Manmohan Singh: ದೆಹಲಿಯಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ, AICC ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಬೆಂಗಳೂರು, ಡಿಸೆಂಬರ್ 27: ಭಾರತದ ಮಾಜಿ ಪ್ರಧಾನಿ, ಕಾಂಗ್ರೆಸ್ ಹಿರಿಯ ನಾಯಕ ಮನಮೋಹನ್ ಸಿಂಗ್ ಅವರು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನಾಡಿನ ಗಣ್ಯಾತೀಗಣ್ಯರು ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಏಳು ದಿನ ಶೋಕಾಚರಣೆ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸಚಿವರು, ಸಂಸದರು ದೆಹಲಿಯತ್ತ ಅವರ ಪಾರ್ಥಿವ ಶರೀರ ದರ್ಶನಕ್ಕೆ ತೆರಳುತ್ತಿದ್ದಾರೆ. ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರದ ದರ್ಶನಕ್ಕಾಗಿ ದೆಹಲಿಯ ಎಐಸಿಸಿ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಅವಿಭಜಿತ ಪಂಚಾಜ್ ರಾಜ್ಯದ ಗ್ರಾಮದಲ್ಲಿ ಹುಟ್ಟಿಬೆಳೆದ ಮನಮೋಹನ್ ಸಿಂಗ್ ಅವರು ದೇಶ ಅಭಿವೃದ್ಧಿಗಾಗಿ ಪ್ರಚಾರ ರಾಜಕಾರಣ ಮಾಡದೇ, ಮೌನವಾಗಿದ್ದುಕೊಂಡೇ ಶ್ರಮಿಸಿದವರು. ಅನಾರೋಗ್ಯ ಕಾರಣದಿಂದ ಕೊನೆಯುಸಿರೆಳೆದ ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರವನ್ನು ನಾಳೆ ಶನಿವಾರ ಡಿಸೆಂಬರ್ 28ರಂದು ದೆಹಲಿಯ ಲೂಧಿ ರಸ್ತೆಯಲ್ಲಿರುವ ಸ್ಮಶಾನದಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದೆ.

ಇಂದಿನಿಂದ ನಾಳೆಯವರೆಗೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ಅವರ ಅಂತ್ಯಸಂಸ್ಕಾರ ನೆರಯಲಿದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.
ಕೇಂದ್ರ ಸಚಿವ ಸಂಪುಟ ಸಭೆ
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಬೆಳಗ್ಗೆ 11.30 ಗಂಟೆಗೆ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆ ಬಳಿಕ ಅವರ ಅಂತ್ಯಸಂಸ್ಕಾರ, ಅಂತಿಮ ದರ್ಶನ ಕುರಿತಂತೆ ಮತ್ತಷ್ಟು ಅಧಿಕೃತ ಮಾಹಿತಿಗಳು ಲಭ್ಯವಾಗಲಿವೆ.
ದೇಶಾದ್ಯಂತ ಶೋಕಾಚರಣೆ
ಈಗಾಗಲೇ ಕರ್ನಾಟಕದ ವಿಧಾನಸೌಧ, ದೆಹಲಿ ಪಾರ್ಲಿಮೆಂಟ್ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಶೋಕಾಚರಣೆ ಆಚರಿಸಲಾಗಿದೆ. ತ್ರಿವರ್ಣ ಧ್ವಜವನ್ನು ಅರ್ಧ ಧ್ವಜಸ್ತಂಭದವರೆಗೆ ಮಾತ್ರ ಏರಿಸಿ ಧ್ವಜಾರೋಹಣ ಮಾಡುವ ಮುಖೇನ ಇಂದು ಶುಕ್ರವಾರ ಬೆಳಗ್ಗೆ ಶೋಕಾಚರಣೆ ಆಚರಿಸಲಾಯಿತು.
ಕರ್ನಾಟಕ ಸೇರಿದಂತೆ ದೇಶಾದ್ಯಂತ ಏಳು ದಿನ ಶೋಕಾಚರಣೆ ನಡೆಸಲು ಸರ್ಕಾರ ಆದೇಶಿಸಿದೆ. ಸರ್ಕಾರಿ ಶಾಲೆ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.
ದೇಶದ ಆರ್ಥಿಕತೆಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿದ ಮಹನೀಯರಲ್ಲಿ ಮನಮೋಹನ್ ಸಿಂಗ್ ಅವರು ಸಹ ಅಗ್ರಹಸ್ಥಾನದಲ್ಲಿರುತ್ತಾರೆ. ಎರಡು ಬಾರಿ ಭಾರತದೇ ಪ್ರಧಾನಿ ಹುದ್ದೆ ಅಲಂಕರಿಸಿದ ಅವರು ಪರಿಪೂರ್ಣ ಅವಧಿಗೆ ಆಡಳಿತ ಸೇವೆ ನೀಡಿದವರು. ಶಾಂತಸ್ವಭಾಗದ, ಪ್ರಚಾರದ ಗೀಳಿಗೆ ಬೀಳದೇ ತಮ್ಮ ಕೆಲಸಗಳಿಂದ ಸದ್ದು ಮಾಡಿದ ಕೆಲವೇ ಕೆಲವು ನಾಯಕರಲ್ಲಿ ಮನಮೋಹನ್ ಸಿಂಗ್ ಅವರು ಸಹ ಒಬ್ಬರು. ಅವರ ಅಗಲಿಕೆಯಿಂದ ಕಾಂಗ್ರೆಸ್‌ನಲ್ಲಿ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.












Click it and Unblock the Notifications