Garlic Price: ಬೆಳ್ಳುಳ್ಳಿ ರಕ್ಷಣೆಗೆ ಬಂದೂಕು ಹಿಡಿದ ರೈತರು: ಹೊಲಗಳಿಗೆ ಸಿಸಿಟಿವಿ ಕಣ್ಗಾವಲು
ದೇಶಾದ್ಯಂತ ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದ್ದು, ಕಷ್ಟಪಟ್ಟು ಬೆಳೆದ ರೈತರಿಗೆ ಸ್ವಲ್ಪ ಲಾಭವಾಗುತ್ತಿದೆ. ಗ್ರಾಹಕರಿಗೆ ಬೆಳ್ಳುಳ್ಳಿ ಬೆಲೆ ಏರಿಕೆ ತಲೆನೋವು ತಂದರೆ ಬೆಳೆದ ರೈತರಿಗೂ ಕೂಡ ನೆಮ್ಮದಿ ಇಲ್ಲದಂತಾಗಿದೆ!
ಮಧ್ಯಪ್ರದೇಶದಲ್ಲಿ ಬೆಳ್ಳುಳ್ಳಿ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 400 ರೂ ಗಡಿ ದಾಟಿದೆ, ಸಗಟು ಮಾರುಕಟ್ಟೆಯಲ್ಲಿ ದರ ಕ್ವಿಂಟಲ್‌ಗೆ 30,000 ರಿಂದ 35,000 ರೂ.ವರೆಗೆ ಇದೆ ಎಂದು ರೈತರು ಹೇಳಿದರು.

ರೈತರು ತಮ್ಮ ಬೆಲೆಬಾಳುವ ಬೆಳ್ಳುಳ್ಳಿ ಬೆಳೆಯನ್ನು ಕಳ್ಳತನದಿಂದ ರಕ್ಷಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಬೆಳ್ಳುಳ್ಳಿ ಬೆಲೆಯು ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗ್ರಾಂಗೆ 400 ರೂ.ಗಳನ್ನು ಮೀರಿದೆ. ಇದರಿಂದ ಹೊಲದಲ್ಲಿ ಬೆಳೆದ ಬೆಳೆಗಳಿಗೆ ಕಳ್ಳರ ಕಾಟ ಹೆಚ್ಚಾಗಿದ್ದು ರೈತರು ಬೆಳ್ಳುಳ್ಳಿ ರಕ್ಷಣೆಗೆ ಹಲವು ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.
ಬಂದೂಕು ಹಿಡಿದ ರೈತರು
ತಮ್ಮ ಅಮೂಲ್ಯ ಬೆಳೆಗಳನ್ನು ರಕ್ಷಿಸುವ ಪ್ರಯತ್ನದಲ್ಲಿ, ರೈತರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿದ್ದಾರೆ ಮತ್ತು ಕಳ್ಳರನ್ನು ತಡೆಯಲು ಶಸ್ತ್ರಸಜ್ಜಿತ ಕಾವಲುಗಾರರನ್ನು ನೇಮಿಸಿಕೊಂಡಿದ್ದಾರೆ ಎಂದು ಹಲವಾರು ರೈತರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಉಜ್ಜಯಿನಿಯ ಚಿಂತಾಮನ್ ರಸ್ತೆಯಿಂದ 12 ಕಿಲೋಮೀಟರ್ ದೂರದಲ್ಲಿರುವ ಮಂಗ್ರೋಲಾ ಗ್ರಾಮದಲ್ಲಿ, ಬೆಳ್ಳುಳ್ಳಿ ಬೆಳೆಗಳ ಸಮೃದ್ಧ ಹೊಲಗಳ ನಡುವೆ ರಕ್ಷಣೆಗಾಗಿ ಬಂದೂಕು ಹಿಡಿದು ಓಡಾಡುತ್ತಿರುವ ಜನರನ್ನು ನೋಡಬಹುದು.
ಸೆಕ್ಯುರಿಟಿ ಗಾರ್ಡ್‌ಗಳು ಮತ್ತು ಶಸ್ತ್ರಸಜ್ಜಿತ ರೈತರು ಜಾಗದಲ್ಲಿ ಜಾಗರೂಕತೆಯಿಂದ ಗಸ್ತು ತಿರುಗುತ್ತಾರೆ, ಆದರೆ ಇತರರು, ಸಿಸಿಟಿವಿ ಕಣ್ಗಾವಲು ವ್ಯವಸ್ಥೆಗಳೊಂದಿಗೆ ತಮ್ಮ ಮನೆಗಳಿಂದಲೇ ತಮ್ಮ ಜಮೀನನ್ನು ರಕ್ಷಣೆ ಮಾಡುತ್ತಿದ್ದಾರೆ.
"ಕಳ್ಳರು ಹಲವಾರು ರೈತರ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಹಾಗಾಗಿ ನಾನು ಬೆಳ್ಳುಳ್ಳಿ ಬಿತ್ತಿರುವ ನನ್ನ 13 ಎಕರೆ ಭೂಮಿಯನ್ನು ನಮ್ಮ ಪರವಾನಗಿ ಪಡೆದ ಬಂದೂಕಿನಿಂದ ರಕ್ಷಿಸುತ್ತಿದ್ದೇನೆ" ಎಂದು ರೈತ ಭರತ್ ಸಿಂಗ್ ಬೈಸ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
"ಕಳೆದ ಎರಡು ವರ್ಷಗಳಲ್ಲಿ ಬೆಳ್ಳುಳ್ಳಿ ಕೃಷಿ ಮಾಡುವಾಗ ಗಮನಾರ್ಹ ನಷ್ಟವನ್ನು ಅನುಭವಿಸಿದ ನಂತರ, ಅದೃಷ್ಟವು ಅಂತಿಮವಾಗಿ ಈ ವರ್ಷ ಕೈ ಹಿಡಿದಿದೆ" ಎಂದು ಭರತ್ ಸಿಂಗ್ ಹೇಳಿದರು.
ಚಿಲ್ಲರೆ ಮಾರುಕಟ್ಟೆಯಲ್ಲಿ 400 ರೂಪಾಯಿ ಇದ್ದರೂ ರೈತರು ಬೆಳೆಗೆ ಕಿಲೋಗ್ರಾಂಗೆ 200 ರೂಪಾಯಿ ಪಡೆಯುತ್ತಿದ್ದಾರೆ ಎಂದೂ ಅವರು ಪ್ರಸ್ತಾಪಿಸಿದರು. "ನಮ್ಮ ಬೆಳ್ಳುಳ್ಳಿ ಬೆಳೆ ಮುಂದಿನ 15 ದಿನಗಳಲ್ಲಿ ಕಟಾವಿಗೆ ಬರಲಿದೆ ಆದ್ದರಿಂದ ನಾವು ನಮ್ಮ ಜಮೀನನ್ನು ಈ ರೀತಿ ಕಾಪಾಡುತ್ತಿದ್ದೇವೆ" ಎಂದು ಭಗತ್ ಸಿಂಗ್ ಹೇಳಿದರು.
ಭೋಪಾಲ್‌ನಲ್ಲಿ ಎಕೆಎಸ್ ಕಂಪನಿ ನಡೆಸುತ್ತಿರುವ ತರಕಾರಿ ವ್ಯಾಪಾರಿ ಮೊಹಮ್ಮದ್ ಸಲೀಂ, ಬೆಳ್ಳುಳ್ಳಿ ಬೆಲೆ ಏರಿಕೆ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. "ಬೆಳ್ಳುಳ್ಳಿ ಬೆಲೆಗಳು ಇಷ್ಟು ಎತ್ತರಕ್ಕೆ ಏರಿರುವುದನ್ನು ನಾನು ಹಿಂದೆಂದೂ ನೋಡಿಲ್ಲ" ಎಂದು ಹೇಳಿದ್ದಾರೆ.
ಒಂದು ಅಂದಾಜಿನ ಪ್ರಕಾರ, ಮಂದಸೌರ್ ಜಿಲ್ಲೆಯಲ್ಲಿ ಸುಮಾರು 30,000 ರೈತರು 91,000 ಟನ್ ಬೆಳ್ಳುಳ್ಳಿಯನ್ನು ಬೆಳೆಯುತ್ತಾರೆ. ರಾಜ್ಯದಲ್ಲಿ ರತ್ಲಾಮ್, ಛಿಂದ್ವಾರಾ, ಅಗರ್ ಮಾಲ್ವಾ, ಇಂದೋರ್, ದೇವಾಸ್ ಮತ್ತು ಶಾಜಾಪುರ ಜಿಲ್ಲೆಗಳಲ್ಲಿ ಬೆಳ್ಳುಳ್ಳಿಯನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ.












Click it and Unblock the Notifications