ಎಕ್ಸ್ಬಾಕ್ಸ್ ಉದ್ಯೋಗಿಗಳಿಗೆ ಶಾಕ್: 3,200 ಹುದ್ದೆ ಕಡಿತಗೊಳಿಸಿದ ಮೈಕ್ರೋಸಾಫ್ಟ್, ಸಿಇಒ ಆಶಾ ಶರ್ಮಾ ಹೇಳಿದ್ದೇನು?
ಮೈಕ್ರೋಸಾಫ್ಟ್ ಒಡೆತನದ ಪ್ರಸಿದ್ಧ ಗೇಮಿಂಗ್ ಸಂಸ್ಥೆ 'ಎಕ್ಸ್ಬಾಕ್ಸ್' ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಬದಲಾವಣೆಗೆ ಕೈಹಾಕಿದ್ದು, ಜಾಗತಿಕವಾಗಿ ಸುಮಾರು 3,200 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದೆ. ಇದು ಕಂಪನಿಯ ಒಟ್ಟು ಸಿಬ್ಬಂದಿ ವರ್ಗದ ಶೇಕಡಾ 20 ರಷ್ಟಾಗಿದ್ದು, ಉದ್ಯೋಗಿಗಳಿಗೆ ದೊಡ್ಡ ಆಘಾತ ನೀಡಿದೆ.
ಈ ಯೋಜನೆಯಡಿ, 1,600 ಉದ್ಯೋಗಿಗಳನ್ನು ತಕ್ಷಣವೇ ಜಾರಿಗೆ ಬರುವಂತೆ ವಜಾಗೊಳಿಸಲಾಗುತ್ತಿದ್ದು, ಇನ್ನುಳಿದ 1,600 ಜನರನ್ನು ಮುಂದಿನ ಆರ್ಥಿಕ ವರ್ಷದ ಅಂತ್ಯದೊಳಗೆ ಹಂತ ಹಂತವಾಗಿ ಕೆಲಸದಿಂದ ಮುಕ್ತಾಯಗೊಳಿಸಲಾಗುವುದು ಎಂದು ಕಂಪನಿ ಸ್ಪಷ್ಟಪಡಿಸಿದೆ.

ಎಕ್ಸ್ಬಾಕ್ಸ್ ಉದ್ಯೋಗ ಕಡಿತ: ನಿರ್ಧಾರಕ್ಕೆ ಕಾರಣವೇನು?
ಎಕ್ಸ್ಬಾಕ್ಸ್ ಸಿಇಒ ಆಶಾ ಶರ್ಮಾ ಅವರು ಉದ್ಯೋಗಿಗಳಿಗೆ ಕಳುಹಿಸಿರುವ ಇಮೇಲ್ ಸಂದೇಶದಲ್ಲಿ ಈ ನಿರ್ಧಾರದ ಹಿಂದಿನ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. "ಪ್ರಸ್ತುತ ನಮ್ಮ ವ್ಯವಹಾರ ಆರೋಗ್ಯಕರವಾಗಿಲ್ಲ. ಇತರ ಪ್ರತಿಸ್ಪರ್ಧಿ ಗೇಮಿಂಗ್ ಪ್ಲಾಟ್ಫಾರ್ಮ್ಗಳು ಮತ್ತು ಪಬ್ಲಿಷಿಂಗ್ ಕಂಪನಿಗಳಿಗೆ ಹೋಲಿಸಿದರೆ ನಮ್ಮ ಲಾಭಾಂಶವು 3 ರಿಂದ 10 ಪಟ್ಟು ಕಡಿಮೆಯಾಗಿದೆ. ಗೇಮ್ ಪಾಸ್, ವಿವಿಧ ಸ್ಟುಡಿಯೋಗಳ ಖರೀದಿ ಹಾಗೂ ಮಲ್ಟಿ-ಪ್ಲಾಟ್ಫಾರ್ಮ್ ಗೇಮಿಂಗ್ ಮೇಲೆ ನಾವು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿದ್ದೆವು. ಆದರೆ, ನಾವು ನಿರೀಕ್ಷಿಸಿದ ಮಟ್ಟದಲ್ಲಿ ಈ ಹೂಡಿಕೆಗಳು ಲಾಭ ತಂದುಕೊಡಲಿಲ್ಲ," ಎಂದು ಅವರು ವಿವರಿಸಿದ್ದಾರೆ.
ಅಲ್ಲದೆ, ಜಾಗತಿಕ ಗೇಮಿಂಗ್ ಉದ್ಯಮವು ಪ್ರಸ್ತುತ ಇತಿಹಾಸದಲ್ಲೇ ಅತಿ ದೊಡ್ಡ ಹಾರ್ಡ್ವೇರ್ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಿರಂತರವಾಗಿ ಕುಸಿಯುತ್ತಿರುವ ಈ ಮಾರುಕಟ್ಟೆಯಲ್ಲಿ ನಾವು ಸ್ಪರ್ಧೆಯಲ್ಲಿ ಉಳಿಯಲು ಎಕ್ಸ್ಬಾಕ್ಸ್ ವ್ಯವಹಾರವನ್ನು ಮರುಹೊಂದಿಸುವ ಅನಿವಾರ್ಯತೆ ಎದುರಾಗಿದೆ ಎಂದು ಅವರು ಹೇಳಿದ್ದಾರೆ.
ಸಿಇಒ ಆಶಾ ಶರ್ಮಾ ಸಂದೇಶ: "ಇದು ನೋವಿನ ಸಂಗತಿ"
ತಮ್ಮ ಉದ್ಯೋಗಿಗಳನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಆಶಾ ಶರ್ಮಾ, "ಇದೊಂದು ಅತ್ಯಂತ ನೋವಿನ ನಿರ್ಧಾರ ಎಂಬುದು ನನಗೆ ತಿಳಿದಿದೆ. ಎಕ್ಸ್ಬಾಕ್ಸ್ ಅನ್ನು ಕಟ್ಟಲು ತಮ್ಮ ಸೃಜನಶೀಲತೆಯನ್ನು ಧಾರೆ ಎರೆದವರ ಮೇಲೆಯೇ ಈ ಬದಲಾವಣೆಗಳು ನೇರ ಪರಿಣಾಮ ಬೀರಲಿವೆ. ಆದರೆ, ಇಂದಿನ ಈ ನಿರ್ಧಾರಗಳು ಖಂಡಿತವಾಗಿಯೂ ಅವರ ಪ್ರತಿಭೆ ಅಥವಾ ಸಮರ್ಪಣಾಭಾವವನ್ನು ಪ್ರಶ್ನಿಸುವುದಿಲ್ಲ," ಎಂದು ಹೇಳಿದ್ದಾರೆ.
ಈ ಪುನರ್ರಚನೆಯ ಭಾಗವಾಗಿ 4 ಗೇಮ್ ಡೆವಲಪ್ಮೆಂಟ್ ಸ್ಟುಡಿಯೋಗಳು ಎಕ್ಸ್ಬಾಕ್ಸ್ನಿಂದ ಬೇರ್ಪಟ್ಟು ಹೊಸ ಆಡಳಿತದಡಿ ಕೆಲಸ ಮಾಡಲಿವೆ. ಆದರೆ, ಈ ಹಿಂದೆ ಘೋಷಿಸಲಾದ ಯಾವುದೇ ಪ್ರಮುಖ ಎಕ್ಸ್ಬಾಕ್ಸ್ ಗೇಮ್ಗಳು ಅಥವಾ ಯೋಜನೆಗಳನ್ನು ರದ್ದುಗೊಳಿಸುತ್ತಿಲ್ಲ ಎಂದು ಕಂಪನಿ ಭರವಸೆ ನೀಡಿದೆ. ಆದಾಗ್ಯೂ, ಈ ಉದ್ಯೋಗ ಕಡಿತದ ನೇರ ಪ್ರಭಾವವು ಪ್ರಸಿದ್ಧ ಗೇಮಿಂಗ್ ತಂಡಗಳಾದ ಆಕ್ಟಿವಿಸನ್, ಬೆಥೆಸ್ಡಾ, ಬ್ಲಿಝಾರ್ಡ್ ಮತ್ತು ಎಕ್ಸ್ಬಾಕ್ಸ್ ಗೇಮ್ ಸ್ಟುಡಿಯೋಗಳ ಮೇಲೆ ಬೀರಲಿದೆ.
ಆಡಳಿತಾತ್ಮಕ ಬದಲಾವಣೆ ಮತ್ತು ಹೊಸ ಸಿಒಒ ನೇಮಕ
ಕೇವಲ ಉದ್ಯೋಗ ಕಡಿತ ಮಾತ್ರವಲ್ಲದೆ, ಆಡಳಿತ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದೆ. ಪ್ರಸ್ತುತ ಎಕ್ಸ್ಬಾಕ್ಸ್ನಲ್ಲಿರುವ 14 ಹಂತಗಳ ಮ್ಯಾನೇಜ್ಮೆಂಟ್ ಲೇಯರ್ಗಳನ್ನು ಗರಿಷ್ಠ 5ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಆಂತರಿಕ ಕಾರ್ಯವೈಖರಿಯನ್ನು ಸರಳಗೊಳಿಸುವುದು ಮತ್ತು ವೆಂಡರ್ ಖರ್ಚುಗಳನ್ನು ಶೇ.50ರಷ್ಟು ಕಡಿತಗೊಳಿಸುವುದು ಕಂಪನಿಯ ಪ್ರಮುಖ ಉದ್ದೇಶವಾಗಿದೆ.
This is an important email I sent today to all employees at XBOX:
— ASHA (@asha_shar) July 6, 2026
Team,
We are beginning the most significant restructure in XBOX history. After careful consideration, I've made the difficult decision to reduce our team by approximately 3,200 throughout FY27. This will include…
ಇದೇ ವೇಳೆ, ಹೆಲೆನ್ ಚಿಯಾಂಗ್ ಅವರನ್ನು ಎಕ್ಸ್ಬಾಕ್ಸ್ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಬಡ್ತಿ ನೀಡಲಾಗಿದೆ. ಇವರು ಇನ್ನುಮುಂದೆ ಕಂಟೆಂಟ್, ಹಾರ್ಡ್ವೇರ್, ಪ್ಲಾಟ್ಫಾರ್ಮ್ ಮತ್ತು ಸೇವೆಗಳ ಉಸ್ತುವಾರಿಯನ್ನು ಏಕೀಕೃತ ಮಾದರಿಯಲ್ಲಿ ನೋಡಿಕೊಳ್ಳಲಿದ್ದಾರೆ.
ಮೈಕ್ರೋಸಾಫ್ಟ್ ಸಂಸ್ಥೆಯು ಎಐ ಕ್ಷೇತ್ರದ ಮೇಲೆ ತನ್ನ ಹೂಡಿಕೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುತ್ತಿದ್ದು, ಇದರ ಪರಿಣಾಮವಾಗಿ ಒಟ್ಟಾರೆ 4,800 ಉದ್ಯೋಗಗಳನ್ನು ಕಡಿತಗೊಳಿಸುತ್ತಿದೆ. "ಈ ಕಠಿಣ ಬದಲಾವಣೆಗಳು ಮುಂದಿನ ದಶಕದ ಗೇಮಿಂಗ್ ಜಗತ್ತಿನಲ್ಲಿ ಎಕ್ಸ್ಬಾಕ್ಸ್ನ ಉಜ್ವಲ ಭವಿಷ್ಯಕ್ಕಾಗಿ ಮಾಡಲಾಗುತ್ತಿರುವುದೇ ಹೊರತು, ಅದನ್ನು ಕುಗ್ಗಿಸುವ ಉದ್ದೇಶದಿಂದಲ್ಲ," ಎಂದು ಆಶಾ ಶರ್ಮಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications