Maratha quota protest: ಶಾಸಕರ ಬಂಗಲೆ, ಕಾರುಗಳಿಗೆ ಬೆಂಕಿ ಹಚ್ಚಿ ಉಪಟಳ ಮೆರೆಯುತ್ತಿರುವ ಜನರು- ಮಂಕಾಗಿ ಕುಳಿತ ಸಿಎಂ ಶಿಂಧೆ
ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ( ಎನ್‌ಸಿಪಿ ) ಶಾಸಕ ಪ್ರಕಾಶ್ ಸೋಲಂಕೆ ಅವರ ನಿವಾಸವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಗಿದೆ. ಬೀಡ್ ಜಿಲ್ಲೆಯ ಮಜಲ್ಗೈನ್‌ನಲ್ಲಿರುವ ಎನ್‌ಸಿಪಿ ಶಾಸಕ ಪ್ರಕಾಶ್ ಸೋಲಂಕೆ ಅವರ ನಿವಾಸವನ್ನು ಗುರಿಯಾಗಿಸಿಕೊಂಡು ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ.
ಈ ಘಟನೆಯಲ್ಲಿ ಪ್ರಕಾಶ್ ಸೋಲಂಕೆ ಅವರ ಬಂಗಲೆ ಮತ್ತು ಕಾರುಗಳು ಸುಟ್ಟು ಭಸ್ಮವಾಗಿವೆ. ಅವರಿಗೆ ಸೇರಿರುವ ಇನ್ನೊಂದು ಮನೆಯ ಮೇಲೂ ದಾಳಿ ನಡೆದಿದ್ದು, ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ.
ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆಕ್ರೋಶಗೊಂಡಿರುವ ಪ್ರತಿಭಟನಾಕಾರರು ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸುತ್ತಿರುವುದು, ಬಂಗಲೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿರುವುದು ಕಂಡುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಪ್ರಕಾಶ್ ಸೋಲಂಕೆ, 'ದಾಳಿ ನಡೆದಾಗ ನಾನು ನನ್ನ ಮನೆಯೊಳಗಿದ್ದೆ, ಅದೃಷ್ಟವಶಾತ್, ನನ್ನ ಕುಟುಂಬ ಸದಸ್ಯರು ಅಥವಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಆದರೆ, ಬೆಂಕಿಯಿಂದಾಗಿ ಅಪಾರ ಆಸ್ತಿ ನಷ್ಟವಾಗಿದೆ' ಎಂದು ಹೇಳಿದ್ದಾರೆ.
ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಏಕನಾಥ್ ಶಿಂಧೆ, 'ಈ ಪ್ರತಿಭಟನೆ ಯಾವ ತಿರುವು ಪಡೆಯುತ್ತಿದೆ ಎಂಬುದನ್ನು ಮನೋಜ್ ಜಾರಂಗೆ ಪಾಟೀಲ್ (ಮರಾಠ ಮೀಸಲಾತಿ ಹೋರಾಟಗಾರ) ಗಮನಿಸಬೇಕು. ಇದು ತಪ್ಪು ದಾರಿಯಲ್ಲಿ ಸಾಗುತ್ತಿದೆ. ಪ್ರತಿಭಟನಾಕಾರರಿಗೆ ಪಾಟೀಲ್ ಸಲಹೆ ನೀಡಬೇಕು' ಎಂದು ಮನವಿ ಮಾಡಿದ್ದಾರೆ.
ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಮರಾಠ ಮೀಸಲಾತಿ ಕುರಿತು ಚರ್ಚೆ ನಡೆಸಲು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸಂಪುಟದ ಉಪ ಸಮಿತಿ ಸಭೆ ಕರೆದಿದ್ದಾರೆ.
#WATCH | Beed, Maharashtra: Maratha reservation agitators vandalised and set the residence of NCP MLA Prakash Solanke on fire. pic.twitter.com/8uAfmGbNCI
— ANI (@ANI) October 30, 2023
'ಇಂದು ಸಚಿವ ಸಂಪುಟ ಸಭೆ ನಡೆಯಲಿದೆ. ಮರಾಠಾ ಮೀಸಲಾತಿ ಕುರಿತು ನ್ಯಾಯಮೂರ್ತಿ ಶಿಂಧೆ ಸಮಿತಿಯ ವರದಿಯನ್ನು ಔಪಚಾರಿಕವಾಗಿ ಅಂಗೀಕರಿಸುತ್ತೇವೆ. ಕುಂಬಿ ಜಾತಿ ಪ್ರಮಾಣ ಪತ್ರ ನೀಡಲು ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಲಾಗುವುದು' ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ತಿಳಿಸಿದ್ದಾರೆ.
'ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲು ರಚಿಸಲಾದ ನ್ಯಾಯಮೂರ್ತಿ ಶಿಂಧೆ ಸಮಿತಿಯು ತಮ್ಮ ಮೊದಲ ವರದಿಯನ್ನು ನಮಗೆ ಸಲ್ಲಿಸಿದೆ. ಸಮಿತಿಯ ಅವಧಿಯನ್ನು ಎರಡು ತಿಂಗಳವರೆಗೆ ವಿಸ್ತರಿಸಲಾಗಿದೆ. ಅದು ತನ್ನ ಅಂತಿಮ ವರದಿಯನ್ನು ಸಲ್ಲಿಸಲಿದೆ. ಮರಾಠಾ ಮೀಸಲಾತಿ ವಿಚಾರದಲ್ಲಿ ನಮ್ಮ ಕ್ಯುರೇಟಿವ್ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಯಾವುದೇ ತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳದಂತೆ ಜನರಿಗೆ ನಾನು ಪ್ರಾಮಾಣಿಕವಾಗಿ ಮನವಿ ಮಾಡುತ್ತೇನೆ. ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲು ನಾವು ಬದ್ಧರಾಗಿದ್ದೇವೆ' ಎಂದು ಮುಖ್ಯಮಂತ್ರಿ ಶಿಂಧೆ ಹೇಳಿದ್ದಾರೆ.












Click it and Unblock the Notifications