20 ಕೆಜಿ RDX ಸ್ಫೋಟಿಸಿ ಪ್ರಧಾನಿ ಮೋದಿ ಹತ್ಯೆಗೆ ಭಾರೀ ಸಂಚು; ಇ-ಮೇಲ್ ಸಂದೇಶ
ನವದೆಹಲಿ, ಏಪ್ರಿಲ್ 1: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಪ್ರಧಾನಿ ಮೋದಿ ಹತ್ಯೆಗೆ ಬರೋಬ್ಬರಿ 20 ಕೆಜಿ ಆರ್‌ಡಿಎಕ್ಸ್‌ನೊಂದಿಗೆ (RDX) ಸ್ಲೀಪರ್ ಸೆಲ್ ಮೂಲಕ ಕೊಲ್ಲಲು ಸಂಚು ರೂಪಿಸಲಾಗಿದೆ ಎಂಬ ಎಚ್ಚರಿಕೆಯ ಇ-ಮೇಲ್ ಬಂದಿದೆ ಎಂದು ಭದ್ರತಾ ಏಜೆನ್ಸಿ ಮಾಹಿತಿ ನೀಡಿದೆ.
ಸದ್ಯ ಈ ಇ-ಮೇಲ್ ದೆಹಲಿ ಪೊಲೀಸ್ ಆಯುಕ್ತರಿಗೆ ತಲುಪಿದ್ದು, ಇ-ಮೇಲ್ ಸಂದೇಶ ಬಂದ ಕೂಡಲೇ ಪ್ರಧಾನಿ ಮೋದಿಯವರಿಗೆ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ ದೆಹಲಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಜೊತೆಗೆ ಅನಾಮಧೇಯ ವ್ಯಕ್ತಿಯಿಂದ ಮುಂಬೈನಲ್ಲಿರುವ ನ್ಯಾಷನಲ್ ಇನ್ವೇಷ್ಟಿಗೇಶನ್ ಸಂಸ್ಥೆಗೂ ಮೇಲ್ ರವಾನಿಸಲಾಗಿದೆ.
ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಮೋದಿ ಹತ್ಯೆಗೆ ಸಂಚು
ಮುಂಬರುವ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಪ್ರಧಾನಿ ಮೋದಿ ಅವರಿಗೆ ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇನ್ನು ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಕುರಿತು ದೆಹಲಿ ಪೊಲೀಸರಿಗೆ ಮತ್ತು ಮುಂಬೈನಲ್ಲಿರುವ ನ್ಯಾಷನಲ್ ಇನ್ವೇಷ್ಟಿಗೇಶನ್ ಸಂಸ್ಥೆಗೆ ಇ-ಮೇಲ್ ಸಂದೇಶ ರವಾನಿಸಲಾಗಿದೆ.

ರಾಷ್ಟ್ರೀಯ ತನಿಖಾ ದಳದಿಂದ ತನಿಖೆ
ಈಗಾಗಲೇ ಬಂದಿರುವ ಇ-ಮೇಲ್ನಲ್ಲಿ ಭಯೋತ್ಪಾದಕರ ಜೊತೆ ಸಂಪರ್ಕವಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಜೊತೆಗೆ ಮೋದಿ ಅವರ ಹತ್ಯೆಗೆ ಈಗಾಗಲೇ ಆರ್‌ಡಿಎಕ್ಸ್ ಸಂಗ್ರಹಿಸಲಾಗಿದ್ದು, ಒಟ್ಟು 20 ಕೆಜಿ ಆರ್‌ಡಿಎಕ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಎಚ್ಚರಿಕೆ ಸಂದೇಶವನ್ನು ಮೇಲ್ ಮೂಲಕ ನೀಡಲಾಗಿದೆ.
ಇನ್ನು ಇ-ಮೇಲ್ ಅನ್ನು ಮುಂಬೈನ ರಾಷ್ಟ್ರೀಯ ತನಿಖಾ ತಂಡಕ್ಕೆ ಭದ್ರತಾ ಏಜೆನ್ಸಿ ನೀಡಿದೆ. ಆದರೆ ಈ ಮೇಲ್ ಎಷ್ಟು ನಿಜ, ಅದನ್ನು ಎಲ್ಲಿಂದ ಕಳುಹಿಸಲಾಗಿದೆ? ಅನ್ನುವುದರ ಬಗ್ಗೆ ಸರಿಯಾದ ಮಾಹಿತಿ ಈವರೆಗ ಲಭ್ಯವಾಗಿಲ್ಲ. ಆದರೂ ಸದ್ಯ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.
ಇ-ಮೇಲ್ ಸಂದೇಶ ಏನಿದೆ?
ಹಲೋ.. ಎಲ್ಲರೂ ಇಲ್ಲಿ ಕೇಳಿ. ನನ್ನ ಬಳಿ 20ಕ್ಕೂ ಹೆಚ್ಚು ಆರ್ಡಿಎಕ್ಸ್ಗಳು ಇವೆ. 20 ಕಡೆಗಳಲ್ಲಿ ದೊಡ್ಡ ಮಟ್ಟದಲ್ಲಿ ಅಟ್ಯಾಕ್ ಮಾಡಲು ಪ್ಲಾನ್ ರೂಪಿಸಿದ್ದೇನೆ. ಅದೂ ಕೂಡ ಪ್ರಮುಖ ನಗರಗಳಲ್ಲಿ. ನಾನು ಪ್ರಧಾನಿ ಮೋದಿಯನ್ನು ಕೊಲ್ಲಲು ನಿಶ್ಚಯಿಸಿದ್ದೇನೆ. ನಾನು ಅದನ್ನು ಮಾಡುತ್ತೇನೆ. ಮೋದಿ ನನ್ನ ಜೀವನವನ್ನು ಹಾಳು ಮಾಡಿದ್ದಾರೆ. ನಾನು ಯಾರನ್ನೂ ಬಿಡುವುದಿಲ್ಲ.

ನಾನು ಸರಿಸುಮಾರು 2 ಲಕ್ಷ ಮಂದಿಯನ್ನು ಕೊಲ್ಲುತ್ತೇನೆ. ನನ್ನ ಬಾಂಬ್ನಿಂದ ಜನರು ಸತ್ತರೆ ಅವರೂ ಕೂಡ ಸಾಯುತ್ತಾರೆ. ನಾನು ಈಗಾಗಲೇ ಕೆಲವು ಉಗ್ರರನ್ನು ಭೇಟಿ ಮಾಡಿದ್ದೇನೆ. ಅವರು ನನಗೆ ಆರ್‌ಡಿಎಕ್ಸ್ ಪಡೆಯಲು ಸಹಾಯ ಮಾಡಿದ್ದಾರೆ. ನನಗೆ ಸುಲಭವಾಗಿ ಬಾಂಬ್ ಸಿಕ್ಕಿದ್ದೂ ಈ ವಿಚಾರದಲ್ಲಿ ನನಗೆ ಖುಷಿ ಇದೆ. ನಾನು ಎಲ್ಲ ಕಡೆಯೂ ಬ್ಲಾಸ್ಟ್ ಮಾಡಿಯೇ ಮಾಡುತ್ತೇನೆ. ನೀವು ನನ್ನನ್ನು ತಡೆಯಬಹುದು, ಆದರೆ ಪ್ಲಾನ್ ಈಗಾಗಲೇ ರೆಡಿಯಾಗಿದೆ.
ಮೋದಿಗೆ ಭದ್ರತೆ ಹೆಚ್ಚಳ
ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿರುವುದು ಬಹಿರಂಗವಾದ ನಂತರ ರಾಷ್ಟ್ರೀಯ ಭದ್ರತಾ ಪಡೆಗಳು ಎಚ್ಚೆತ್ತುಕೊಂಡಿದ್ದು, ಇಮೇಲ್ ಕಳುಹಿಸಿದವರನ್ನು ಪತ್ತೆ ನಡೆಸಲಾರಂಭಿಸಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿದೆ.












Click it and Unblock the Notifications