ಭಿಕ್ಷುಕ ಬಾಲಕನಿಗೆ ಕಾಲಿನಿಂದ ಒದ್ದ ಸಚಿವೆಗೆ ಛೀಮಾರಿ!
ಭೋಪಾಲ್, ನ.02: ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರದ ಪಶುಸಂಗೋಪನಾ ಸಚಿವೆ ಕುಸುಮ್ ಮೆಹೆದೆಲೆ ಅವರನ್ನು ಕೂಡಲೇ ವಜಾಗೊಳಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ. ಭಿಕ್ಷುಕ ಬಾಲಕನೊಬ್ಬನನ್ನು ಕಾಲಿನಿಂದ ಒದ್ದು ಅಮಾನವೀಯವಾಗಿ ನಡೆದುಕೊಂಡಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಮಧ್ಯಪ್ರದೇಶದ ಕಾನೂನು ಮತ್ತು ಸಂಸದೀಯ ವ್ಯವಹಾರ, ಸಾರ್ವಜನಿಕ ಆರೋಗ್ಯ, ಪಶು ಸಂಗೋಪನೆ ಸೇರಿದಂತೆ ಅನೇಕ ಖಾತೆಗಳನ್ನು ಹೊಂದಿರುವ ಹಿರಿಯ ಸಚಿವೆ ಕುಸುಮ್ ಮೆಹೆದೆಲೆ ಅವರು ಪನ್ನಾದಲ್ಲಿ ನಡೆದ ರಾಜ್ಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಹೊರಡುವಾಗ ಅಡ್ಡಬಂದ ಭಿಕ್ಷಕ ಬಾಲಕನನ್ನು ಕಾಲಿನಿಂದ ಒದ್ದಿದ್ದಾರೆ. ನಂತರ ಸಚಿವೆಯ ಬೆಂಗಾವಲಿನ ಪಡೆ ಆತನನ್ನು ರಸ್ತೆಯ ಪಕ್ಕಕ್ಕೆ ಹಾಕಿ, ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಸಚಿವೆ ಕುಸುಮ್ ಮೆಹೆಂದಲೆ ಅವರು ತಮ್ಮ ಕಾರನ್ನು ಹತ್ತುವಾಗ ಬಾಲಕನೊಬ್ಬ ಕಾರನ್ನು ಅಡ್ಡಗಟ್ಟಿ ಸಚಿವೆ ಕಾಲಿಗೆ ಬಿದ್ದು 1 ರು ಭಿಕ್ಷೆ ಬೇಡಿದ್ದಾನೆ. ಇದರಿಂದ ಕೋಪಗೊಂಡ ಸಚಿವೆ ಆತನನ್ನು ಕಾಲಿನಿಂದ ಒದ್ದು, ತನ್ನ ಕಾರಿನಲ್ಲಿ ಕುಳಿತುಕೊಂಡು ಅಲ್ಲಿಂದ ತೆರಳಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಬಾಲಕನನ್ನು ಎಬ್ಬಿಸಿ ಪಕ್ಕಕ್ಕೆ ಹಾಕಿದ್ದಾರೆ. ಈ ಘಟನೆಯ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಕೆಕೆ ಮಿಶ್ರಾ, ಈ ಘಟನೆಯಿಂದ ಮಧ್ಯಪ್ರದೇಶದಲ್ಲಿ ಬಿಜೆಪಿ ಮುಖಂಡರು ಅಧಿಕಾರ ಮದದಿಂದ ಹೇಗೆ ವರ್ತಿಸುತ್ತಿದ್ದಾರೆ ಎಂಬುದು ತಿಳಿದು ಬರುತ್ತದೆ. ಚೌಹಾಣ್ ಅವರ ಕ್ಯಾಬಿನೆಟ್ ಸಚಿವರು ಮಿತಿ ಮೀರಿ ನಡೆದುಕೊಳ್ಳುತ್ತಿದ್ದಾರೆ. ಬಡವರು, ನಿರ್ಗತಿಕರಿಗೆ ಬೆಲೆ ಇಲ್ಲದ್ದಂತಾಗಿದೆ. ಸಚಿವೆ ಕುಸುಮ್ ಅವರು ಕೂಡಲೇ ರಾಜೀನಾಮೆ ಸಲ್ಲಿಸಬೇಕು. ಇಲ್ಲವೇ ಚೌಹಾಣ್ ಅವರು ಸಚಿವ ಸಂಪುಟದಿಂದ ಹೊರ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಸಚಿವೆ ಕುಸುಮ್ ಅವರು ಈ ಹಿಂದೆ ಕೂಡಾ ರೈತರ ಆತ್ಮಹತ್ಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ವಿವಾದಿತ ಹೇಳಿಕೆ ನೀಡಿದ್ದರು. ರೈತರು ತಮ್ಮ ಕುಟುಂಬದ ಸದಸ್ಯರು ಅಥವಾ ಮಕ್ಕಳನ್ನು ಕಳೆದುಕೊಂಡಾಗ ಆತ್ಮಹತ್ಯೆಗೆ ಮುಂದಾಗುವುದಿಲ್ಲ. ಬೆಳೆನಾಶವಾದ ತಕ್ಷಣ ಸಾಯುತ್ತಿರುವುದು ಏಕೋ ಅನುಮಾನ ಹುಟ್ಟಿಸುತ್ತಿದೆ ಎಂದಿದ್ದರು.












Click it and Unblock the Notifications