಾರೋಪ ಸಮಾರಂಭದಲ್ಲಿ ಹೇಳಿದರು.
ಚರಿತ್ರೆ ಪುನರಾವರ್ತನೆಯಾಗುತ್ತಿದೆ ಎಂದು ಎಚ್ಚರಿಸಿದ ರಾಹುಲ್ ಗಾಂಧಿ, 'ಮೋದಿ ಮತ್ತು ಅದಾನಿ ಇಬ್ಬರೂ ಒಂದೇ' ಎಂದು ವಾಗ್ದಾಳಿ ನಡೆಸಿದರು. ಈ ಹಿನ್ನೆಲೆಯಲ್ಲಿ ಸಂಸತ್ತಿ ಅಧಿವೇಶನದ ವೇಳೆ ಉದ್ಯಮಿ ಗೌತಮ್ ಅದಾನಿ ಬಗ್ಗೆ ಪ್ರಶ್ನೆಗಳನ್ನು ಕೇಳಲು ಪ್ರತಿಪಕ್ಷಗಳಿಗೆ ಅವಕಾಶ ನೀಡಲಿಲ್ಲ ಎಂದೂ ಹೇಳಿದರು. ಹೊರ ಜಗತ್ತಿಗೆ ಸತ್ಯ ಗೊತ್ತಾಗುವವರೆಗೂ ಅದಾನಿ ಬಗ್ಗೆ ಪ್ರಶ್ನೆ ಕೇಳುತ್ತಲೇ ಇರುವುದಾಗಿ ಪ್ರತಿಪಾದಿಸಿದರು.

ಭಾರತ್ ಜೋಡೋ ಯಾತ್ರೆಯ ಮೂಲಕ ಕೈಗೊಂಡ ತಪ್ಪಸ್ಸಿನ ಪ್ರಕ್ರಿಯೆಯನ್ನು ಮುಂದುವರಿಸಲು ಅವರು ಕಾಂಗ್ರೆಸ್ ಪಕ್ಷದ ನಾಯಕರಿಗೆ ಮನವಿ ಮಾಡಿಕೊಂಡರು. ಇದಕ್ಕಾಗಿ ಹೊಸ ಯೋಜನೆಯನ್ನು ರೂಪಿಸಲು ಒತ್ತಾಯಿಸಿದರು, ಈ ಬಾರಿ ಪೂರ್ವ-ಪಶ್ಚಿಮ ಮಾರ್ಗದಲ್ಲಿ ಮತ್ತೊಂದು ಯಾತ್ರೆ ಮಾಡುವ ಮುನ್ಸೂಚನೆಯನ್ನು ರಾಹುಲ್ ಗಾಂಧಿ ನೀಡಿದರು.
ಸುಮಾರು 17,000 ಪ್ರತಿನಿಧಿಗಳನ್ನು ಉದ್ದೇಶಿಸಿ 50 ನಿಮಿಷಗಳ ಕಾಲ ನೀಡಿದ ಭಾಷಣದಲ್ಲಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮತ್ತು ಅದಾನಿ ಗ್ರೂಪ್ ಬಗ್ಗೆ ಮಾತನಾಡಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಕುರಿತು ಮಾತನಾಡಿದ ಅವರು, 'ಯಾತ್ರೆಯು ಕಾಶ್ಮೀರಿ ಯುವಕರನ್ನು ಹುರಿದುಂಬಿಸಿದೆ. ಪುಲ್ವಾಮಾ ಮತ್ತು ಅನಂತನಾಗ್‌ನಂತಹ ಭಯೋತ್ಪಾದನೆ ಪೀಡಿದ ಪ್ರದೇಶಗಳಲ್ಲಿಯೂ ಸಹ ರಾಷ್ಟ್ರಧ್ವಜವನ್ನು ಹಿಡಿಯುವಂತೆ ಮಾಡಿದೆ' ಎಂದು ಹೇಳಿದರು.

'ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಹೇಳಿದ್ದನ್ನು ನಾನು ಕೇಳಿದೆ. ಭಾರತದ ಪ್ರಧಾನಿಗೆ ವ್ಯತ್ಯಾಸ ಅರ್ಥವಾಗಿಲ್ಲ. ನರೇಂದ್ರ ಮೋದಿ 15- 20 ಬಿಜೆಪಿ ಮುಖಂಡರೊಂದಿಗೆ ಧ್ವಜಾರೋಹಣ ಮಾಡಿದರು. ಭಾರತ್ ಜೋಡೋ ಯಾತ್ರೆಯು ಲಕ್ಷಾಂತರ ಕಾಶ್ಮೀರಿ ಯುವಕರನ್ನು ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಮಾಡಿತು' ಎಂದು ಅವರು ಹೇಳಿದರು.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸುವ ಮೂಲಕ ಗಾಂಧಿಯವರು ಬಿಜೆಪಿಯ ರಾಷ್ಟ್ರೀಯತೆಯನ್ನು ತರಾಟೆಗೆ ತೆಗೆದುಕೊಂಡರು. ಚೀನಾ ದೊಡ್ಡ ಆರ್ಥಿಕತೆಯಾಗಿದೆ. ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಅವರೊಂದಿಗೆ ಸಮರಕ್ಕೆ ಇಳಿಯಲು ಹಿಂಜರಿಯುತ್ತಿದೆ ಎಂದು ಟೀಕಿಸಿದರು.
'ಬ್ರಿಟಿಷರು ನಮ್ಮನ್ನು ಆಳಿತ್ತಿದ್ದಾಗ, ಅವರ ಆರ್ಥಿಕತೆಯು ನಮಗಿಂತ ಚಿಕ್ಕದಾಗಿರಲಿಲ್ಲ. ನಮಗಿಂತ ಯಾರಾದರೂ ಬಲಶಾಲಿಯಾಗಿದ್ದರೆ ನಾವು ಜಗಳವಾಡುವುದಿಲ್ಲವೇ? ಮೋದಿ ಸರ್ಕಾರ ನಡೆದುಕೊಳ್ಳುವ ರೀತಿಗೆ ಒಂದು ಉಲ್ಲೇಖವಿದೆ. ಅದು ಹೇಡಿತನ' ಎಂದೂ ರಾಹುಲ್ ಹೇಳಿದರು.
'ಇದು ವಿನಾಯಕ ದಾಮೋದರ್ ಸಾವರ್ಕರ್ ಅವರ ಸಿದ್ಧಾಂತ. ಶಕ್ತಿಶಾಲಿಗಳ ಮುಂದೆ ತಲೆಬಾಗುವುದು ಅವರ ಸಿದ್ದಾಂತ' ಎಂದು ತಿಳಿಸಿದರು.
ಭಾರತದ ಸಚಿವರೊಬ್ಬರು ಚೀನಾ ದೇಶಕ್ಕೆ ಹೇಳಿದ್ದಾರೆ. 'ನಿಮ್ಮ ಆರ್ಥಿಕತೆ ದೊಡ್ಡದಾಗಿದೆ ಮತ್ತು ನಾವು ನಿಮ್ಮೊಂದಿಗೆ ಹೋರಾಡಲು ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ. ಇದನ್ನು ರಾಷ್ಟ್ರೀಯತೆ ಎನ್ನುತ್ತೀರಾ? ಇದು ಯಾವ ರೀತಿಯ ದೇಶಭಕ್ತಿ ಇದು? ರಾಹುಲ್ ಪ್ರಶ್ನಿಸಿದರು.
ತಮ್ಮ ಭಾಷಣದ ಎರಡನೇ ಕಂತಿನಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅದಾನಿ ಗ್ರೂಪ್ ಹಾಗೂ ಅದರೊಂದಿಗೆ ಮೋದಿ ಸರ್ಕಾರಕ್ಕಿರುವ ಸಂಬಂಧದ ಕುರಿತು ವಾಗ್ದಾಳಿ ನಡೆಸಿದರು.
ನಾವು ಸಂಸತ್ತಿನಲ್ಲಿ, 'ಅದಾನಿಯೊಂದಿಗೆ ಪ್ರಧಾನಿಯ ಸಂಬಂಧವೇನು' ಎಂದು ಕೇಳಿದಾಗ, ನಮ್ಮ ಸಂಪೂರ್ಣ ಭಾಷಣವನ್ನು ತೆಗೆದುಹಾಕಲಾಯಿತು. ಮಲ್ಲಿಕಾರ್ಜುನ ಖರ್ಗೆ ಅವರ ಸಂಪೂರ್ಣ ಭಾಷಣವನ್ನು ತೆಗೆದುಹಾಕಿದರು. ಅದಾನಿಗೆ ಸಂಬಂಧಿಸಿದ ಸತ್ಯ ಹೊರಬರುವವರೆಗೆ ನಾವು ಸಂಸತ್ತಿನಲ್ಲಿ ಸಾವಿರಾರು ಬಾರಿ ಕೇಳುತ್ತೇವೆ. ನಾವು ಸುಮ್ಮನಾಗುವುದಿಲ್ಲ ಎಂದು ರಾಹುಲ್ ತಿಳಿಸಿದರು.












Click it and Unblock the Notifications