ಭಾರತದಲ್ಲಿ 19,500ಕ್ಕೂ ಅಧಿಕ ಆಡುಭಾಷೆಗಳು : ಗಣತಿ ವರದಿ
ನವದೆಹಲಿ, ಜುಲೈ 03: ಭಾರತದಲ್ಲಿ 19,500ಕ್ಕೂ ಹೆಚ್ಚು ಆಡುಭಾಷೆಗಳಿವೆ ಇವೆಲ್ಲವನ್ನು ತಾಯ್ನುಡಿ ಎದು ಪರಿಗಣಿಸಬಹುದಾಗಿದೆ ಎಂದು ಇತ್ತೀಚಿನ ಜನಗಣತಿ ಆಧರಿಸಿ ರೂಪಿಸಲಾದ ವರದಿ ತಿಳಿಸಿದೆ.
ಭಾರತದ 121 ಕೋಟಿ ಜನರ ಪೈಕಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಮಾತನಾಡುವ ಭಾಷೆಗಳ ಸಂಖ್ಯೆ 121 ಆಗಿದೆ ಎಂದು ವರದಿಯಲ್ಲಿ
ಹೇಳಲಾಗಿದೆ.
2011ರ ಜನಗಣತಿ ವರದಿ ಪ್ರಕಾರ, 19,569ಕ್ಕೂ ಅಧಿಕ ಮಾತೃಭಾಷೆಗಳಿವೆ. ಆದರೆ, ಶೇ96.71ರಷ್ಟು ಜನಸಂಖ್ಯೆ 22 ಅಧಿಸೂಚಿತ ಭಾಷೆಗಳನ್ನೆ ತಮ್ಮ ಮಾತೃಭಾಷೆಯನ್ನಾಗಿ ಬಳಸುತ್ತಾರೆ.

ಪ್ರತಿ ಕುಟುಂಬದಲ್ಲಿ ರಕ್ತಸಂಬಂಧಿಗಳು ಹಾಗೂ ರಕ್ತಸಂಬಂಧಿಗಳಲ್ಲದವರು ಇರುತ್ತಾರೆ. ಹೀಗಾಗಿ ಗಣತಿಯ ವೇಳೆ ಪ್ರತಿಯೊಬ್ಬ ವ್ಯಕ್ತಿಯ ಆಡುಭಾಷೆಯ ಬಗ್ಗೆ ಮಾಹಿತಿ ಕೇಳಲಾಗಿತ್ತು ಎಂದು ಗಣತಿ ನಡೆಸಿದ ರಿಜಿಸ್ಟ್ರಾರ್ ಜನರಲ್ ಹಾಗೂ ಸೆನ್ಸಸ್ ಆಯುಕ್ತರು ತಿಳಿಸಿದ್ದಾರೆ. ಒಟ್ಟಾರೆ, 270ಕ್ಕೂ ಅಧಿಕ ಗುರುತು ಸಿಗದ ತಾಯ್ನುಡಿಗಳಿದ್ದು, 10 ಸಾವಿರಕ್ಕೂ ಅಧಿಕ ಮಂದಿ ಮಾತನಾಡುತ್ತಿದ್ದಾರೆ.
ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೂಚಿಸಿರುವ 22 ಭಾಷೆಗಳು- ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಉರ್ದು, ಬೊಡೋ, ಸಂಥಲಿ, ಮೈಥಿಲಿ ಹಾಗೂ ಡೊಗ್ರಿ.
1967ರಲ್ಲಿ ಸಿಂಧಿ ಭಾಷೆಯನ್ನು, 1992ರಲ್ಲಿ ಕೊಂಕಣಿ, ಮಣಿಪುರಿ, ನೇಪಾಳಿ ಭಾಷೆಗಳನ್ನು ಹಾಗೂ 2004ರಲ್ಲಿ ಬೋಡೋ, ಡೊಗ್ರಿ, ಮೈಥಿಲಿ ಹಾಗೂ ಸಂಥಿಲಿ ಭಾಷೆ ಸೇರಿಸಲಾಗಿದೆ.(ಪಿಟಿಐ)












Click it and Unblock the Notifications