ರಾಜಕೀಯ ಧ್ರುವೀಕರಣಕ್ಕೆ ಗೌಡ್ರು ಹಿಂದೇಟು ಹಾಕಿದ್ದು ಯಾಕೆ?

By: ಬಾಲರಾಜ್ ತಂತ್ರಿ
Subscribe to Oneindia Kannada

ಸಮಯಾಧಾರಿತ ರಾಜಕಾರಣ ಮಾಡುವುದರಲ್ಲಿ ತನ್ನನ್ನು ಬಿಟ್ಟರೆ ಇನ್ನೊಬ್ಬರಿಲ್ಲ ಎನ್ನುವುದನ್ನು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ್ರು ಅದೆಷ್ಟೋ ಬಾರಿ ರುಜುವಾತು ಪಡಿಸಿದ್ದಾಗಿದೆ.

ಬಿಬಿಎಂಪಿ ಚುನಾವಣೆಯಲ್ಲಿ ಬಹುತೇಕ ತೆರೆಮೆರೆಗೆ ಸರಿದಿದ್ದ ಜೆಡಿಎಸ್, ಧೂಳಿಂದ ಮೇಲೆದ್ದು ಕಿಂಗ್ ಮೇಕರ್ ಆಗಲು ಗೌಡ್ರ ಮಾಸ್ಟರ್ ಮೈಂಡ್, ಇವರ ವೃತ್ತಿಪರ ರಾಜಕಾರಣಕ್ಕೆ ಕೊಡಬಹುದಾದ ಲೇಟೆಸ್ಟ್ ಉದಾಹರಣೆ. (ಪ್ರಧಾನಿ ಮೋದಿ ಭೇಟಿಯಾದ ದೇವೇಗೌಡ)

ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದರೂ, ಯಡಿಯೂರಪ್ಪ ರಾಜಕೀಯದಲ್ಲಿ ಇದೆಲ್ಲಾ ಮಾಮೂಲು ಎಂದು ಹೇಳಿ, ಗೌಡ್ರ ಮುಂದೆ ರಾಜಕೀಯ ಮಾಡೋಕೆ ಆಗುತ್ತಾ ಎನ್ನುವ ಹೇಳಿಕೆಯನ್ನು ನೀಡಿದ್ದನ್ನು ಇಲ್ಲಿ ಮತ್ತೆ ನೆನೆಪಸಿಕೊಳ್ಳಬಹುದು.

ಕಳೆದ ವರ್ಷದ ಮಧ್ಯದಲ್ಲಿ ಜನತಾ ಪರಿವಾರವನ್ನು atleast ಫೋಟೋ ಸೆಷನಿಗಾದರೂ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದ ದೇವೇಗೌಡ್ರು, ಇಂದು ಜನತಾ ಪರಿವಾರವನ್ನು ಒಗ್ಗೂಡಿಸಲು ಸಾಧ್ಯವೇ ಇಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ದೇಶದ ರಾಜಕಾರಣದಲ್ಲಿ ಪ್ರಮುಖವಾಗಿ ಎನ್ಡಿಎ ಮತ್ತು ಯುಪಿಎ ಮೈತ್ರಿಕೂಟಕ್ಕೆ ಪ್ರಭಲ ಸವಾಲು ಒಡ್ಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಜನತಾ ಪರಿವಾರದ ವಿಲೀನ ಪ್ರಕ್ರಿಯೆ ಶೈಶಾವಸ್ಥೆಯಿಂದ ಮೇಲೇಳಲೇ ಇಲ್ಲ. (ವಿರುದ್ದ ದಿಕ್ಕಿನಲ್ಲಿ ಸಾಗುತ್ತಿದ್ದಾರೆಯೇ ಗೌಡ, ಎಚ್ಡಿಕೆ)

ಇದಕ್ಕೆ ಪೂರಕ ಎನ್ನುವಂತೆ ಪರಿವಾರ ವಿಲೀನ 'ಮುಗಿದ ಅಧ್ಯಾಯ' ಎಂದು ಜೆಡಿಎಸ್ ವರಿಷ್ಠ ಗೌಡ್ರು ಹೇಳಿಕೆ ನೀಡುವ ಮೂಲಕ ಈ ರಾಜಕೀಯ ಸಾಹಸದಿಂದ ಹಿಂದಕ್ಕೆ ಸರಿದಿದ್ದಾರೆ. ಮುಂದೆ ಓದಿ..

ಜನತಾ ಪರಿವಾರ ಒಗ್ಗೂಡುವ ವಿಚಾರ ಮುಗಿದ ಅಧ್ಯಾಯ

ಜನತಾ ಪರಿವಾರ ಒಗ್ಗೂಡುವ ವಿಚಾರ ಮುಗಿದ ಅಧ್ಯಾಯ

ರಾಷ್ಟ್ರ ಮಟ್ಟದಲ್ಲಿ ಜನತಾ ಪರಿವಾರ ಒಗ್ಗೂಡುವ ವಿಚಾರ ಮುಗಿದ ಅಧ್ಯಾಯ ಎಂದು ಗೌಡ್ರು ಕಲಬುರಗಿಯಲ್ಲಿ ಹೇಳಿದ್ದಾರೆ. ಜೆಡಿಎಸ್ ಪಕ್ಷದ ಜೊತೆಗೆ ಸಂಬಂಧ ಕಡಿದುಕೊಂಡವರು ಇಂದು ಜನತಾ ಪರಿವಾರ ಒಗ್ಗೂಡಿಸಲು ಪ್ರಯತ್ನಿಸುತ್ತಿರುವುದರಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜನತಾ ಪರಿವಾರ ವಿಲೀನ ಅಸಾಧ್ಯ ಎನ್ನುವ ಮಾತನ್ನು ದೇವೇಗೌಡ್ರು ಆಡಿದ್ದಾರೆ.

ಪರಿವಾರ ವಿಲೀನಕ್ಕೆ ಮುಂದಾಗಿದ್ದೇ ಗೌಡ್ರು

ಪರಿವಾರ ವಿಲೀನಕ್ಕೆ ಮುಂದಾಗಿದ್ದೇ ಗೌಡ್ರು

ಕೇಂದ್ರದಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದ ನಂತರ ಯುಪಿಎ ಮತ್ತು ಎನ್ಡಿಎ ಮೈತ್ರಿಕೂಟಕ್ಕೆ ಪರ್ಯಾಯ ಶಕ್ತಿಯನ್ನು ಬೆಳೆಸಲು ಮುಂದಾಗಿದ್ದೇ ಗೌಡ್ರು. ಉತ್ತರ, ದಕ್ಷಿಣ ಮುಖದಂತಿದ್ದ ಮುಲಾಯಂ ಮತ್ತು ಲಾಲೂ ಪ್ರಸಾದ್ ಯಾದವ್ ಅವರನ್ನು ಮನವೊಲಿಸುವಲ್ಲೂ ಗೌಡ್ರು ಯಶಸ್ವಿಯಾಗಿದ್ದರು.

ಆರು ಪಕ್ಷಗಳು ವಿಲೀನ

ಆರು ಪಕ್ಷಗಳು ವಿಲೀನ

ಮುಲಾಯಂ ಅವರ ಎಸ್ಪಿ, ನಿತೀಶ್ ಕುಮಾರ್ ಅವರ ಜೆಡಿಯು, ಗೌಡ್ರ ಜೆಡಿಎಸ್, ಲಾಲೂ ಪ್ರಸಾದ್ ಅವರ ಆರ್ಜೆಡಿ, ರಾಷ್ಟ್ರೀಯ ಲೋಕದಳ ಸೇರಿದಂತೆ ಆರು ಪಕ್ಷಗಳು ವಿಲೀನಗೊಳ್ಳುವ ಬಗ್ಗೆ ಅಧಿಕೃತ ಘೋಷಣೆ ಪ್ರಕಟವಾಗಿತ್ತು. ಪಕ್ಷದ ಚಿಹ್ನೆ, ಧ್ವಜ, ಹೆಸರು ಅಂತಿಮಗೊಳಿಸುವ ಜವಾಬ್ದಾರಿಯನ್ನು ಶರದ್ ಯಾದವ್ ಹೆಗಲಿಗೆ ವಹಿಸಲಾಗಿತ್ತು.

ಪ್ರಾದೇಶಿಕ ಪಕ್ಷಗಳ ಕಾರುಬಾರು

ಪ್ರಾದೇಶಿಕ ಪಕ್ಷಗಳ ಕಾರುಬಾರು

ಪ್ರಮುಖ ಪ್ರಾದೇಶಿಕ ಪಕ್ಷಗಳ ಈ ಏಕತೆಯ ಮಂತ್ರದಿಂದ ಬಿಹಾರ, ಉತ್ತರಪ್ರದೇಶ ಮತ್ತು ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ವ್ಯಾಖ್ಯಾನಿಸಲಾಗಿತ್ತು. ಏಪ್ರಿಲ್ 2015ರಲ್ಲಿ ಶುರುವಾದ ಜನತಾ ಪರಿವಾರದ ವಿಲೀನ ಮಂತ್ರ ಸೆಪ್ಟಂಬರ್ ಬರುತ್ತಲೇ ಸಡಿಲುಗೊಳ್ಳಲಾರಂಭಿಸಿತ್ತು.

ಪರಿವಾರದಿಂದ ಹೊರಕ್ಕೆ ನಡೆದ ಮುಲಾಯಂ

ಪರಿವಾರದಿಂದ ಹೊರಕ್ಕೆ ನಡೆದ ಮುಲಾಯಂ

ಬಿಹಾರ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನದಲ್ಲಿ ಸ್ಪರ್ಧಿಸಲು ಅವಕಾಶ ಸಿಗಲಿಲ್ಲ ಎನ್ನುವ ನೆಪವೊಡ್ಡಿ ಸಮಾಜವಾದಿ ಪಕ್ಷ ಜನತಾ ಪರಿವಾರದಿಂದ ಹೊರಕ್ಕೆ ನಡೆಯುವ ಮೂಲಕ ದೇವೇಗೌಡ್ರ ಕನಸಿನ ವಿಲೀನಕ್ಕೆ ಭಾರೀ ಪೆಟ್ಟು ಬಿತ್ತು.

ಬಿಹಾರ ಚುನಾವಣೆ

ಬಿಹಾರ ಚುನಾವಣೆ

ಬಿಹಾರ ಚುನಾವಣೆಯಲ್ಲಿ ಜೆಡಿಯು-ಆರ್ಜೆಡಿ ಮೈತ್ರಿಕೂಟ ಕಾಂಗ್ರೆಸ್ ಜೊತೆ ಹೊಂದಾಣಿಕೆ ನಡೆಸಿದ ಸಂದರ್ಭದಲ್ಲೂ, ನಿತೀಶ್ ಕುಮಾರ್ ಆಗಲಿ ಅಥವಾ ಲಾಲೂ ಪ್ರಸಾದ್ ಯಾದವ್ ಆಗಲಿ ದೇವೇಗೌಡ್ರ ರಾಜಕೀಯ ಅನುಭವದ ಪಾಠವನ್ನು ಕೇಳದೇ ಇದ್ದದ್ದು ಗೌಡ್ರು, ಜನತಾ ಪರಿವಾರ ಒಗ್ಗೂಡುವಿಕೆಯ ವಿಚಾರದಲ್ಲಿ ಹಿಂದಕ್ಕೆ ಸರಿಯಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಬಿಹಾರ ಚುನಾವಣೆ ಫಲಿತಾಂಶ

ಬಿಹಾರ ಚುನಾವಣೆ ಫಲಿತಾಂಶ

ಬಿಹಾರ ಚುನಾವಣೆಯಲ್ಲಿ ಮಹಾಮೈತ್ರಿಕೂಟಕ್ಕೆ ಅಭೂತಪೂರ್ವ ಜಯ ಸಿಕ್ಕ ನಂತರ ಪ್ರಮುಖವಾಗಿ ಜೆಡಿಯು ಮತ್ತು ಆರ್ಜೆಡಿಯಿಂದ ಪರಿವಾರ ವಿಲೀನ ಪ್ರಕ್ರಿಯಿಗೆ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ. ಜೊತೆಗೆ, ಗೌಡ್ರು, ಮೋದಿಯವರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆನ್ನುವ ಗುಮಾನಿಯೂ ಈ ಇಬ್ಬರು ಪ್ರಮುಖ ನಾಯಕರಲ್ಲಿ ಕಾಡುತ್ತಿದೆ ಎನ್ನುವ ಮಾತಿತ್ತು.

ಮೋದಿಯನ್ನು ಗೌರವಿಸುವ ಗೌಡ್ರು

ಮೋದಿಯನ್ನು ಗೌರವಿಸುವ ಗೌಡ್ರು

ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದ ನಂತರ, ವಿರೋಧ ಪಕ್ಷವಾಗಿ ಎಷ್ಟು ಬೇಕು, ಅಷ್ಟು ಮಾತ್ರ ಮೋದಿ ವಿರುದ್ದ ಹೇಳಿಕೆ ನೀಡುವ ಗೌಡ್ರು, ಪ್ರಧಾನಿ ಕಾರ್ಯವೈಖರಿಯನ್ನು ಹೊಗಳಿದ ಉದಾಹರಣೆಗಳೇ ಹೆಚ್ಚು. ಅದು ಲಾಹೋರ್ ವಿಚಾರದಲ್ಲಾಗಲಿ.. ಅಸಹಿಷ್ಣುತೆ ವಿಚಾರದಲ್ಲಾಗಲಿ.. ಮೋದಿ ಬಗ್ಗೆ ನನಗೆ ಗೌರವವಿದೆ ಎಂದು ಇತ್ತೀಚೆಗೆ ಸಂದರ್ಶನದಲ್ಲೂ ಗೌಡ್ರು ಹೇಳಿದ್ದರು. ಒಟ್ಟಿನಲ್ಲಿ ದೇಶದ ರಾಜಕಾರಣದಲ್ಲಿ ಧ್ರುವೀಕರಣ ನಡೆಯಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಜನತಾ ಪರಿವಾರದ ವಿಲೀನ ಸದ್ಯದ ಮಟ್ಟಿಗೆ ಠುಸ್ ಆಗಿದೆ. ಮುಂದೇನಾಗುತ್ತೋ, ಗೌಡ್ರ ರಾಜಕೀಯ ದಾಳ ಅರಿತವರಾರು?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Merger of Janata Parivar has suffered a setback, as former PM H D Deve Gowda said it is closed chapter. JDS supremo Gowda said, the efforts to unite various Janata Parivar parties in one roof is a closed chapter in national level and in state level too.
Please Wait while comments are loading...