Manipur: ಮಣಿಪುರದಲ್ಲಿ ಪ್ರತಿಭಟನೆ ತೀವ್ರ; ಮುಖ್ಯಮಂತ್ರಿ ಮನೆಗೆ ನುಗ್ಗಲು ಪ್ರತಿಭಟನಾಕರರ ಯತ್ನ
ಮಣಿಪುರದಲ್ಲಿ ಮತ್ತೆ ಸಂಘರ್ಷ ತೀವ್ರವಾಗಿದೆ. ಪ್ರತಿಭಟನೆ ಕಾವು ಜೋರಾಗಿದ್ದು, ಶನಿವಾರ ಮಣಿಪುರ ಮುಖ್ಯಮಂತ್ರಿ ನಿವಾಸಕ್ಕೆ ನುಗ್ಗಲು ಪ್ರತಿಭಟನಾಕಾರರು ಪ್ರಯತ್ನ ಮಾಡಿರುವ ಘಟನೆ ನಡೆದಿದೆ. ಆರು ಒತ್ತೆಯಾಳುಗಳ ಸಾವಿನ ಘಟನೆ ಖಂಡಿಸಿ ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಶನಿವಾರ ಸಂಜೆ ಪ್ರತಿಭಟನಾಕಾರರ ಗುಂಪೊಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನಿವಾಸಕ್ಕೆ ನುಗ್ಗಲು ಪ್ರಯತ್ನಿಸಿದೆ.
ಈ ಸಂದರ್ಭದಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಭಾರಿ ಸಂಘರ್ಷ ನಡೆದಿದೆ. ಪ್ರತಿಭಟನಾಕಾರರನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ. ಶನಿವಾರ ಮುಂಜಾನೆ ಪ್ರತಿಭಟನಾಕಾರರು ಮೂವರು ಸಚಿವರು ಮತ್ತು ಆರು ಶಾಸಕರ ನಿವಾಸಗಳ ಮೇಲೆ ದಾಳಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐದು ಜಿಲ್ಲೆಗಳಲ್ಲಿ ಪ್ರತಿಭಟನೆ ಕಾವು ಜೋರಾಗಿದ್ದು ಅನಿರ್ದಿಷ್ಟ ಅವಧಿಗೆ ನಿಷೇಧಾಜ್ಞೆ ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಸಶಸ್ತ್ರ ಪಡೆಗಳಿಗೆ ಅನಿಯಂತ್ರಿತ ಅಧಿಕಾರವನ್ನು ನೀಡುವ ವಿವಾದಾತ್ಮಕ ಕಾನೂನನ್ನು ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮರುಸ್ಥಾಪಿಸಲಾಗಿದೆ. ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ (AFSPA) ಅನ್ನು ಪರಿಶೀಲಿಸಲು ಮತ್ತು ಹಿಂತೆಗೆದುಕೊಳ್ಳುವಂತೆ ಮಣಿಪುರ ಸರ್ಕಾರವು ಇಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಮಣಿಪುರದಲ್ಲಿ ಸಂಘರ್ಷ ಹೆಚ್ಚಾದ ಬಳಿಕ ಗೃಹ ವ್ಯವಹಾರಗಳ ಸಚಿವಾಲಯವು ನವೆಂಬರ್ 14 ರಂದು ಇಂಫಾಲ್ ಪಶ್ಚಿಮ ಜಿಲ್ಲೆಯ ಸೆಕ್ಮೈ ಪಿಎಸ್ ಮತ್ತು ಲಾಮ್ಸಾಂಗ್ ಪಿಎಸ್ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ, ಇಂಫಾಲ್ ಪೂರ್ವದ ಲಾಮ್ಲೈ, ಬಿಷ್ಣುಪುರ್‌ನ ಮೊಯಿರಾಂಗ್, ಕಾಂಗ್‌ಪೋಕ್ಪಿಯ ಲೈಮಾಖೋಂಗ್ ಮತ್ತು ಜಿರಿಬಾಮ್ ಜಿಲ್ಲೆಯ ಜಿರಿಬಾಮ್‌ನಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಯನ್ನು ಜಾರಿ ಮಾಡಿತ್ತು.
ಮುಗಿಯುತ್ತಿಲ್ಲ ಸಂಘರ್ಷ
2023ರ ಮೇ ತಿಂಗಳಿನಿಂದ ಮಣಿಪುರ ರಾಜ್ಯದಲ್ಲಿ ಜನಾಂಗೀಯ ಸಂಘರ್ಷ ಆರಂಭವಾಗಿದೆ. ಮೈತೇಯಿ ಮತ್ತು ಕುಕಿ ಜನಾಂಗದ ನಡುವೆ ಆರಂಭವಾದ ಘರ್ಷಣೆ ಒಂದು ವರ್ಷ ಕಳೆದರೂ ಮುಂದುವರೆದಿದೆ. ಜನಾಂಗೀಯ ಸಂಘರ್ಷದಲ್ಲಿ ಈವರೆಗೆ 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸಾವಿರಾರು ಜನ ಮನೆಗಳನ್ನು ಕಳೆದುಕೊಂಡಿದ್ದು ಸ್ಥಳಾಂತರಿಸಲಾಗಿದೆ. ಇತ್ತೀಚೆಗೆ ನಡೆಯುತ್ತಿರುವ ಘಟನೆಗಳಿಂದ ಮತ್ತೆ ಸಂಘರ್ಷ ತೀವ್ರವಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.
ಕಳೆದ ವಾರ ಶಸ್ತ್ರಾಸ್ತ್ರ ಹೊಂದಿದ್ದ ಕುಕಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಎನ್‌ಕೌಂಟರ್ ನಲ್ಲಿ 10 ಮಂದಿಯನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. ಜಿರಿಬಂ ಪ್ರದೇಶದಲ್ಲಿ ಕುಕಿ ಉಗ್ರರು ಅಪಹರಿಸದ್ದರು ಎನ್ನಲಾದ ಒಂದೇ ಕುಟುಂಬದ ಆರು ಸದಸ್ಯರ ಶವಗಳು ಪತ್ತೆಯಾದ ಬಳಿಕ ಮಣಿಪುರದಲ್ಲಿ ಸಂಘರ್ಷ ತೀವ್ರಗೊಂಡಿದೆ.












Click it and Unblock the Notifications