ಕೇರಳದಲ್ಲಿ ನಂದಿನಿ ಹಾಲು ಮಾರಾಟಕ್ಕೆ ಮಿಲ್ಮಾ ವಿರೋಧ: ಕಾರಣ ಇಲ್ಲಿದೆ
ಕೇರಳ ರಾಜ್ಯದಲ್ಲಿ ನಂದಿನಿ ಹಾಲು ಮಾರಾಟಕ್ಕೆ ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟ (ಮಿಲ್ಮಾ) ವಿರೋಧ ವ್ಯಕ್ತಪಡಿಸಿದೆ. ಕೇರಳದಲ್ಲಿ ಹಾಲಿನ ಉತ್ಪಾದನೆ ಕಡಿಮೆ ಇರುವ ಕಾರಣ ಕೆಎಂಎಫ್ ಕೇರಳದಲ್ಲಿ ನಂದಿನಿ ಹಾಲು ಮಾರಾಟ ಮಾಡುತ್ತಿದೆ.
ಕೇರಳದಲ್ಲಿ ನಂದಿನಿ ಹಾಳು ಮಾರಾಟ ಮಾಡುತ್ತಿರುವ ಬಗ್ಗೆ ಮಾತನಾಡಿರುವ ಮಿಲ್ಮಾ ಮಲಬಾರ್ ವಲಯ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಎಸ್.ಮಣಿ, ಭಾರತೀಯ ರಾಷ್ಟ್ರೀಯ ಸಹಕಾರಿ ಡೈರಿ ಫೆಡರೇಶನ್‌ನ ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.

ದೇಶದಲ್ಲಿರುವ ಹಾಲು ಒಕ್ಕೂಟಗಳು ತಾವು ಇಷ್ಟು ದಿನ ಅನುಸರಿಸಿಕೊಂಡು ಬಂದಿರುವ ನಿಯಮಗಳನ್ನು ಮುರಿಯುತ್ತಿರುವುದು ನೈತಿಕವಾಗಿ ಸರಿಯಲ್ಲ ಎಂದು ಮಣಿ ತಿಳಿಸಿದ್ದು, ಕೆಎಂಎಫ್ ಕೇರಳದಲ್ಲಿ ಮಳಿಗೆ ತೆರೆಯಲು ವಿರೋಧಿಸಿ ಪತ್ರ ನೀಡಿದ್ದರೂ ಅದನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ್ದಾರೆ.
"ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾದ ಅಮುಲ್-ನಂದಿನಿ ಸಮಸ್ಯೆಗೂ ಮುನ್ನವೇ ಕರ್ನಾಟಕ ಕಾರ್ಪೊರೇಟ್ ಹಾಲು ಉತ್ಪಾದಕರು ಕೇರಳದಲ್ಲಿ ವ್ಯಾಪಾರ ಮಾಡಲು ನಿರ್ಧರಿಸಿದ್ದರು. ಕರ್ನಾಟಕದಲ್ಲಿ ಉದ್ಯಮ ಆರಂಭಿಸುವ ಅಮುಲ್ ನಿರ್ಧಾರ ತಪ್ಪಾಗಿದೆ, ಆದರೆ ಅದನ್ನು ವಿರೋಧಿಸುವ ನೈತಿಕ ಹಕ್ಕು ನಂದಿನಿ ಅವರಿಗೆ ಇಲ್ಲ" ಎಂದು ಮಣಿ ಹೇಳಿದ್ದಾರೆ.
ನಂದಿನಿ ಹಾಲನ್ನು ಅವಲಂಬಿಸಿರುವ ಮಿಲ್ಮಾ!
"ಹಾಲು ಒಕ್ಕೂಟಗಳು ಕೇವಲ ವಾಣಿಜ್ಯ ಹಿತಾಸಕ್ತಿಗಳಿಗಾಗಿ ಮಾತ್ರವಲ್ಲದೆ ತಮ್ಮ ರಾಜ್ಯದ ಹೈನುಗಾರರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು. ಒಂದು ರಾಜ್ಯದ ಸಹಕಾರಿ ಸಂಸ್ಥೆಯು ಮತ್ತೊಂದು ರಾಜ್ಯದ ಸಹಕಾರಿ ಸಂಸ್ಥೆಯ ಮಾರುಕಟ್ಟೆಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವುದು ಸಹಕಾರದ ತತ್ವಗಳು ಮತ್ತು ಮೂಲಭೂತ ಮೌಲ್ಯಗಳಿಗೆ ವಿರುದ್ಧವಾಗಿದೆ" ಎಂದು ಹೇಳಿದರು.
"ಹಬ್ಬದ ಸಂದರ್ಭದಲ್ಲಿ ಮತ್ತು ಹಾಲಿನ ಉತ್ಪಾದನೆ ಕೊರತೆಯಿದ್ದಾಗ ಕೇರಳ ಕರ್ನಾಟಕದ ನಂದಿನಿ ಮತ್ತು ತಮಿಳುನಾಡಿನ ಆವಿನ್ ಹಾಲನ್ನು ಹೆಚ್ಚಾಗಿ ಅವಲಂಬಿಸಿದೆ. ಮಿಲ್ಮಾ ನಂದಿನಿ ಹಾಲನ್ನು ಖರೀದಿ ಮಾಡಿ, ತನ್ನ ಬ್ಯ್ರಾಂಡ್‌ನಲ್ಲಿ ಮಾರಾಟ ಮಾಡುತ್ತದೆ, ಮಿಲ್ಮಾ ನಂದಿನಿಯ ಪ್ರಮುಖ ಗ್ರಾಹಕರಾಗಿದ್ದು, ಅವರು ನೇರವಾಗಿ ಕೇರಳದಲ್ಲಿ ಹಾಲು ಮಾರಾಟ ಮಾಡಿ ತೊಂದರೆ ನೀಡುವುದು ಸರಿಯಲ್ಲ" ಎಂದು ಹೇಳಿದ್ದಾರೆ.
ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯಲಿ
ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡುವುದರಿಂದ ಕೇರಳದಲ್ಲಿ ಮಿಲ್ಮಾ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. ಕಳೆದ ಆರು ತಿಂಗಳ ಅಂಕಿ ಅಂಶಗಳ ಪ್ರಕಾರ, ನಮ್ಮ ಉತ್ಪನ್ನ ಮಾರಾಟದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ" ಎಂದು ಕೆಎಸ್ ಮಣಿ ಹೇಳಿದರು.
"ದೇಶದ ಹಾಲು ಒಕ್ಕೂಟಗಳ ಮೂಲ ಅಮುಲ್, ಇತರ ರಾಜ್ಯಗಳ ಒಕ್ಕೂಟಗಳು ಮತ್ತು ಹೈನುಗಾರರ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ವ್ಯವಹಾರ ನಡೆಸುವುದು ಸರಿಯಲ್ಲ. ಚರ್ಚೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಮಿಲ್ಮಾ ಪ್ರಯತ್ನಿಸುತ್ತಿದೆ ಮತ್ತು ಯಾವುದೇ ಕಾನೂನು ಹೋರಾಟಕ್ಕೆ ಯೋಜಿಸುತ್ತಿಲ್ಲ" ಎಂದು ಹೇಳಿದ್ದಾರೆ.
ಮಲಪ್ಪುರಂ ಜಿಲ್ಲೆಯ ಮಂಚೇರಿ ಮತ್ತು ತಿರೂರ್ ಮತ್ತು ಎರ್ನಾಕುಲಂ ಜಿಲ್ಲೆಯ ಕೊಚ್ಚಿ ಮತ್ತು ಪತ್ತನಂತಿಟ್ಟ ಜಿಲ್ಲೆಯ ಪಂದಳಂನಲ್ಲಿ ನಂದಿನಿ ತನ್ನ ಮಳಿಗೆಗಳನ್ನು ತೆರೆದು ನೇರವಾಗಿ ಮಾರಾಟ ಮಾಡುತ್ತಿದೆ. ಕೇರಳದ ಪ್ರಮುಖ ನಗರಗಳ ಸೂಪರ್ ಮಾರ್ಕೆಟ್ ಗಳಲ್ಲೂ ನಂದಿನಿ ಉತ್ಪನ್ನಗಳು ದೊರೆಯುತ್ತವೆ.












Click it and Unblock the Notifications