ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ; ಉತ್ತಮ ಬದಲಾವಣೆ ಎಂದ ಪ್ರಧಾನಿ ಮೋದಿ
ನವದೆಹಲಿ, ಅ. 17: ಹಿಂದಿ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸುವ ಕಾರ್ಯಕ್ರಮವಾಗಿ ಹಿಂದಿಯಲ್ಲಿ ಭಾರತದ ಮೊದಲ ಎಂಬಿಬಿಎಸ್ ಪಠ್ಯಕ್ರಮವನ್ನು ಮಧ್ಯಪ್ರದೇಶ ಸರ್ಕಾರ ಬಿಡುಗಡೆಗೊಳಿಸಿದೆ.
ರಾಜ್ಯ ಸರ್ಕಾರದ ಕಾರ್ಯಕ್ರಮದ ಭಾಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದಿಯಲ್ಲಿರುವ ಭಾರತದ ಮೊದಲ ಎಂಬಿಬಿಎಸ್ ಪಠ್ಯಕ್ರಮವನ್ನು ಬಿಡುಗಡೆಗೊಳಿಸಿದ್ದಾರೆ. ಇದು ಬಹಳ ಉತ್ತಮ ಧನಾತ್ಮಕ ಬದಲಾವಣೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಪಠ್ಯಕ್ರಮ ಬಿಡುಗಡೆ ವೇಳೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಂಪೂರ್ಣವಾಗಿ ಇಂಗ್ಲಿಷ್‌ನಿಂದ ಶಿಕ್ಷಣವನ್ನು ಮುಕ್ತಗೊಳಿಸುವುದಾಗಿ ಭಾನುವಾರ ಹೇಳಿದ್ದಾರೆ.
ಆದರೂ, ಇಂಗ್ಲಿಷ್‌ನಲ್ಲಿ ಅಧ್ಯಯನ ಮಾಡಲು ಬಯಸುವವರು ಇಂಗ್ಲಿಷ್‌ನಲ್ಲಿಯೇ ಮಾಡಬಹುದು ಮತ್ತು ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲಿ ಮಾತ್ರವೇ ಪಡೆಯಬೇಕೆಂಬ ಒತ್ತಾಯವಿಲ್ಲ ಎಂದು ಶಿವರಾಜ್ ಸಿಂಗ್ ಚೌಹಾಣ್ ಸೇರಿಸಿದ್ದಾರೆ.

'ನಾವೇಕೆ ಇಂಗ್ಲಿಷ್ ಭಾಷೆಯ ಗುಲಾಮರಾಗಬೇಕು?
ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, "ನಾವೇಕೆ ಇಂಗ್ಲಿಷ್ ಭಾಷೆಯ ಗುಲಾಮರಾಗಬೇಕು? ಚೈನೀಸ್, ಜಪಾನೀಸ್, ಜರ್ಮನ್‌ನ್ನರು, ರಷ್ಯನ್ನರು, ಫ್ರೆಂಚ್ ಅವರು ತಮ್ಮದೇ ಆದ ಭಾಷೆಗಳಲ್ಲಿ ಅಧ್ಯಯನ ಮಾಡಲು ಮತ್ತು ವ್ಯಕ್ತಪಡಿಸಲು ಸಾಧ್ಯವಾಗಿದೆ. ಅವರು ತಮ್ಮ ಭಾಷೆಯಲ್ಲಿ ಓದಿ ಉನ್ನತ ಸ್ಥಾನಗಳನ್ನು ತಲುಪಲು ಸಾಧ್ಯವಾದರೆ ನಮ್ಮ ಮಕ್ಕಳು ಏಕೆ ಅದನ್ನು ಮಾಡಲು ಸಾಧ್ಯವಿಲ್ಲ? " ಎಂದು ಪ್ರಶ್ನಿಸಿದ್ದಾರೆ.
ವೈದ್ಯಕೀಯ ಪುಸ್ತಕಗಳ ಹಿಂದಿ ಆವೃತ್ತಿಯ ಬಿಡುಗಡೆಯು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಅಧ್ಯಯನ ಮಾಡದ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಆದ್ದರಿಂದ, ಇಂಗ್ಲಿಷ್ ಭಾಷೆಯ ಜ್ಞಾನವಿಲ್ಲದ ಕಾರಣ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ವಿಫಲವಾಗಿರುವವರಿಗೆ ಸಹಾಯಕರವಾಗುತ್ತದೆ ಎಂದು ಚೌಹಾಣ್ ಹೇಳಿದ್ದಾರೆ. ಜೊತೆಗೆ ಈ ದಿನವನ್ನು ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಾಗುವುದು ಎಂದಿದ್ದಾರೆ.

ಎಂಜಿನಿಯರಿಂಗ್ ಕಾಲೇಜುಗಳಲ್ಲಿಯೂ ಹಿಂದಿ ಶಿಕ್ಷಣ; ಚೌಹಾಣ್
ಮಧ್ಯಪ್ರದೇಶ ಮತ್ತು ಇತರ ಭಾರತೀಯ ರಾಜ್ಯಗಳು ಹಿಂದಿ ಎಂಬಿಬಿಎಸ್ ಪುಸ್ತಕಗಳ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ವೇದಿಕೆಯನ್ನು ರಚಿಸುವ ಕುರಿತು ಚೌಹಾಣ್ ಮಾಹಿತಿ ನೀಡಿದ್ದಾರೆ. ತಮ್ಮ ಸರ್ಕಾರವು ಸಿದ್ಧಪಡಿಸಿದ ಹಿಂದಿ ಪಠ್ಯಕ್ರಮವನ್ನು ಇತರ ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ನಾವು ಸಿದ್ಧಪಡಿಸಿರುವ ಪಠ್ಯಕ್ರಮವನ್ನು ಅವರಿಗೆ ನೀಡುತ್ತೇವೆ ಮತ್ತು ಅವರು ಸಿದ್ಧಪಡಿಸಿರುವ ಪರ್ಠಯಕ್ರಮದಲ್ಲಿ ಯಾವುದಾದರೂ ಉತ್ತಮವಾಗಿದ್ದರೆ, ನಾವು ಅವರಿಂದ ತೆಗೆದುಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.
ಈ ವರ್ಷ ತಮ್ಮ ರಾಜ್ಯವು ಆರು ಎಂಜಿನಿಯರಿಂಗ್ ಮತ್ತು ಅನೇಕ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಹಿಂದಿ ಶಿಕ್ಷಣವನ್ನು ನೀಡಲು ಪ್ರಾರಂಭಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಮಧ್ಯಪ್ರದೇಶದ ಐಐಟಿ ಮತ್ತು ಐಐಎಂಗಳಲ್ಲಿ ಹಿಂದಿಯಲ್ಲಿ ಶಿಕ್ಷಣವನ್ನು ಪ್ರಾರಂಭಿಸುವುದು ಅವರ "ಕನಸು" ಎಂದೂ ಮಾಹಿತಿ ನೀಡಿದ್ದಾರೆ.

ಹಿಂದಿ ಭಾಷೆಯಲ್ಲಿ ಉನ್ನತ ಶಿಕ್ಷಣಕ್ಕೆ ಆಧ್ಯತೆ
ಭೋಪಾಲ್‌ನಲ್ಲಿ ಮುಖ್ಯಮಂತ್ರಿ ಚೌಹಾಣ್ ಮತ್ತು ಮಧ್ಯಪ್ರದೇಶದ ಶಿಕ್ಷಣ ಸಚಿವ ವಿಶ್ವಸ್ ಕೈಲಾಶ್ ಸಾರಂಗ್ ಅವರ ಸಮ್ಮುಖದಲ್ಲಿ ಅಮಿತ್ ಶಾ ಎಂಬಿಬಿಎಸ್ ಪುಸ್ತಕಗಳನ್ನು ಹಿಂದಿ ಆವೃತ್ತಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕಗಳು ದೇವನಾಗರಿ ಲಿಪಿಯಲ್ಲಿ ಬರೆದಿರುವ ವೈಜ್ಞಾನಿಕ ಜೈವಿಕ ಪದಗಳು ಮತ್ತು ಹಿಂದಿಯಲ್ಲಿ ವಿವರಣೆಗಳನ್ನು ಒಳಗೊಂಡಿವೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಸಂಸದರ ಸಮಿತಿಯು ಇತ್ತೀಚೆಗೆ ಹಿಂದಿ ಮಾತನಾಡುವ ರಾಜ್ಯಗಳಾದ ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಗುಜರಾತ್‌ನಲ್ಲಿ ಹಿಂದಿಯನ್ನು ಉನ್ನತ ಶಿಕ್ಷಣಕ್ಕೆ ಭಾಷೆಯಾಗಿ ಸೂಚಿಸಿತ್ತು. ತಮಿಳುನಾಡು ಮತ್ತು ದಕ್ಷಿಣ ಭಾರತದ ಹಿಂದಿ ಮಾತನಾಡದ ರಾಜ್ಯಗಳಿಗೆ, ಸಮಿತಿಯು ಆಯಾ ಮಾತೃಭಾಷೆಯಲ್ಲಿ ಪುಸ್ತಕಗಳನ್ನು ಶಿಫಾರಸು ಮಾಡಿದೆ.

ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಶ್ಲಾಘಿಸಿದ ಪ್ರಧಾನಿ ಮೋದಿ
ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ಮಧ್ಯಪ್ರದೇಶ ಸರ್ಕಾರದ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇದು ದೇಶದಲ್ಲಿ ಬಹಳ ದೊಡ್ಡ ಧನಾತ್ಮಕ ಬದಲಾವಣೆಯನ್ನು ತರುತ್ತದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ಕುರಿತು ಅಮಿತ್ ಶಾ ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಈ ಆರಂಭವು ದೇಶದಲ್ಲಿ ದೊಡ್ಡ ಧನಾತ್ಮಕ ಬದಲಾವಣೆಯನ್ನು ತರಲಿದೆ" ಎಂದು ಹೇಳಿದ್ದಾರೆ. "ಇದರಿಂದ ಲಕ್ಷಗಟ್ಟಲೆ ವಿದ್ಯಾರ್ಥಿಗಳು ತಮ್ಮ ಸ್ವಂತ ಭಾಷೆಯಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ, ಅವರಿಗೆ ಅನೇಕ ಅವಕಾಶಗಳ ಬಾಗಿಲುಗಳು ತೆರೆದುಕೊಳ್ಳುತ್ತವೆ" ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದ್ದಾರೆ.
ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಮಧ್ಯಪ್ರದೇಶದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ಹಿಂದಿಯಲ್ಲಿ ವೈದ್ಯಕೀಯ ಅಧ್ಯಯನವನ್ನು ಪ್ರಾರಂಭಿಸುವ ಮೂಲಕ ಪ್ರಧಾನಿ ಮೋದಿಯವರ ಕನಸನ್ನು ನನಸಾಗಿಸಿದೆ ಎಂದು ಹೆಮ್ಮೆಪಡುತ್ತೇನೆ ಎಂದು ಹೇಳಿದ್ದರು.












Click it and Unblock the Notifications