3000 ಭಾರತೀಯರು ಸುಡಾನ್ ನೆಲದಿಂದ ತವರಿಗೆ ವಾಪಸ್!
ನವದೆಹಲಿ: ನರಕವಾಗಿ ಬದಲಾಗಿರುವ ಸುಡಾನ್ ದೇಶದಿಂದ ಭಾರತೀಯರ ರಕ್ಷಣಾ ಕಾರ್ಯ ಮುಂದುವರಿದಿದೆ. ಇನ್ನು ಈವರೆಗೂ 3000ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನ ತಾಯ್ನಾಡಿಗೆ ಕರೆತರಲಾಗಿದೆ. ಈ ಮೂಲಕ ಭಾರತೀಯ ಸೇನೆ & ಕೇಂದ್ರ ಸರ್ಕಾರ 'ಆಪರೇಷನ್ ಕಾವೇರಿ' ಯೋಜನೆಯಲ್ಲಿ ಯಶಸ್ಸು ಕಂಡಿದ್ದು, ಮತ್ತಷ್ಟು ಭಾರತೀಯರು ಶೀಘ್ರದಲ್ಲೇ ತವರು ನೆಲ ತಲುಪಲಿದ್ದಾರೆ.
ಸುಡಾನ್ ಸೇನೆ ಹಾಗೂ ಅರೆ ಸೇನಾಪಡೆ ನಡುವೆ ಹಿಂಸಾಚಾರ ಭುಗಿಲೆದ್ದ ಪರಿಣಾಮ ಸುಮಾರು 500ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. 5000ಕ್ಕೂ ಹೆಚ್ಚು ಗಾಯಾಳುಗಳು ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ಹೀಗಾಗಿ ಸುಡಾನ್ ಸಂಘರ್ಷದಲ್ಲಿ ಸಿಲುಕಿ ನರಳುತ್ತಿರುವ ಸಾವಿರಾರು ಭಾರತೀಯರ ರಕ್ಷಣೆಗೆ ಮನವಿ ಕೇಳಿಬಂದಿತ್ತು. ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಭಾರತೀಯ ನೌಕಾಪಡೆ ಹಡಗುಗಳನ್ನ ಸುಡಾನ್‌ಗೆ ಕಳಿಸಿ ರಕ್ಷಣಾ ಕಾರ್ಯವನ್ನು ಆರಂಭಿಸಿತ್ತು. ಇದೀಗ ರಕ್ಷಣಾ ಕಾರ್ಯ ಫಲ ನೀಡಿದ್ದು, ಭಾರತೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಹೊಟ್ಟೆ ಪಾಡು, ಸುಡಾನ್ ನರಕ!
ಭಾರತದ ವಿವಿಧ ರಾಜ್ಯಗಳ ಪ್ರಜೆಗಳು ಸೇರಿದಂತೆ ಕನ್ನಡಿಗರ ರಕ್ಷಣೆಗೆ ಮುಂದಾಗಿದ್ದ ಸೈನಿಕರು, ಸುಡಾನ್ ನೆಲದಿಂದ 3000 ಪ್ರಜೆಗಳನ್ನ ರಕ್ಷಿಸಿದ್ದಾರೆ. ಈ ಪೈಕಿ ಕನ್ನಡ ನಾಡಿನ ಹಕ್ಕಿಪಿಕ್ಕಿ ಸಮುದಾಯದ ಜನರನ್ನು ಸುರಕ್ಷಿತವಾಗಿ ಕನ್ನಡ ನಾಡಿಗೆ ತಲುಪಿಸಲಾಗಿದೆ. ಆಯುರ್ವೇದ ಔಷಧಗಳಿಗೆ ಭಾರತಕ್ಕಿಂತ ಹೆಚ್ಚಾಗಿ ಆಫ್ರಿಕಾ ಸೇರಿ ಹೊರ ದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿ ಹಕ್ಕಿಪಿಕ್ಕಿ ಜನಾಂಗದ ಜನ ಆಯುರ್ವೇದ ಔಷಧ ಮಾರಾಟವನ್ನೇ ಉದ್ಯೋಗ ಮಾಡಿಕೊಂಡಿದ್ದರು. ಹೀಗೆ ಹೊಟ್ಟೆ ಪಾಡಿಗೆ ಸುಡಾನ್ ದೇಶಕ್ಕೆ ಹೋಗಿದ್ದ ಹಕ್ಕಿಪಿಕ್ಕಿ ಜನರು ಪರದಾಡಿದ್ದರು.
ಹಿಸಾಂಚಾರದ ತವರು ಸುಡಾನ್
ಈಗ ಸುಡಾನ್‌ನಲ್ಲಿ ನಡೆಯುತ್ತಿರುವ ಹಿಂಸೆ ಮೊದಲೇನಲ್ಲ. ಇಲ್ಲಿ ಪದೇಪದೆ ಹಿಂಸೆ ನಡೆಯುತ್ತಿದೆ. ಇದಕ್ಕೆ ಕಾರಣ ಹಲವು. ಆದರೆ 1956ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ, 1958, 1969, 1985, 1989, 2019 ಮತ್ತು 2021ರಲ್ಲಿ ಸುಡಾನ್ ಭೀಕರ ದಂಗೆ ಹಾಗೂ ಹಿಂಸಾಚಾರ ನೋಡಿದೆ. 1989ರಲ್ಲಿ ನಡೆದ ದಂಗೆ ಪರಿಣಾಮ ಒಮರ್ ಅಲ್-ಬಶೀರ್ ಅಧಿಕಾರಕ್ಕೆ ಬಂದಿದ್ದ. ಸತತ 3 ದಶಕ ಅಂದರೆ 30 ವರ್ಷಕ್ಕೂ ಹೆಚ್ಚು ಕಾಲ ಈತ ಸರ್ವಾಧಿಕಾರಿಯಾಗಿ ಸುಡಾನ್ ಆಳಿದ್ದ.

ಹೀಗೆ ಒಮರ್ ಅಲ್-ಬಶೀರ್ ಸರ್ವಾಧಿಕಾರಿ ಸರ್ಕಾರವನ್ನು ಕಿತ್ತೊಗೆಯಲು 2019ರಲ್ಲಿ ಹಿಂಸೆ ಭುಗಿಲೆದ್ದಿತ್ತು. ಈ ದಂಗೆಯಲ್ಲಿ ಒಮರ್ ಅಲ್-ಬಶೀರ್ ಅಧಿಕಾರ ಬಿಟ್ಟುಕೊಟ್ಟಿದ್ದ. ಇಷ್ಟೆಲ್ಲಾ ಬೆಳವಣಿಗೆ ಬಳಿಕ ಸುಡಾನ್ ಮತ್ತೆ ಶಾಂತಿಯ ಜೀವನ ನಡೆಸಲಿದೆ ಎಂದೇ ಜಗತ್ತು ಭಾವಿಸಿತ್ತು. ಆದರೆ ಈಗ ಸೇನಾ ಸಂಘರ್ಷ ಶುರುವಾಗಿ, ಮಿಲಿಟರಿ, ಮುಖ್ಯ ಪ್ಯಾರಾ ಮಿಲಿಟರಿ ಪಡೆಯ ಸೈನಿಕರು ಬಡಿದಾಡಿಕೊಳ್ಳುತ್ತಿದ್ದಾರೆ. ಇದರಿಂದ ಜನರು ಕೂಡ ದಿಕ್ಕೇ ತೋಚದ ಪರಿಸ್ಥಿತಿಯಲ್ಲಿದ್ದಾರೆ.
ಭಾರತೀಯ ಯೋಧರ ಸಾಧನೆ
ಸುಡಾನ್ ನೆಲದಲ್ಲಿ ಖುದ್ದು ಸೇನೆ ಮತ್ತು ಅರೆಸೇನಾ ಪಡೆಗಳು ಕದನ ವಿರಾಮ ಘೋಷಿಸಿದ್ದರೂ ಗುಂಡಿನ ಮೊರೆತ ನಿಂತಿಲ್ಲ. ಎಲ್ಲೆಂದರಲ್ಲಿ ಬಾಂಬ್ ದಾಳಿ ನಡೆಯುತ್ತಿದೆ. ಹೀಗಾಗಿ ನಾಗರಿಕರನ್ನ ರಕ್ಷಿಸುವ ಕಾರ್ಯಕ್ಕೆ ಅಡ್ಡಿ ಉಂಟಾಗುತ್ತಿದೆ. ಮಾತು ಕೊಟ್ಟಂತೆ ಸುಡಾನ್‌ನ ಎರಡೂ ಪಡೆಗಳು ನಡೆದುಕೊಂಡಿಲ್ಲ. ಅದರಲ್ಲೂ ಕದನ ವಿರಾಮ ಉಲ್ಲಂಘನೆ ಮಾಡಲು ಸುಡಾನ್ ಅರೆಸೇನಾ ಪಡೆಯೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಆದರೂ ಇದ್ಯಾವುದನ್ನೂ ಲೆಕ್ಕಿಸದೆ ಭಾರತದ ವೀರ ಯೋಧ ಪಡೆ, ಭಾರತೀಯರನ್ನ ರಕ್ಷಿಸಿ ಸೌದಿ ಅರೇಬಿಯಾ ಮೂಲಕ ಭಾರತಕ್ಕೆ ಕರೆತರುತ್ತಿದೆ.

ಒಟ್ಟಾರೆ ಹೇಳುವುದಾದರೆ ಸುಡಾನ್ ನೆಲದಲ್ಲಿ ಪರದಾಡುತ್ತಿದ್ದ ನಮ್ಮವರನ್ನ ರಕ್ಷಿಸಲಾಗಿದ್ದು, ಇನ್ನೇನು ಕೆಲವೇ ದಿನದಲ್ಲಿ ಕಾರ್ಯಾಚರಣೆ ಮುಗಿಯುವ ಸಾಧ್ಯತೆ ಇದೆ. ಜೊತೆಗೆ ಸುಡಾನ್ ಸೇನಾ ಮುಖ್ಯಸ್ಥರ ನಡುವೆ ಮಾತುಕತೆ ಶುರುವಾಗಿದ್ದು, ಆದಷ್ಟು ಬೇಡ ಸುಡಾನ್ ನಾಡಲ್ಲಿ ಶಾಂತಿ ನೆಲೆಸಲಿ ಎಂಬುದೇ ಪ್ರತಿಯೊಬ್ಬರ ಆಶಯ.












Click it and Unblock the Notifications