ಪುಲ್ವಾಮಾ ದಾಳಿ ರಾಹುಲ್ ಗಾಂಧಿಗೆ ಮುಂಚೆನೇ ತಿಳಿದಿತ್ತೇ: ಬಿಜೆಪಿ ಪ್ರಶ್ನೆ

ನವದೆಹಲಿ, ಫೆ 22: ಈ ದೇಶದ ಜನತೆಗೆ ನಿಮ್ಮ ಸುಳ್ಳು, ತಲೆಬುಡವಿಲ್ಲದ ಹೇಳಿಕೆ, ಕಟ್ಟುಕಥೆಗಳನ್ನು ನೋಡಿ ನೋಡಿ ಸಾಕಾಗಿ ಹೋಗಿದೆ ಎಂದು ಬಿಜೆಪಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಟೀಕಿಸಿದೆ.
ಪುಲ್ವಾಮಾ ದಾಳಿಯ ವೇಳೆ ಪ್ರಧಾನಿ ಮೋದಿ ಶೂಟೌಟ್ ನಲ್ಲಿ ಇದ್ದರು ಎನ್ನುವ ರಾಹುಲ್ ಹೇಳಿಕೆಗೆ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿರುವ ಬಿಜೆಪಿ, ದೇಶದ ದಾರಿತಪ್ಪಿಸುವ ಹೇಳಿಕೆಯನ್ನು ನೀಡುವ ನಿಮಗೆ ನಾಚಿಕೆಯಾಗಬೇಕು ಎಂದು ಜರಿದಿದೆ.
ಪುಲ್ವಾಮಾ ದಾಳಿ ನಡೆದಾಗ ಮೋದಿ ಶೂಟಿಂಗ್ : ಮತ್ತೆ ಕಾಲೆಳೆದ ರಾಹುಲ್
ದೇಶದ ಜನತೆಗೆ ಪುಲ್ವಾಮಾದಲ್ಲಿ ನಡೆದ ದಾಳಿಯ ಬಗ್ಗೆ ಸಾಯಂಕಾಲದ ವೇಳೆ ತಿಳಿಯಿತು, ನಿಮಗೆ ದಾಳಿಯ ಬಗ್ಗೆ ಮುಂಚಿತವಾಗಿಯೇ ತಿಳಿದಿರಬಹುದು. ಮುಂದಿನ ಬಾರಿ, ಹುತಾತ್ಮ ಸೈನಿಕರ ವಿಚಾರವನ್ನು ತರದೇ, ಇನ್ನೂ ಉತ್ತಮವಾದ ಸ್ಟಂಟ್ ಅನ್ನು ಮಾಡಿ ಎಂದು ಬಿಜೆಪಿ ಲೇವಡಿ ಮಾಡಿದೆ.
ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದ ಫೆ.14ರಂದು ಪ್ರಧಾನಿ ಮೋದಿ ಅವರು ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ್ದರು. ಇದು ಅವರು ಸೈನಿಕರಿಗೆ ತೋರಿದ ಅವಮಾನ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಮೋದಿ ಅವರ ಭೇಟಿಯ ಫೋಟೊಗಳನ್ನು ಪ್ರದರ್ಶಿಸಿ ಗುರುವಾರ (ಫೆ 21) ಆರೋಪಿಸಿದ್ದರು.
ದಾಳಿ ನಡೆದ ಬಳಿಕವೂ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಮೋದಿ: ಕಾಂಗ್ರೆಸ್ ಆರೋಪ
ಇದಾದ ನಂತರ, "ಪುಲ್ವಾಮಾದಲ್ಲಿ 40 ಜವಾನರು ಹುತಾತ್ಮರಾಗಿ 3ಗಂಟೆಯ ನಂತರವೂ 'ಪ್ರೈಮ್ ಟೈಮ್ ಮಿನಿಸ್ಟರ್' ಫಿಲ್ಮ್ ಶೂಟ್ ಮಾಡುತ್ತಿದ್ದರು. ದೇಶದ ಹೃದಯದಲ್ಲಿ ಮತ್ತು ಹುತಾತ್ಮರ ಮನೆಯಲ್ಲಿ ನೋವು ಮಡುಗಟ್ಟಿದ್ದರೂ ಅವರು ನಗುನಗುತ್ತಲೇ ಶೂಟಿಂಗ್ ನಲ್ಲಿ ಮುಳುಗಿದ್ದರು." ಎಂದು ಶುಕ್ರವಾರ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಮೋದಿಯವರನ್ನು ಟೀಕಿಸಿದ್ದರು.