ಶಾರುಖ್, ಶೆಟ್ಟಿ, ದೇವಗನ್ ಮೇಲೆ ಕೇಸ್
ಗ್ವಾಲಿಯಾರ್(ಮಧ್ಯಪ್ರದೇಶ), ಮೇ.9: ಬಾಲಿವುಡ್ ತಾರೆಗಳಾದ ಶಾರುಖ್ ಖಾನ್, ಮನೋಜ್ ಬಾಜಪೇಯಿ, ಅಜಯ್ ದೇವಗನ್ ಹಾಗೂ ಸುನಿಲ್ ಶೆಟ್ಟಿ ಅವರಿಗೆ ಮಧ್ಯಪ್ರದೇಶದ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಈ ಎಲ್ಲಾ ತಾರೆಗಳು ಜಾಹೀರಾತುಗಳ ಮೂಲಕ ಮದ್ಯದ ಬ್ರಾಂಡ್ ಗೆ ಪ್ರಚಾರ ನೀಡಿದ ಆರೋಪ ಹೊತ್ತಿದ್ದಾರೆ. ಅಬಕಾರಿ ಕಾಯ್ದೆ ಪ್ರಕಾರ ಮದ್ಯದ ಬ್ರಾಂಡ್ ಪ್ರಚಾರ ಮಾಡುವುದು ಕಾನೂನು ಬಾಹಿರ ಕೃತ್ಯವಾಗಿದೆ.
ಮಧ್ಯಪ್ರದೇಶ ರಾಜ್ಯದ ಅಬಕಾರಿ ನಿಯಮಗಳ ಪ್ರಕಾರ ಯಾವುದೇ ಮದ್ಯ ಬ್ರಾಂಡ್ ಗಳಿಗೆ ಜಾಹೀರಾತು ಮೂಲಕ ಪ್ರಚಾರ ನೀಡುವುದು ಅಪರಾಧ. ಹೀಗಾಗಿ ಮದ್ಯ ಪರ ಪ್ರಚಾರ ನಡೆಸಿರುವ ಬಾಲಿವುಡ್ ತಾರೆಯರು ಮೂರು ಮದ್ಯ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಗ್ವಾಲಿಯರ್ ಬೆಂಚ್ ನ ನ್ಯಾಯಾಲಯ ನೋಟಿಸ್ ಜಾರಿ ಮದ್ಯ ಪರ ಪ್ರಚಾರ ಮಾಡಿದ್ದೇಕೆ ಎಂದು ಪ್ರಶ್ನಿಸಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಅವಧೇಶ್ ಭಡೊರಿಯಾ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನೀಡುವ ಭರವಸೆ ನೀಡಿದ್ದಾರೆ. ಆದರೆ, ಬಾಲಿವುಡ್ ತಾರೆಗಳ ಮೇಲೆ ಎಫ್ ಐಆರ್ ದಾಖಲಿಸಲು ನಿರಾಕರಿಸಿದ್ದಾರೆ. ತನಿಖಾಧಿಕಾರಿಗಳನ್ನು ನೇಮಿಸಲಾಗಿದೆ, ತನಿಖೆ ನಡೆಸಲಾಗುತ್ತಿದೆ, ನಿಮ್ಮ ಬಳಿ ಸಾಕ್ಷಿಗಳಿದ್ದರೆ ಒದಗಿಸಿ ಎಂದು ಪೊಲೀಸರು ಹೇಳಿದ್ದಾರೆ.
2013ರಲ್ಲಿ ಇಂದರ್ ಗಂಗ್ ಠಾಣೆಯ ಸ್ಟೇಟನ್ ಹೌಸ್ ಆಫೀಸರ್ ಈ ಪ್ರಕರಣದ ತನಿಖೆ ನಡೆಸಿದ್ದಾರೆ. ತನಿಖೆ ಮುಂದುವರೆಯದ ಕಾರಣ ಮಾ.24, 2013 ರಂದು ಪೀಟಿಷನ್ ದಾಖಲಿಸಿದ್ದ ಅವಧೇಶ್, ಹೈಕೋರ್ಟ್ ಮೆಟ್ಟಿಲೇರಿದ್ದರು. ಮುಖ್ಯ ಕಾರ್ಯದರ್ಶಿ ಹಾಗೂ ಗ್ವಾಲಿಯರ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅವರಿಗೆ ಹೈಕೋರ್ಟ್ ನೋಟಿಸ್ ಜಾರ್ ಮಾಡಿತ್ತು. ನಂತರ ತನಿಖಾಧಿಕಾರಿ ಗಂಭೀರವಾಗಿ ತನಿಖೆ ಮುಂದುವರೆಸಿ ಮಧ್ಯಪ್ರದೇಶ ರಾಜ್ಯ ಅಬಕಾರಿ ಕಾಯ್ದೆ ಸೆಕ್ಷನ್ 23(ಎ) ಅಡಿಯಂತೆ ಪ್ರಕರಣ ದಾಖಲಿಸಿಕೊಂಡು ಬಾಲಿವುಡ್ ತಾರೆಯರು ಮದ್ಯದ ಪರ ಪ್ರಚಾರ ನಡೆಸಿರುವುದು ಕಂಡು ಬಂದಿದೆ ಎಂದು ವರದಿ ಸಲ್ಲಿಸಿದ್ದಾರೆ. ಈ ವರದಿ ಆಧಾರದ ಮೇಲೆ ಬಾಲಿವುಡ್ ತಾರೆಯರಿಗೆ ನೋಟಿಸ್ ಜಾರಿ ಮಾಡಲಾಗಿದೆ.












Click it and Unblock the Notifications