G20 Summit: ಪ್ರಧಾನಿ ಮೋದಿ ಹೊಗಳಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್!
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಹಿಂದೆ ಕೇಂದ್ರ ಸರ್ಕಾರದ ಕ್ರಮಗಳ ಬಗ್ಗೆ ಮನಮೋಹನ್ ಸಿಂಗ್ ಟೀಕಿಸಿದ್ದರು. ಆದರೆ ಅದೊಂದು ವಿಚಾರದ ಬಗ್ಗೆ ಮಾತನಾಡಿ, ಪ್ರಧಾನಿ ಮೋದಿ ಹಾಗೂ ಮೋದಿ ನೇತೃತ್ವದ ಸರ್ಕಾರದ ನಡೆ ಹಾಡಿ ಹೊಗಳಿದ್ದಾರೆ. ಹಾಗಾದರೆ ಹಾಲಿ ಪ್ರಧಾನಿಗೆ ಮಾಜಿ ಪಿಎಂ ಗ್ರೇಟ್ ಅಂದಿದ್ದು ಏಕೆ? ಮೋದಿ ಬಗ್ಗೆ ಸಿಂಗ್ ಹೇಳಿದ್ದೇನು? ಮುಂದೆ ಓದಿ.
ರಷ್ಯಾ ಮತ್ತು ಉಕ್ರೇನ್ ಮಧ್ಯೆ ಭೀಕರ ಯುದ್ಧ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಅತ್ತ ಒಂದು ಬಣ ಅಮೆರಿಕ ಜೊತೆ ಸೇರಿ ಉಕ್ರೇನ್ ಪರ ನಿಂತಿದೆ. ಹಾಗೇ ಮತ್ತೊಂದು ಬಣವು ರಷ್ಯಾ ಪರ ನಿಂತಿದೆ. ಚೀನಾ, ಉತ್ತರ ಕೊರಿಯಾ ನಾಯಕರು ರಷ್ಯಾ ಪರವಾಗಿ ನಿಂತಿರೆ, ಇತ್ತ ಅಮೆರಿಕ, ನ್ಯಾಟೋ ರಾಷ್ಟ್ರಗಳು ಉಕ್ರೇನ್ ಪರ ನಿಂತಿವೆ. ಹೀಗಾಗಿ ಜಗತ್ತು ಒಡೆದ ಮನೆಯಾಗಿದೆ. ಈ ಹೊತ್ತಲ್ಲಿ ಭಾರತ ಮಾತ್ರ ಜಾಣ ನಡೆ ಮುಂದಿಟ್ಟು, ನಮಗೆ ಯುದ್ಧ ಬೇಡ ಎಂದಿದೆ. ಅಲ್ಲದೆ ಯುದ್ಧ ನಿಲ್ಲಿಸಿ ಎಂದು ರಷ್ಯಾ ಮತ್ತು ಉಕ್ರೇನ್‌ಗೆ ಬುದ್ಧಿ ಕೂಡ ಹೇಳಿದೆ. ಇದೇ ವಿಚಾರದ ಬಗ್ಗೆ ಈಗ ಪ್ರಧಾನಿ ಮೋದಿ ಅವರನ್ನ ಹೊಗಳಿದ್ದಾರೆ ಸಿಂಗ್.

ಮೋದಿ ಸರ್ಕಾರ ಗ್ರೇಟ್ ಎಂದ ಸಿಂಗ್!
ಹೌದು ರಷ್ಯಾ & ಉಕ್ರೇನ್ ಯುದ್ಧದ ಬಗ್ಗೆ ಮೋದಿ ಸರ್ಕಾರ ಹೊಂದಿರುವ ನಿಲುವಿನ ಕುರಿತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಶಾಂತಿ ಪ್ರತಿಪಾದಿಸುವಾಗ ದೇಶವು ತನ್ನ ಸಾರ್ವಭೌಮ ಮತ್ತು ಆರ್ಥಿಕ ಹಿತಾಸಕ್ತಿಗೆ ಆದ್ಯತೆ ನೀಡುವ ಮೂಲಕ ಸರಿಯಾದ ಹೆಜ್ಜೆ ಇಟ್ಟಿದೆ ಎಂದು ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿ ಅವರ ನಡೆಯನ್ನ ಹೊಗಳಿದ್ದಾರೆ. ಉಕ್ರೇನ್ ಸಂಘರ್ಷವನ್ನು ಬಗೆಹರಿಸಲು ಶಾಂತಿಯುತ ಮಾತುಕತೆಯೇ ಏಕೈಕ ಮಾರ್ಗ ಎಂದು ಭಾರತ ನಿರಂತರವಾಗಿ ಹೇಳುತ್ತಾ ಬಂದಿದ್ದು, ಈ ನಿಲುವನ್ನು ಶ್ಲಾಘಿಸಿದ್ದಾರೆ ಜಾಗತಿಕ ಆರ್ಥಿಕ ತಜ್ಞರೂ ಆಗಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು.

ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಈಗಿನ ಕಾಲಘಟ್ಟದಲ್ಲಿ ಬದಲಾಗುತ್ತಿರುವ ಅಂತಾರಾಷ್ಟ್ರೀಯ ಸನ್ನಿವೇಶದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತದ ನಡೆ ಉತ್ತಮವಾಗಿದೆ ಎಂದಿದ್ದಾರೆ. ಅಲ್ಲದೆ ಭಾರತವು ಸಾಮರಸ್ಯದ ಸಮಾಜವಾಗಿದೆ ಎಂದಿದ್ದಾರೆ. ಪಕ್ಷ ಅಥವಾ ವೈಯಕ್ತಿಕ ರಾಜಕೀಯಕ್ಕಾಗಿ ರಾಜತಾಂತ್ರಿಕತೆ ಮತ್ತು ವಿದೇಶಾಂಗ ನೀತಿ ಬಳಸುವಲ್ಲಿ ಸಂಯಮವನ್ನು ಪ್ರದರ್ಶಿಸುವುದು ಅಷ್ಟೇ ಮುಖ್ಯ ಎಂದಿದ್ದಾರೆ.
ಜಿ20 ವಿಚಾರ ಪ್ರಸ್ತಾಪಿಸಿದ ಮಾಜಿ ಪ್ರಧಾನಿ
ಇನ್ನು ಇದೇ ಸಂದರ್ಭದಲ್ಲಿ ಭಾರತ ಈ ಬಾರಿ ಜಿ20 ಅಧ್ಯಕ್ಷತೆ ವಹಿಸಿರುವ ಬಗ್ಗೆ ಪ್ರಸ್ತಾಪ ಮಾಡಿರುವ ಮಾಜಿ ಪ್ರಧಾನಿ, ಭಾರತಕ್ಕೆ ಈ ಅವಕಾಶ ಸಿಕ್ಕಿರುವುದು ಖುಷಿ ನೀಡಿದೆ ಅಂತಾ ಹೇಳಿದ್ದಾರೆ. ಅಲ್ಲದೆ ನನ್ನ ಜೀವಿತಾವಧಿಯಲ್ಲಿ ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಕ್ಕಿರುವುದಕ್ಕೆ ಖುಷಿ ಆಗುತ್ತಿದೆ ಎಂದಿದ್ದಾರೆ. ಮತ್ತೊಂದು ಕಡೆ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಗೈರು ಹಾಜರಾದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್. ಇದು ದುರದೃಷ್ಟಕರ ಎನ್ನುವ ಮೂಲಕ ಚೀನಾ ನಡೆಯ ಕುರಿತು ಬೇಸರ ಹೊರಹಾಕಿದ್ದಾರೆ.
ಒಟ್ನಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹಾಲಿ ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೇ ಭಾರತದ ನೇತೃತ್ವದಲ್ಲಿ ಈಗ ನಡೆಯುತ್ತಿರುವ ಜಿ20 ಶೃಂಗಸಭೆ ಬಗ್ಗೆಯೂ ಸಂತಸ ಸೂಚಿಸಿದ್ದಾರೆ. ಈ ಮೂಲಕ ಭಾರತ ಜಿ20 ಶೃಂಗಸಭೆ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಿದೆ. ಮತ್ತೊಂದು ಕಡೆ ವಿವಿಧ ದೇಶಗಳ ಜಾಗತಿಕ ನಾಯಕರು ಆಧುನಿಕ ಭಾರತದ ಆರ್ಥಿಕತೆ ಕುರಿತು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಇಂದು & ನಾಳೆ ಜಿ20 ಶೃಂಗಸಭೆ ನಡೆಯಲಿದ್ದು ಇನ್ನೂ ಮಹತ್ವದ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ.












Click it and Unblock the Notifications