Meghalaya election results 2023; ಎನ್‌ಪಿಪಿ, ಟಿಎಂಸಿ ಮುನ್ನಡೆ
ಮೇಘಾಲಯ ವಿಧಾನಸಭೆ ಚುನಾವಣೆ 2023ರ ಮತ ಎಣಿಕೆ ಆರಂಭವಾಗಿದೆ. ಎನ್‌ಪಿಪಿ ಮತ್ತು ಟಿಎಂಸಿ ಪಕ್ಷಗಳು ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿವೆ.
ಶಿಲ್ಲಾಂಗ್, ಮಾರ್ಚ್ 02; ಮೇಘಾಲಯ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. 60 ಸದಸ್ಯ ಬಲದ ವಿಧಾನಸಭೆಯ ಪೈಕಿ 59 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಬುಡಕಟ್ಟು ಮತ್ತು ಕ್ರೈಸ್ತ ಸಮುದಾಯದ ಪ್ರಾಬಲ್ಯವಿರುವ ಚಿಕ್ಕ ರಾಜ್ಯವಾದ ಮೇಘಾಲಯದಲ್ಲಿ ಕಳೆದ ಬಾರಿ ಕಾಂಗ್ರೆಸ್ ಆಡಳಿತ ಕೊನೆಗೊಂಡಿತ್ತು. ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಕಾನ್ರಾಡ್ ಸಂಗ್ಮಾ ಮುಖ್ಯಮಂತ್ರಿಯಾಗಿದ್ದರು.

ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಎನ್‌ಪಿಪಿ, ಟಿಎಂಸಿ, ಬಿಜೆಪಿ, ಕಾಂಗ್ರೆಸ್, ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷ ಚುನಾವಣಾ ಕಣದಲ್ಲಿವೆ. ಮತ ಎಣಿಕೆಯಲ್ಲಿ ಎನ್‌ಪಿಪಿ ಮತ್ತು ಟಿಎಂಸಿ ಸದ್ಯ ಮುನ್ನಡೆ ಕಾಯ್ದುಕೊಂಡಿವೆ. ಮುಕುಲ್ ಸಂಗ್ಮಾ ನೇತೃತ್ವದಲ್ಲಿ 11 ಶಾಸಕರು ಟಿಎಂಸಿಗೆ ವಲಸೆ ಹೋಗಿದ್ದು, ಟಿಎಂಸಿ ಬಲವನ್ನು ಹೆಚ್ಚಿಸಿದೆ ಎಂಬುದನ್ನು ತೋರಿಸುತ್ತಿದೆ.
ಗುರುವಾರ ಬೆಳಗ್ಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಸದ್ಯದ ಮಾಹಿತಿ ಪ್ರಕಾರ ಎನ್‌ಪಿಪಿ 15, ಟಿಎಂಸಿ 16, ಬಿಜೆಪಿ 5, ಕಾಂಗ್ರೆಸ್ 7, ಇತರರು 16 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಚುನಾವಣೆಯ ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ. ಮೇಘಾಲಯ ರಾಜ್ಯದಲ್ಲಿ 60 ವಿಧಾನಸಭಾ ಕ್ಷೇತ್ರಗಳಿವೆ. ಆದರೆ ಶಿಲ್ಲಾಂಗ್ ವಿಧಾನಸಭಾ ಕ್ಷೇತ್ರದ ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಎಚ್. ಡಿ. ಆರ್. ಲಿಂಗ್ಡೊ ಮೃತಪಟ್ಟ ಕಾರಣ ಆ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ. ಆದ್ದರಿಂದ 59 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ.

ರಾಜ್ಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿಗೆ ಟಿಎಂಸಿ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ. ಮುಕುಲ್ ಸಂಗ್ಮಾ ನೇತೃತ್ವದಲ್ಲಿ ಕಳೆದ ವರ್ಷ ಕಾಂಗ್ರೆಸ್ ಬಿಟ್ಟು ಟಿಎಂಸಿ ಸೇರಿದ್ದರು. ಈ ಕಾರಣದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಕುಸಿದು, ಟಿಎಂಸಿ ಪ್ರಾಬಲ್ಯ ಹೆಚ್ಚಳವಾಗಿದೆ. ಕಾಂಗ್ರೆಸ್ 8 ಮತ್ತು ಬಿಜೆಪಿ 6 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದು, ಎರಡೂ ಪಕ್ಷಗಳು ಎರಡಂಕಿ ದಾಟಲಿವೆಯೇ? ಎಂದು ಕಾದು ನೋಡಬೇಕಿದೆ.
ಪಕ್ಷಗಳ ನಡುವೆ ಅಸಮಾಧಾನ; ಕಳೆದ ಬಾರಿಯ ಚುನಾವಣೆಯಲ್ಲಿ ಒಂದಾಗಿ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ಮೈತ್ರಿಕೂಟ ರಚನೆ ಮಾಡಿಕೊಂಡಿದ್ದ ಪಕ್ಷಗಳ ನಡುವೆ ಈ ಬಾರಿ ಅಸಮಾಧಾನವಿದೆ. ಎನ್‌ಪಿಪಿ ಕಳೆದ ಬಾರಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 2018ರ ತನಕ ರಾಜ್ಯದಲ್ಲಿದ್ದ ಕಾಂಗ್ರೆಸ್ ಪ್ರಾಬಲ್ಯವನ್ನು ಮುರಿದು ಅಧಿಕಾರವನ್ನು ಹಿಡಿದಿತ್ತು.
ಎನ್‌ಪಿಪಿ ನೇತೃತ್ವದ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ಸರ್ಕಾರಕ್ಕೆ ಬೆಂಬಲ ನೀಡಿದ್ದ ಯುಡಿಎಫ್, ಪಿಡಿಎಫ್, ಎಚ್‌ಎಸ್‌ಪಿಡಿಪಿ, ಬಿಜೆಪಿ, ಪಕ್ಷೇತರರು ಈ ಬಾರಿ ಸ್ವತಂತ್ರವಾಗಿ ಕಣಕ್ಕಿಳಿಸಿದ್ದಾರೆ. ಐದು ವರ್ಷಗಳ ಕಾಲ ಒಟ್ಟಾಗಿ ಆಡಳಿತ ನಡೆಸಿದರೂ ಸಹ ಈ ಬಾರಿ ಎಲ್ಲರೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications