ಮೋದಿ ಮತ್ತೆ ಪ್ರಧಾನಿಯಾದರೆ ಆದ್ಯತಾ ವಲಯವೇನು?
Recommended Video
ನವದೆಹಲಿ, ಮೇ 20: ಬಹುತೇಕ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮತ್ತೆ ಸರ್ಕಾರ ರಚಿಸುವುದು ನಿಶ್ಚಿತವಾಗಿದೆ.
ಹಾಗಿದ್ದರೆ ಮುಂದಿನ ಐದು ವರ್ಷಗಳಲ್ಲಿ ನೂತನ ಸರ್ಕಾರದ ಆದ್ಯತಾ ವಲಯವೇನು? ಮೋದಿ 2.0 ಸರ್ಕಾರ ಏನು ಮಾಡಲಿದೆ ಎಂಬ ಕುತೂಹಲ ಈಗಲೇ ಆರಂಭವಾಗಿದೆ. ಆದರೆ ಖುದ್ದು ಮೋದಿಯೇ ಈ ಪ್ರಶ್ನೆಗೆ ಉತ್ತರಿಸಿದ್ದಾರೆ.
ಭಾರತ ಎದುರಿಸುತ್ತಿರುವ ನೀರಿನ ಜ್ವಲಂತ ಸಮಸ್ಯೆಗೆ ಪರಿಹಾರವೇ ಮೊದಲ ಆದ್ಯತೆಯಾಗಿರಲಿದೆ ಎಂದು ಮೋದಿ ತಿಳಿಸಿದ್ದಾರೆ.

2014ರಲ್ಲಿ ಚುನಾವಣೆ ಗೆದ್ದಾಗ ಸ್ವಚ್ಛ ಭಾರತ ಯೋಜನೆಯ ಮೂಲಕ ದೇಶಾದ್ಯಂತ ಶೌಚಗೃಹಗಳನ್ನು ನಿರ್ಮಿಸಿದ್ದರು. ಇದು ಮಹಿಳೆಯರ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ಸೆಳೆಯಲು ಕಾರಣವಾಗಿದೆ ಎಂಬ ಮಾತುಗಳಿವೆ.
ಮೇ 17ರಂದು ಇಂಗ್ಲಿಷ್ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮೋದಿ ಮಾತನಾಡಿ, ''ಸಮಾಜವಾದಿ ಚಿಂತಕ ರಾಮ್ ಮನೋಹರ್ ಲೋಹಿಯಾ ನೆಹರೂ ಕಾಲದಲ್ಲಿಯೇ ಭಾರತದ ಎರಡು ಆದ್ಯತಾ ವಲಯವನ್ನು ಪ್ರಸ್ತಾಪಿಸಿದ್ದರು.
ದುರಾದೃಷ್ಟವಶಾತ್ ಸಮಾಜವಾದಿ ಚಿಂತನೆಯಲ್ಲಿ ಸರ್ಕಾರ ಅಥವಾ ಪಕ್ಷ ರಚಿಸಿದವರೆಲ್ಲರೂ ಲೋಹಿಯಾ ಅವರ ಈ ಎರಡು ವಿಚಾರಗಳನ್ನು ಕಡೆಗಣಿಸಿದರು. ಲೋಹಿಯಾ ಪ್ರಕಾರ ಮಹಿಳೆಯರಿಗೆ ಶೌಚಗೃಹ ಮತ್ತು ನೀರು(ಪಾಯಿಖಾನಾ ಔರ್ ಪಾನಿ) ಈ ದೇಶದ ಎರಡು ಅತಿದೊಡ್ಡ ಸಮಸ್ಯೆ ಎಂದಿದ್ದರು.
ಲೋಹಿಯಾ ಚಿಂತನೆಗಳನ್ನು ಗೌರವಿಸುವ ಬಿಜೆಪಿ ತನ್ನ ಮೊದಲ ಅವಧಿಯಲ್ಲಿ ಪಾಯಿಖಾನಾ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ. ಎರಡನೇ ಅವಧಿಗೆ ನೀರಿನ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ'' ಎಂದು ಘೋಷಿಸಿದ್ದಾರೆ.
ನೀರಿನ ಸಮಸ್ಯೆಗೆ ಪರಿಹಾರ ಕುರಿತು, ಅಟಲ್ ಬಿಹಾರ್ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಮಾತುಗಳು ಕೇಳಿಬಂದಿದ್ದವು. 2019ರ ಪ್ರಚಾರ ಸಭೆಗಳಲ್ಲೂ ಮೋದಿ ಕೆಲವೊಮ್ಮೆ ಇದನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದರು.
ಈಗ ಮೋದಿ ಮತ್ತೆ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ ಪರಿಹಾರ ಮಾರ್ಗಗಳು ಹೇಗೆ ಬರಲಿವೆ ಎಂಬುದು ಕುತೂಹಲ ಮೂಡಿಸಿದೆ. ಮೋದಿಯ ಮೊದಲ ಸರ್ಕಾರದಲ್ಲೇ ಘೋಷಿಸಿದಂತೆ ನದಿ ಜೋಡಣೆ ಇದರಲ್ಲಿ ಪ್ರಮುಖ ಯೋಜನೆಯಾಗಿರಬಹುದು ಎನ್ನಲಾಗಿದೆ.












Click it and Unblock the Notifications