ಮೋದಿ ಪ್ರಮಾಣ ವಚನ ಸ್ವೀಕಾರಕ್ಕೆ ತಮಿಳು 'ಅಮ್ಮ'
ಚೆನ್ನೈ, ಮೇ. 19 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಮಿಳುನಾಡಿನ 'ಅಮ್ಮ' ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಭಾಗವಹಿಸುವ ಸಾಧ್ಯತೆಗಳಿವೆ ಎಂಬ ಸುದ್ದಿ ಬಂದಿದೆ. ತಮಿಳುನಾಡಿನ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ನರೇಂದ್ರ ಮೋದಿ ಅವರು ಭರವಸೆ ನೀಡಿದ ಮೇಲೆ ಈ ಬೆಳವಣಿಗೆ ಕಂಡು ಬಂದಿದೆ.
ನರೇಂದ್ರ ಮೋದಿ ಅವರು ಭಾನುವಾರ ಜಯಲಲಿತಾ ಅವರಿಗೆ ಫೋನ್ ಕರೆ ಮಾಡಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಭರ್ಜರಿ ಜಯಕ್ಕೆ ಶುಭ ಹಾರೈಸಿದರು. ಜಯಲಲಿತಾ ಅವರು ಕೂಡಾ ಬಿಜೆಪಿ ವಿಜಯಕ್ಕೆ ಶುಭ ಕೋರಿದ್ದರು. ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳಲ್ಲಿ 37 ಕ್ಷೇತ್ರಗಳಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಜಯಭೇರಿ ಬಾರಿಸಿದೆ. ಉಳಿದ ಎರಡು ಸೀಟುಗಳ ಪೈಕಿ ಭಾರತೀಯ ಜನತಾ ಪಾರ್ಟಿ ಒಂದು, ಪಾತ್ತಾಲಿ ಮಕ್ಕಳ್ ಕಚ್ಚಿ ಒಂದು ಸೀಟು ಗೆದ್ದಿದೆ.

ಇತ್ತ ರಾಜ್ಯಸಭೆಯಲ್ಲೂ ಎನ್ ಡಿಎಗೆ ಜಯಲಲಿತಾ ಬೆಂಬಲ ಬೇಕಾಗುತ್ತದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಒಕ್ಕೂಟವು -NDA ರಾಜ್ಯಸಭೆ ಅತಂತ್ರ ಸ್ಥಿತಿಯಲ್ಲಿದೆ. ಪ್ರಸ್ತುತ ಎನ್ ಡಿಎ 62 ಸ್ಥಾನಗಳನ್ನು ಹೊಂದಿದೆ. ಆದರೆ ಬಹುಮತಕ್ಕೆ ಅಗತ್ಯವಿರುವುದು 121 ಸ್ಥಾನಗಳು. ಗರಿಷ್ಠ 245 ಸದಸ್ಯರನ್ನೊಳಗೊಂಡ ರಾಜ್ಯಸಭೆಯಲ್ಲಿ ಪಕ್ಷಗಳ ಬಲಾಬಲದ ಲೆಕ್ಕಾಚಾರ ಇಲ್ಲಿ ಓದಿ.
ರಾಜ್ಯಸಭೆಯಲ್ಲಿ ಎಐಎಡಿಎಂಕೆ 10 ಸಂಸದರು, ಟಿಎಂಸಿ 12,ಬಿಜೆಡಿ 6, ಬಿಎಸ್ ಪಿ14, ಜೆಡಿಯು ಹಾಗೂ ಸಮಾಜವಾದಿ ಪಕ್ಷ 9 ಸ್ಥಾನಗಳನ್ನು ಹೊಂದಿದೆ. ಈ ಪೈಕಿ ಎಐಎಡಿಎಂಕೆ ಹಾಗೂ ಬಿಜೆಡಿ ಮಾತ್ರ ಬಿಜೆಪಿ ಪರ ನಿಲ್ಲಬಲ್ಲ ಪಕ್ಷಗಳಾಗಿವೆ. ಅದೂ ಕೂಡಾ ಕೆಲವು ಷರತ್ತುಗಳಿಗೆ ಎನ್ಡಿಎ ಒಪ್ಪಿದರೆ ಮಾತ್ರ.
ಮಮತಾ-ಜಯಾ ಜೋಡಿ: ಇನ್ನೊಂದು ಮೂಲಗಳ ಪ್ರಕಾರ ಎಐಎಡಿಎಂಕೆ, ಟಿಎಂಸಿ ಪಕ್ಷಗಳು ಮೈತ್ರಿ ಕೂಟ ರಚಿಸಿಕೊಂಡು ವಿಪಕ್ಷ ನಾಯಕನ ಸ್ಥಾನ ಪಡೆಯಲು ಯತ್ನಿಸುತ್ತಿವೆ ಎಂಬ ಸುದ್ದಿ ಬಂದಿದೆ. ಎರಡು ಪಕ್ಷಗಳ ಸಂಖ್ಯಾ ಬಲ(71) ಕಾಂಗ್ರೆಸ್ಸಿನ 44 ಮೀರುತ್ತದೆ. ಆದರೆ, ಈ ಆಯ್ಕೆಗೆ ಒಪ್ಪಿಗೆ ಸಿಗುವುದು ಮುಂದಿನ ಹೊಸ ಸ್ಪೀಕರ್ ಅವರಿಂದ ಎಂಬುದನ್ನು ಮರೆಯುವಂತಿಲ್ಲ.












Click it and Unblock the Notifications