Owaisi: ಅಸಾದುದ್ದೀನ್ ಓವೈಸಿ ಮನೆಗೆ ಕಪ್ಪು ಬಣ್ಣ ಹಚ್ಚಿದ ಕಿಡಿಗೇಡಿಗಳು!
ದೆಹಲಿ ಜೂನ್ 28: ದೆಹಲಿಯಲ್ಲಿರುವ ತಮ್ಮ ನಿವಾಸದ ಗೋಡೆಗಳಿಗೆ ಕಿಡಿಗೇಡಿಗಳು ಕಪ್ಪು ಬಣ್ಣ ಹಚ್ಚಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಆರೋಪಿಸಿದ್ದಾರೆ.
ಮನೆ ಮುಂದೆ ಕೆಲವು ಪೋಸ್ಟರ್‌ಗಳನ್ನು ಹಾಕಲಾಗಿದ್ದು, ಅದರ ಮೇಲೆ 'ಭಾರತ್ ಮಾತಾ ಕಿ ಜೈ' ಎಂದು ಬರೆಯಲಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಈ ಬಗ್ಗೆ ಟ್ವೀಟ್ ಮಾಡಿ, 'ಕೆಲವು ಅಪರಿಚಿತ ಕಿಡಿಗೇಡಿಗಳು ನನ್ನ ಮನೆಗೆ ಇಂದು ಕಪ್ಪು ಬಣ್ಣವನ್ನು ಹಚ್ಚಿದ್ದಾರೆ. ನನ್ನ ದೆಹಲಿ ನಿವಾಸದ ಮೇಲೆ ಅದೆಷ್ಟು ಬಾರಿ ಈ ರೀತಿ ದಾಳಿ ಮಾಡಲಾಗಿದೆ ಎಂಬ ಲೆಕ್ಕಾಚಾರವನ್ನು ನಾನು ಕಳೆದುಕೊಂಡಿದ್ದೇನೆ. ಇದು ಪದೇ ಪದೇ ಹೇಗೆ ನಡೆಯುತ್ತಿದೆ ಎಂದು ನಾನು ದೆಹಲಿ ಪೊಲೀಸ್ ಅಧಿಕಾರಿಗಳನ್ನು ಕೇಳಿದಾಗ, ಅವರು ಅಸಾಹಾಯಕತೆ ವ್ಯಕ್ತಪಡಿಸಿದರು' ಎಂದು ಓವೈಸಿ ಬರೆದಿದ್ದಾರೆ.
Some “unknown miscreants” vandalised my house with black ink today. I have now lost count the number of times my Delhi residence has targeted. When I asked @DelhiPolice officials how this was happening right under their nose, they expressed helplessness. @AmitShah this is… pic.twitter.com/LmOuXu6W63
— Asaduddin Owaisi (@asadowaisi) June 27, 2024
ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಹೈದರಾಬಾದ್ ಸಂಸದ ಓವೈಸಿ ಅವರ ದೆಹಲಿ ನಿವಾಸದ ನಾಮಫಲಕಕ್ಕೆ ಕಪ್ಪು ಮಸಿ ಬಳಿಯಲಾಗಿದೆ. ಘಟನೆಯ ಬಗ್ಗೆ ವಿವರಿಸಿದ ಪೊಲೀಸರು, ನಮಗೆ ಯಾವುದೇ ಪಿಸಿಆರ್ ಅಥವಾ ಲಿಖಿತ ದೂರು ಬಂದಿಲ್ಲ ಎಂದು ಹೇಳಿದರು. ಆದರೆ, ಘಟನೆಯ ನಂತರ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ನಾನು ಯಾವುದಕ್ಕೂ ಹೆದರುವುದಿಲ್ಲ. ಮನೆಗೆ ಬಣ್ಣ ಹಚ್ಚಿ ಕಲ್ಲು ತೂರಾಟ ಮಾಡಿದರೆ ನಾನು ಹೆದರುವುದಿಲ್ಲ. ಇದೆಲ್ಲಾ ಮಾಡಿ ನೀವು ಓಡಿಹೋಗಬೇಡಿ. ನಿಂತು ನನ್ನನ್ನು ಹೆದರಿಸಿ ಎಂದು ಓವೈಸಿ ಹೇಳಿದರು. ಕೆಲ ದಿನಗಳ ಹಿಂದೆ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ್ದು ರಾಜಕೀಯ ಕೋಲಾಹಲ ಸೃಷ್ಟಿಸಿತ್ತು. ಹೀಗಾಗಿ ಓವೈಸಿ ವಿರುದ್ಧ ಬಿಜೆಪಿ ನಾಯಕರು ಕಿಡಿ ಕಾರಿದ್ದರು.
ದೆಹಲಿಯ ಅಶೋಕ ರಸ್ತೆಯ ಬಳಿ ಇರುವ ಓವೈಸಿ ಮನೆ ಮೇಲೆ ಈ ಹಿಂದೆಯೂ ಹಲವು ಬಾರಿ ದಾಳಿ ನಡೆದಿದೆ. ಕಳೆದ ವರ್ಷವೂ ಆಗಸ್ಟ್ ತಿಂಗಳಿನಲ್ಲಿ ಅವರ ನಿವಾಸದ ಮೇಲೆ ಕಲ್ಲು ತೂರಾಟವಾಗಿದೆ. ಇದು ಬಿಜೆಪಿ ಆಡಳಿತದ ಅವಧಿಯಲ್ಲಿ ಹೆಚ್ಚಾಗಿ ಆಗುತ್ತಿದೆ. ಅವರಿಂದ ನಮಗೆ ರಕ್ಷಣೆ ಸಿಗುತ್ತಿಲ್ಲ ಎಂದು ಓವೈಸಿ ಕಿಡಿ ಕಾರಿದ್ದಾರೆ.












Click it and Unblock the Notifications