ಇನ್ಮುಂದೆ ರಾತ್ರಿ ವೇಳೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಬಳಸುವಂತಿಲ್ಲ! Meta ಹೊಸ ನಿಯಮ, ಕಾರಣವೇನು?
ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮತ್ತು ಹದಿಹರೆಯದವರು ಸೋಷಿಯಲ್ ಮೀಡಿಯಾಕ್ಕೆ ಅತಿಯಾಗಿ ಅಂಟಿಕೊಂಡಿದ್ದಾರೆ. ಅದರಲ್ಲೂ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಗೀಳು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ಆರೋಪಗಳು ಬಹಳ ಹಿಂದಿನಿಂದಲೂ ಕೇಳಿಬರುತ್ತಿವೆ.
ಓದು, ಆಟಗಳಿಗಿಂತ ಮೊಬೈಲ್ ಸ್ಕ್ರೀನ್‌ಗಳೇ ಮಕ್ಕಳ ಪ್ರಪಂಚವಾಗಿದೆ ಬಿಟ್ಟಿದೆ. ಇದೀಗ ಈ ಗಂಭೀರ ಸಮಸ್ಯೆಗೆ ಕಡಿವಾಣ ಹಾಕಲು ಮಾರ್ಕ್ ಜುಕರ್‌ಬರ್ಗ್ ಒಡೆತನದ ಮೆಟಾಸಂಸ್ಥೆ ಮುಂದಾಗಿದೆ. ಶೀಘ್ರದಲ್ಲೇ ಮೆಟಾ ಹೊಸ ನಿಯಮ ಜಾರಿಗೆ ತರಲಿದ್ದು, ಇದರಿಂದ ಹದಿಹರೆಯದ ಬಳಕೆದಾರರ ಸೋಷಿಯಲ್ ಮೀಡಿಯಾ ಬಳಕೆಯ ಮೇಲೆ ಭಾರಿ ನಿರ್ಬಂಧ ಬೀಳಲಿದೆ.

ಮೆಟಾ ಸಂಸ್ಥೆಯು ತನ್ನ ಅತ್ಯಂತ ಜನಪ್ರಿಯ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆಯಲ್ಲಿ ಮಹತ್ತರ ಬದಲಾವಣೆ ತರಲು ಸಜ್ಜಾಗಿದೆ. ಈ ಹೊಸ ಬದಲಾವಣೆಯ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರು ದಿನಕ್ಕೆ ಕೇವಲ 2 ಗಂಟೆಗಳ ಕಾಲ ಮಾತ್ರ ಈ ಆ್ಯಪ್‌ಗಳನ್ನ ಬಳಸಲು ಸಾಧ್ಯವಾಗುವಂತೆ ಸಮಯದ ಮಿತಿ ವಿಧಿಸಲು ನಿರ್ಧರಿಸಲಾಗಿದೆ.
ಅಷ್ಟೇ ಅಲ್ಲದೆ, ರಾತ್ರಿ ವೇಳೆ ಮಕ್ಕಳು ಈ ಆ್ಯಪ್‌ಗಳನ್ನ ಬಳಸದಂತೆ ಸಂಪೂರ್ಣವಾಗಿ ಶಟ್‌ಡೌನ್ ಮಾಡುವ ತಂತ್ರಜ್ಞಾನವನ್ನ ಅಳವಡಿಸಲು ಮೆಟಾ ಸಿದ್ಧತೆ ನಡೆಸಿದೆ. ಈ ನಿಯಮವು ಕೇವಲ ಹದಿಹರೆಯದವರ ಅಕೌಂಟ್‌ಗಳಿಗೆ ಮಾತ್ರ ಅನ್ವಯವಾಗಲಿದ್ದು, ಮಕ್ಕಳು ತಡರಾತ್ರಿಯವರೆಗೆ ಮೊಬೈಲ್ ಸ್ಕ್ರೀನ್ ನೋಡುವುದನ್ನು ಹಾಗೂ ನಿದ್ದೆಗೆಡುವುದನ್ನು ತಪ್ಪಿಸುವ ಉದ್ದೇಶ ಹೊಂದಿದೆ. ಯಾವಾಗ ಈ ನಿಯಮ ಅಧಿಕೃತವಾಗಿ ಜಾರಿಗೆ ಬರಲಿದೆ ಎಂಬ ನಿಖರ ದಿನಾಂಕವನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ.
ಕ್ಯಾಲಿಫೋರ್ನಿಯಾ ನ್ಯಾಯಾಲಯದಿಂದ 1.15 ಲಕ್ಷ ಕೋಟಿ ರೂ. ದಂಡ
ಆದ್ರೆ ಈ ನಿರ್ಧಾರವನ್ನ ಮೆಟಾ ಸಂಸ್ಥೆಯು ಸ್ವಯಂಪ್ರೇರಿತವಾಗಿ ತೆಗೆದುಕೊಂಡಿಲ್ಲ. ಬದಲಿಗೆ, ಅಮೆರಿಕದ ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ಮೆಟಾ ವಿರುದ್ಧ ದಾಖಲಾಗಿದ್ದ ಬರೋಬ್ಬರಿ 28 ಪ್ರಕರಣಗಳ ವಿಚಾರಣೆಯ ಬಳಿಕ ಈ ಅನಿವಾರ್ಯ ಬೆಳವಣಿಗೆ ನಡೆದಿದೆ. ಕಂಪನಿಯು ತನ್ನ ಆ್ಯಪ್‌ಗಳಲ್ಲಿರುವ ಕೆಲವು ಫೀಚರ್‌ಗಳ ಮೂಲಕ ಉದ್ದೇಶಪೂರ್ವಕವಾಗಿಯೇ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಚಟವನ್ನು ಅಂಟಿಸುತ್ತಿದೆ ಮತ್ತು ಇದರಿಂದ ಮಕ್ಕಳ ಮೇಲೆ ಭಾರೀ ನಕಾರಾತ್ಮಕ ಪ್ರಭಾವ ಬೀರಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.
ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ರೋಬ್ ಬೊಂಟಾ ಅವರ ಕಚೇರಿಯ ಮಾಹಿತಿಯ ಪ್ರಕಾರ, ಈ ಪ್ರಕರಣವನ್ನು ಇತ್ಯರ್ಥಪಡಿಸಲು ಮೆಟಾ ಸಂಸ್ಥೆಯು ನ್ಯಾಯಾಲಯಕ್ಕೆ ಒಪ್ಪಂದದ ಪತ್ರವೊಂದನ್ನ ಸಲ್ಲಿಸಿದೆ. ಇದರ ಅನ್ವಯ, ಮೆಟಾ ಸಂಸ್ಥೆಯು ಬರೋಬ್ಬರಿ 14 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ ಅಂದಾಜು 1.15 ಲಕ್ಷ ಕೋಟಿ ರೂಪಾಯಿ ದಂಡವನ್ನು ಪಾವತಿಸಲು ಒಪ್ಪಿಕೊಂಡಿದೆ. ಜೊತೆಗೆ, ಮಕ್ಕಳ ಸುರಕ್ಷತೆಗಾಗಿ ನ್ಯಾಯಾಲಯ ಸೂಚಿಸಿರುವ ಕಟ್ಟುನಿಟ್ಟಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಒಪ್ಪಿಗೆ ನೀಡಿದೆ.
ಮಕ್ಕಳ ಸುರಕ್ಷತೆ ಕುರಿತು ಭಾರತ ಸರ್ಕಾರದ ಖಡಕ್ ಎಚ್ಚರಿಕೆ
ಕೇವಲ ಅಮೆರಿಕದಲ್ಲಿ ಮಾತ್ರವಲ್ಲ, ಭಾರತದಲ್ಲಿಯೂ ಮೆಟಾ ಸಂಸ್ಥೆಯು ಕಠಿಣ ನಿಯಮಗಳನ್ನ ಎದುರಿಸುತ್ತಿದೆ. ಇತ್ತೀಚೆಗಷ್ಟೇ ಭಾರತ ಸರ್ಕಾರವು ಸೋಷಿಯಲ್ ಮೀಡಿಯಾದಲ್ಲಿ ಮಕ್ಕಳ ಸುರಕ್ಷತೆಯ ವಿಚಾರವಾಗಿ ತೀವ್ರ ಕಳವಳ ವ್ಯಕ್ತಪಡಿಸಿತ್ತು. ವಿಶೇಷವಾಗಿ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಕಂಟೆಂಟ್‌ಗಳ ಪ್ರಸಾರದ ಬಗ್ಗೆ ಕೇಂದ್ರ ಸರ್ಕಾರ ಮೆಟಾಗೆ ಖಡಕ್ ಸಂದೇಶ ರವಾನಿಸಿತ್ತು.
ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದ ಬೆನ್ನಲ್ಲೇ, ಮೆಟಾ ಕೂಡ ಎಚ್ಚೆತ್ತುಕೊಂಡಿದೆ. ಇದೀಗ ಭಾರತದಲ್ಲಿಯೂ ಕಾನೂನುಬಾಹಿರ ಕಂಟೆಂಟ್‌ಗಳನ್ನ ಫಿಲ್ಟರ್ ಮಾಡಲು ಮತ್ತು ಪ್ಲಾಟ್‌ಫಾರ್ಮ್‌ನಿಂದ ತಕ್ಷಣವೇ ತೆಗೆದುಹಾಕಲು ಕಂಪನಿಯು ತ್ವರಿತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಮೆಟಾ ತನ್ನ ಪ್ಲಾಟ್‌ಫಾರ್ಮ್‌ಗಳನ್ನ ಮಕ್ಕಳ ಬಳಕೆಗೆ ಹೆಚ್ಚು ಸುರಕ್ಷಿತವಾಗಿಸಲು ಇಂತಹ ಹಲವು ಕಠಿಣ ಹೆಜ್ಜೆಗಳನ್ನು ಇಡುವುದು ಅನಿವಾರ್ಯ.


Click it and Unblock the Notifications
