ರೈತರ ಸಾವು: ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅನಿರ್ದಿಷ್ಟಾವದಿ ಉಪವಾಸ
6 ರೈತರು ಸಾವನ್ನಪ್ಪಿದ ನಂತರ ತೀವ್ರ ಟೀಕೆಗೆ ಗುರಿಯಾಗಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಗಲಭೆ ಪೀಡಿತ ಪ್ರದೇಶದಲ್ಲಿ ಶಾಂತಿ ನೆಲೆಸುವ ತನಕ ಅನಿರ್ದಿಷ್ಟಾವದಿ ಉಪವಾಸ ಕೂರಲು ನಿರ್ಧರಿಸಿದ್ದಾರೆ.
ಭೋಪಾಲ್, ಜೂ 9 (ಪಿಟಿಐ) : ಆರು ರೈತರು ಸಾವನ್ನಪ್ಪಿದ ನಂತರ ತೀವ್ರ ಟೀಕೆಗೆ ಗುರಿಯಾಗಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಗಲಭೆ ಪೀಡಿತ ಪ್ರದೇಶಗಳಲ್ಲಿ ಶಾಂತಿ ನೆಲೆಸುವ ತನಕ ಅನಿರ್ದಿಷ್ಟಾವದಿ ಉಪವಾಸ ಕೂರಲು ನಿರ್ಧರಿಸಿದ್ದಾರೆ.
ರಾಜಧಾನಿ ಭೋಪಾಲ್ ನ ದುಸ್ಸೆರಾ ಮೈದಾನದಲ್ಲಿ ಶನಿವಾರ (ಜೂ 10) ಬೆಳಗ್ಗೆ ಹನ್ನೊಂದು ಗಂಟೆಯಿಂದ ಚೌಹಾಣ್ ಉಪವಾಸ ಕೂರಲಿದ್ದಾರೆ. ಈ ವೇಳೆ ರೈತರ ಜೊತೆ ಮುಕ್ತ ದರ್ಬಾರ್ ನಡೆಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ.
[ಮಧ್ಯಪ್ರದೇಶದ ರೈತರ ಹೋರಾಟದಲ್ಲಿ ರಾಜಕೀಯ ಮೇಲಾಟ]

ದೇಶದ ಪ್ರಸಕ್ತ ರಾಜಕಾರಣಿಗಳಲ್ಲಿ 'ಸರಳಜೀವಿ' ಎಂದೇ ಹೆಸರಾಗಿರುವ ಶಿವರಾಜ್ ಸಿಂಗ್, ನಮ್ಮದು ಯಾವತ್ತಿದ್ದರೂ ರೈತರ ಪರ ಸರಕಾರ, ರಾಜ್ಯದ ಕೆಲವು ಭಾಗಗಳಲ್ಲಿ ಶಾಂತಿ ನೆಲೆಸುವ ತನಕ ಉಪವಾಸ ಕೂರಲು ನಿರ್ಧರಿಸಿದ್ದೇನೆಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ನಾಳೆ ನಡೆಯಲಿರುವ ಓಪನ್ ದರ್ಬಾರ್ ನಲ್ಲಿ ರಾಜ್ಯದ ರೈತರು ನನ್ನನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಬಹುದಾಗಿದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲು ಸರಕಾರ ವಸ್ತುನಿಷ್ಟ ಪ್ರಯತ್ನ ನಡೆಸಲಿದೆ. ನಾನೇ ಖುದ್ದಾಗಿ ನಿಮ್ಮ ಸಮಸ್ಯೆಗಳನ್ನು ಆಲಿಸುತ್ತೇನೆಂದು ಸಿಎಂ ಚೌಹಾಣ್ ಹೇಳಿದ್ದಾರೆ.
ಪೊಲೀಸ್ ಗೋಲಿಬಾರ್ ನಲ್ಲಿ ಮಡಿದ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ಘೋಷಿಸಿದ್ದ ಮಧ್ಯಪ್ರದೇಶ ಸರಕಾರ, ರೈತರ ಸಾಲಮನ್ನಾದ ವಿಚಾರದಲ್ಲಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಚೌಹಾಣ್ ಹೇಳಿದ್ದಾರೆ.












Click it and Unblock the Notifications