Tirupati: ತಿರುಪತಿ ಭಕ್ತರಿಗೆ ಗುಡ್ ನ್ಯೂಸ್: ಲಡ್ಡು ಜೊತೆಗೆ ಮಸಾಲೆ ವಡೆ ಘಮ
ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವಸ್ಥಾನ ವಿಶ್ವದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ನಿತ್ಯ ಸಾವಿರಾರು ಭಕ್ತರು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ತಿರುಪತಿಗೆ ಭೇಟಿ ನೀಡುವ ಭಕ್ತರು ಅನ್ನ ಪ್ರಸಾದವನ್ನು ಸೇವಿಸಿ ನಂತರ ಲಡ್ಡು ಪ್ರಸಾದವನ್ನು ಖರೀದಿ ಮಾಡುತ್ತಾರೆ. ಇದೀಗ ತಿರುಪತಿ ದೇವಸ್ಥಾನದಲ್ಲಿ ಅನ್ನ ಪ್ರಸಾದದ ಜೊತೆಗೆ ಮಸಾಲಾ ವಡೆ ಘಮ ಇರಲಿದೆ.
ಹೌದು... ನಿತ್ಯ ಭಕ್ತರಿಗೆ ನೀಡುವ ಅನ್ನ ಪ್ರಸಾದದಲ್ಲಿ ಮಸಾಲೆ ವಡೆ ನೀಡಲು ಟಿಟಿಡಿ ನಿರ್ಧರಿಸಿದೆ. ಇದೀಗ ಭಕ್ತರಿಗೆ ಅನ್ನ ಪ್ರಸಾದದ ಜೊತೆಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತನ್ನ ಅನ್ನಪ್ರಸಾದ ಮೆನುವಿನಲ್ಲಿ ದಕ್ಷಿಣ ಭಾರತದ ಜನಪ್ರಿಯ ತಿಂಡಿಯಾದ ಮಸಾಲೆ ವಡೆಯನ್ನು ಸೇರಿಸಿದೆ. ಜನವರಿ 20ರಿಂದ ಟಿಟಿಡಿ ಸಿಬ್ಬಂದಿ ಪ್ರಾಯೋಗಿಕ ಭಾಗವಾಗಿ ಭಕ್ತರಿಗೆ ಸುಮಾರು 5,000 ಮಸಾಲೆ ವಡೆಗಳನ್ನು ಬಡಿಸಿದ್ದಾರೆ. ಬಳಿಕ ಮಸಾಲೆ ವಡೆಯ ರುಚಿಯ ಬಗ್ಗೆ ಭಕ್ತರಿಂದ ಅಭಿಪ್ರಾಯವನ್ನು ಕೇಳಲಾಗಿದೆ.

ಸಾಂಪ್ರದಾಯಿಕ ಪದ್ಧತಿಗಳಿಗೆ ಬದ್ಧವಾಗಿ ಈ ವಡೆಗಳನ್ನು ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೆ ತಯಾರಿಸಲಾಗಿತ್ತು. ಅನ್ನಪ್ರಸಾದ ಮೆನುವಿನಲ್ಲಿ ಹೊಸ ಐಟಂ ಮಸಾಲೆ ವಡೆಯನ್ನು ಸೇರಿಸಲಾಗಿದ್ದು ಇದರ ರುಚಿ ಮತ್ತು ಭಕ್ತರಿಂದ ಪ್ರತಿಕ್ರಿಯೆಯನ್ನು ಸಂಗ್ರಹಿಸಲಾಯಿತು. ಮಸಾಲೆ ವಡೆಗಳು ರುಚಿಕರವಾಗಿದ್ದವು ಎಂದು ಭಕ್ತರು ಹೇಳಿದ್ದಾರೆ. ಜೊತೆಗೆ ಇದನ್ನು ನೈವೇದ್ಯಗಳಿಗೆ ಸೇರ್ಪಡೆ ಮಾಡುವುದು ಸ್ವಾಗತಾರ್ಹ ಎಂದು ಅನೇಕ ಭಕ್ತರು ಹೇಳಿದ್ದಾರೆ.
ಮಸಾಲ ವಡೆಯಂತಹ ಹೊಸ ತಿಂಡಿಯನ್ನು ಪರಿಚಯಿಸುವ ಮೂಲಕ ತಿರುಮಲಕ್ಕೆ ಭೇಟಿ ನೀಡುವ ಬಹುಸಂಖ್ಯೆಯ ಯಾತ್ರಿಕರಿಗೆ ಹೆಚ್ಚು ಪೌಷ್ಟಿಕ ಮತ್ತು ರುಚಿಕರವಾದ ಆಹಾರವನ್ನು ಒದಗಿಸುವ ಗುರಿಯನ್ನು ಟಿಟಿಡಿ ಹೊಂದಿದೆ.
ಪ್ರಾಯೋಗಿಕ ಪರೀಕ್ಷೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತ ನಂತರ, ಟಿಟಿಡಿ ಅಧಿಕೃತವಾಗಿ ಅನ್ನಪ್ರಸಾದ ಮೆನುವಿನಲ್ಲಿ ಮಸಾಲೆ ವಡೆಯನ್ನು ಸೇರಿಸಲು ಯೋಜಿಸಿದೆ. ಭಕ್ತರಿಗೆ ಅನ್ನಪ್ರಸಾದ ಸೇವೆಗಳನ್ನು ನಿರಂತರವಾಗಿ ಸುಧಾರಿಸುವ ಉದ್ದೇಶದಿಂದ ಈ ಹೊಸ ತಿಂಡಿಯನ್ನು ಸೇರಿಸಲಾಗಿದೆ.












Click it and Unblock the Notifications