ಮಧ್ಯಪ್ರದೇಶ ಸಿಎಂ ಆಗಿ ಮೋಹನ್ ಯಾದವ್ ಪ್ರಮಾಣ ವಚನ
ಭೋಪಾಲ್, ಡಿಸೆಂಬರ್ 13; ಮಧ್ಯಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿಯ ಆಡಳಿತ ಆರಂಭವಾಗಿದೆ. 230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 163 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ರಾಜ್ಯದಲ್ಲಿ ಮರಳಿ ಅಧಿಕಾರವನ್ನು ಪಡೆದಿತ್ತು.
ಬುಧವಾರ ಭೋಪಾಲ್‌ನ ಲಾಲ್ ಪರೇಡ್ ಗ್ರೌಂಡ್‌ನಲ್ಲಿ ನಡೆದ ಸಮಾರಂಭದಲ್ಲಿ ಮೋಹನ್ ಯಾದವ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

58 ವರ್ಷದ ಮೋಹನ್ ಯಾದವ್ ಈ ಹಿಂದೆ ಶಿವರಾಜ್ ಸಿಂಗ್ ಚೌವ್ಹಾಣ್ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು. ಉಜ್ಜೈನಿ ದಕ್ಷಿಣ ಕ್ಷೇತ್ರದಿಂದ ಅವರು 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಇಬ್ಬರು ಡಿಸಿಎಂಗಳು; ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇಬ್ಬರು ಉಪಮುಖ್ಯಮಂತ್ರಿಗಳನ್ನು ಬಿಜೆಪಿ ಆಯ್ಕೆ ಮಾಡಿದೆ.
ರಾಜೇಂದ್ರ ಶುಕ್ಲಾ ಮತ್ತು ಜಗದೀಶ್ ದೇವಡಾ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿಮಾನಯಾನ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಸೇರಿದಂತೆ ಹಲವಾರು ಕೇಂದ್ರ ಸಚಿವರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದ ಬಿಜೆಪಿ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಬಿಟ್ಟು, ಮೋಹನ್ ಯಾದವ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿತ್ತು.
ರಾಜ್ಯದಲ್ಲಿ ನವೆಂಬರ್ 17ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಶೇ 76.22ರಷ್ಟು ದಾಖಲೆಯ ಮತದಾನವಾಗಿತ್ತು. 230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 163, ಕಾಂಗ್ರೆಸ್ 66 ಮತ್ತು ಬಿಎಪಿ ಪಕ್ಷ 1 ಸ್ಥಾನದಲ್ಲಿ ಜಯಗಳಿಸಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷ ಮತ್ತೆ ಅಧಿಕಾರ ಪಡೆದಿದೆ. ಆದರೆ ಮುಖ್ಯಮಂತ್ರಿ ಬದಲಾವಣೆಯಾಗಿದ್ದಾರೆ.
ಡಿಸಿಎಂ ಪರಿಚಯ; 66 ವರ್ಷದ ಜಗದೀಶ್ ದೇವಡಾ ಮಧ್ಯಪ್ರದೇಶ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ನೀಮಚ್ ಜಿಲ್ಲೆಯ ರಾಮ್‌ಪುರ ಗ್ರಾಮದ ದೇವಡಾ ಈ ಹಿಂದೆ ಶಿವರಾಜ್ ಸಿಂಗ್ ಚೌವ್ಹಾಣ್ ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು.
ಜಗದೀಶ್ ದೇವಡಾ 1979ರಲ್ಲಿ ಬಿಜೆಪಿಯನ್ನು ಸೇರಿದರು. ಭಾರತೀಯ ಜನತಾ ಯುವಮೋರ್ಚಾ ಮೂಲಕ ಪಕ್ಷದ ಕೆಲಸ ಆರಂಭಿಸಿದರು. ಮಂಡಲ್ ಅಧ್ಯಕ್ಷರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಅಧ್ಯಕ್ಷರಾಗಿ ಕೆಲಸ ಮಾಡಿದರು. ಬಳಿಕ ರಾಜ್ಯದ ಎಸ್‌ಪಿ ಮತ್ತು ಬಿಜಿವೈಎಂ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. 1990ರಲ್ಲಿ ಮೊದಲ ಬಾರಿಗೆ ಶಾಸಕರಾದ ಜಗದೀಶ್ ದೇವಡಾ ಒಟ್ಟು 6 ಬಾರಿ ಗೆದ್ದು ಬಂದಿದ್ದಾರೆ.
59 ವರ್ಷದ ರಾಜೇಂದ್ರ ಶುಕ್ಲಾ ರೇವಾ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಾಜ್ಯದ ಬ್ರಾಹ್ಮಣ ಸಮುದಾಯದ ಪ್ರಭಾವಿ ನಾಯಕ. ವಿಂದ್ಯಾ ಪ್ರದೇಶ ವಲಯಕ್ಕೆ ಸೇರಿದ ನಾಯಕರು. ಇಂಜಿನಿಯರಿಂಗ್ ಪದವೀಧರರು. ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. 1986ರಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದರು.
1998ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿದ ರಾಜೇಂದ್ರ ಶುಕ್ಲಾ ಪಕ್ಷೇತರ ಅಭ್ಯರ್ಥಿ ವಿರುದ್ಧ ಕೆಲವೇ ಮತಗಳ ಅಂತರದಲ್ಲಿ ಸೋತರು. ಬಳಿಕ ನಡೆದ ಚುನಾವಣೆಯಲ್ಲಿ ಅವರು ಸೋಲು ಕಂಡಿಲ್ಲ. ವಿಂದ್ಯಾ ಪ್ರದೇಶ ವಲಯದಲ್ಲಿ ಬಿಜೆಪಿ ಈ ಬಾರಿ 25ಕ್ಕೂ ಅಧಿಕ ಸೀಟು ಗೆದ್ದಿದೆ. ಆದ್ದರಿಂದ ಆ ಭಾಗದ ನಾಯಕನನ್ನು ಉಪಮುಖ್ಯಮಂತ್ರಿ ಮಾಡಿದೆ.












Click it and Unblock the Notifications