ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿರುವ ಮನೋಹರ್ ಪರಿಕ್ಕರ್
ಪಣಜಿ, ಮಾರ್ಚ್ 07: ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ.
ನಿನ್ನೆ(ಮಾ.06) ಮುಂಬೈಯ ಲೀಲಾವತಿ ಆಸ್ಪತ್ರೆಗೆ ತೆರಳಿದ್ದ ಪರಿಕ್ಕರ್ ಅವರ ಆರೋಗ್ಯ ತಪಾಸಣೆ ಮಾಡಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುವಂತೆ ಸೂಚಿಸಿದ್ದಾರೆ ಎಂದು ಪರಿಕ್ಕರ್ ಅವರ ಆಪ್ತ ಕಾರ್ಯದರ್ಶಿ ರೂಪೇಶ್ ಕಾಮತ್ ತಿಳಿಸಿದ್ದಾರೆ.
ನಿನ್ನೆ ತಾನೆ ಟ್ವಿಟ್ಟರ್ ನಲ್ಲಿ ವಿಡಿಯೋ ಮೆಸೇಜ್ ನೀಡಿದ್ದ ಪರಿಕ್ಕರ್, ತಾವು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಬೇಕಾಗಬಹುದು. ನಿಮ್ಮೆಲ್ಲರ ಆಶೀರ್ವಾದ, ಹಾರೈಕೆ ನನ್ನ ಮೇಲಿರಲಿ ಎಂದು ಗೋವಾ ಜನತೆಗೆ ಮನವಿ ಮಾಡಿದ್ದರು.

ಫೆ. 15 ರಂದು ಅನಾರೋಗ್ಯದ ಕಾರಣ ಆಸ್ಪತ್ರೆ ಸೇರಿದ್ದ ಪರಿಕ್ಕರ್ ಪೆ.22 ರಂದು ಡಿಸ್ಚಾರ್ಜ್ ಆಗಿ, ಅದೇ ದಿನ ಬಜೆಟ್ ಮಂಡಿಸಿದ್ದರು.
ಪರಿಕ್ಕರ್ ಅವರು ನಾಲ್ಕನೆ ಹಂತದ ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಕುರಿತು ಆಸ್ಪತ್ರೆಯಿಂದಾಗಲೀ, ಪರಿಕ್ಕರ್ ಅವರ ಆಪ್ತ ಮೂಲದಿಂದಾಗಲೀ ಯಾವುದೇ ನಿಖರ ಮಾಹಿತಿ ದೊರಕಿಲ್ಲ. ಅವರು ಕೇವಲ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗಿದ್ದು, ಯಾವುದೇ ಗಂಭೀರ ಸಮಸ್ಯೆಯಿಲ್ಲ ಎಂದು ವೈದ್ಯರು ಹೇಳಿದ್ದಾರೆ.












Click it and Unblock the Notifications